ಪಾರ್ಶ್ವವಾಯು ವೇಳೆ ಪೂರ್ತಿ ಕುಗ್ಗಿ ಹೋಗಿದ್ದೆ, ಪತ್ನಿ, ಮಗ ಧೈರ್ಯ ತುಂಬಿದರು: ರಾಘಣ್ಣ ನಾನೂ ಖಿನ್ನತೆಗೆ ಒಳಗಾಗಿದ್ದೆ: ಪಡುಕೋಣೆ ರಾಜಕಾರಣಿಗಳಲ್ಲಿ ಶಾಶ್ವತ ಖಿನ್ನತೆ: ರಮೇಶ್ ಕುಮಾರ್

ಪಾಶ್ರ್ವವಾಯು ಸಮಸ್ಯೆಯಿಂದ ಬಳಲುತ್ತಿದ್ದ ವೇಳೆ ಮಾನಸಿಕ ಖಿನ್ನತೆಗೊಳಗಾಗಿದ್ದು, ಕುಟುಂಬ ಸದಸ್ಯರು ನೀಡಿದ ಸಹಕಾರದಿಂದಾಗಿ ಖಿನ್ನತೆಯಿಂದ ಹೊರಬರಲು ಸಾಧ್ಯವಾಯಿತು ಎಂದು ನಟ ಹಾಗೂ ನಿರ್ಮಾಪಕ ರಾಘ ವೇಂದ್ರ ರಾಜ್‌ಕುಮಾರ್‌ ಅಭಿಪ್ರಾಯಪಟ್ಟಿದ್ದಾರೆ.

‘ವಿಶ್ವ ಆರೋಗ್ಯ ದಿನಾಚರಣೆ' ಪ್ರಯುಕ್ತ ಶನಿವಾರ ನಿಮ್ಹಾನ್ಸ್‌ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದ ವಿಡಿಯೋ ತುಣುಕು ಪ್ರದರ್ಶನಲ್ಲಿ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದ ಅವರು, ಪಾಶ್ರ್ವವಾಯು ಸಮಸ್ಯೆಗೊಳಗಾದ ವೇಳೆ ಸಾಕಷ್ಟುಖಿನ್ನತೆಗೆ ಒಳಗಾದೆ. ಜೀವನದಲ್ಲಿ ಪೂರ್ತಿಯಾಗಿ ಕುಗ್ಗಿ ಹೋಗಿದ್ದೆ. ಈ ಸಂದರ್ಭದಲ್ಲಿ ನನ್ನ ಪತ್ನಿಯು ತಾಯಿಯಾಗಿ, ಮಗನು ತಂದೆಯಂತೆ ಧೈರ್ಯತುಂಬಿ ಖಿನ್ನತೆಯಿಂದ ಹೊರಬರಲು ಕಾರಣರಾದರು ಎಂದು ಹೇಳಿದರು.

ಬಯೋಕಾನ್‌ ಅಧ್ಯಕ್ಷೆ ಕಿರಣ್‌ ಮಜುಂ ದಾರ್‌ ಷಾ ಅವರು ಸಹ ವಿಡಿಯೋ ತುಣುಕಲ್ಲಿ ಖಿನ್ನತೆಯ ಸಮಸ್ಯೆ ಕುರಿತು ಮತ್ತು ಆ ಕಾಯಿಲೆಯಿಂದ ಬಳಲುತ್ತಿರು ವವರಿಗೆ ಬೇಕಾದ ನೆರವಿನ ಕುರಿತು ವಿವರಿಸಿದರು. ಲವ್‌ ಲಿವ್‌ ಆ್ಯಂಡ್‌ ಲಾಫ್‌: ಬಳಿಕ ಮಾತನಾಡಿದ ಬಾಲಿವುಡ್‌ ನಟಿ ದೀಪಿಕಾ ಪಡುಕೋಣೆ, ಪೂರ್ವಾಗ್ರಹ ಪೀಡಿತ, ತಾರತಮ್ಯ ಮತ್ತು ಅನ್ಯಾಯಕ್ಕೊಳಗಾದ ಮಾನಸಿಕ ಖಿನ್ನತೆ ಸಹಜವಾಗಿ ಕಾಣಿಸಿಕೊಳ್ಳಲಿದ್ದು, ಯಾರಿಗೆ, ಯಾವಾಗಲಾದರೂ ಬರಬಹುದಾದ ಕಾಯಿಲೆ ಇದಾಗಿದೆ. ಮಾನಸಿಕ ಖಿನ್ನತೆ ಎಂಬುದು ಯಾವುದೇ ವಯಸ್ಸು, ಹಣ, ಆಸ್ತಿಯನ್ನು ಗಮನಿಸಿ ಬರುವ ಕಾಯಿಲೆಯಲ್ಲ. ಅಪಾಯಕಾರಿ ಕಾಯಿಲೆಯಾಗಿ ರುವ ಖಿನ್ನತೆಯು ಯಾವಾಗಲಾದರೂ, ಯಾರಿಗೆ ಬೇಕಾದದರೂ ಬರಬಹುದು. ಇದೊಂದು ರೀತಿಯ ಅಪಾಯಕಾರಿ ಕಾಯಿಲೆಯಾಗಿದೆ ಎಂದು ತಿಳಿಸಿದರು. ಕೆಲವು ಘಟನೆಗಳಿಂದಾಗಿ ಕಳೆದ ಎರಡು ವರ್ಷಗಳ ಹಿಂದೆ ನಾನು ಸಹ ಖಿನ್ನತೆಕ್ಕೊಳಗಾಗಿದ್ದೆ. ನಾನೂ ಅದರ ನೋವುಂಡಿದ್ದೇನೆ. ಬಳಿಕ ಖಿನ್ನತೆಯಿಂದ ಹೊರಬಂದಿದ್ದು, ಮಾನಸಿಕ ಖಿನ್ನತೆ ಎಷ್ಟೊಂದು ಅಪಾಯಕಾರಿ ಎಂಬುದು ಗೊತ್ತಿದೆ. ಅಲ್ಲದೇ, ಅದರ ಅನುಭವವಾಗಿದೆ. ಮಾನಸಿಕ ಖಿನ್ನತೆಯಿಂದ ಹೊರ ಬಂದ ಬಳಿಕ ಆ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಸಹಾಯ ಹಸ್ತ ಚಾಚಲು 2015ರಲ್ಲಿ ‘ಲವ್‌ ಲಿವ್‌ ಆ್ಯಂಡ್‌ ಲಾಫ್‌' ಎಂಬ ಹೆಸರಲ್ಲಿ ಫೌಂಡೇಷನ್‌ ಆರಂಭಿಸಲಾಗಿದೆ ಎಂದರು. ಫೌಂಡೇಷನ್‌ ಮೂಲಕ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ನಗರ ಮತ್ತು ಗ್ರಾಮೀಣ ಭಾಗದಲ್ಲಿ, ಶಾಲಾ-ಕಾಲೇಜುಗಳಲ್ಲಿ ಕಾರ್ಯಕ್ರಮ ನಡೆಸಲಾಗುತ್ತಿದೆ. ಖಿನ್ನತೆಗೊಳಗಾದವರಿಗೆ ಆತ್ಮೀಯ ಮಾತುಗಳು ಮತ್ತು ಅವರೊಂದಿಗೆ ನಾವಿದ್ದೇವೆ ಎಂಬುದನ್ನು ಮನದಟ್ಟು ಮಾಡಬೇಕಾಗುತ್ತದೆ ಎಂದರು.

ರಾಜಕಾರಣಿಗಳಲ್ಲಿ ಶಾಶ್ವತ ಖಿನ್ನತೆ: ರಮೇಶ್ ಕುಮಾರ್

ರಾಜಕಾರಣಿಗಳು ಒಂದು ರೀತಿಯಲ್ಲಿ ಶಾಶ್ವತ ಖಿನ್ನರಾಗಿದ್ದು, ರಾಜಕಾರಣದ ಪ್ರತಿ ಹಂತದಲ್ಲಿಯೂ ಖಿನ್ನತೆ ಅನುಭವಿಸುತ್ತಾರೆ ಎಂದು ಆರೋಗ್ಯ ಸಚಿವ ರಮೇಶ್‌ ಕುಮಾರ್‌ ತಿಳಿಸಿದ್ದಾರೆ. ವಿಶ್ವ ಆರೋಗ್ಯ ದಿನಾಚರಣೆ ಪ್ರಯುಕ್ತ ಆರೋಗ್ಯ ಇಲಾಖೆ ಮತ್ತು ನಿಮ್ಹಾನ್ಸ್‌ ಸಂಸ್ಥೆ ಜಂಟಿಯಾಗಿ ಶನಿವಾರ ನಿಮ್ಹಾನ್ಸ್‌ ಸಭಾಂಗಣದಲ್ಲಿ ಆಯೋಜಿಸಿದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರತಿಯೊಬ್ಬ ವ್ಯಕ್ತಿಗೂ ಒಂದಲ್ಲ ಒಂದು ರೀತಿಯಲ್ಲಿ ಖಿನ್ನತೆಗೊಳಗುತ್ತಾನೆ. ಅದರಲ್ಲೂ ರಾಜಕಾರಣಿಗಳು ಶಾಶ್ವತ ಖಿನ್ನರಾಗಿರುತ್ತಾರೆ. ಚುನಾವಣೆಗೆ ಟಿಕೆಟ್‌ ಸಿಕ್ಕರೂ ಖಿನ್ನತೆ, ಸಿಗದಿದ್ದರೂ, ಗೆದ್ದರೂ, ಗೆಲ್ಲದಿದ್ದರೂ, ಸಚಿವ ಸ್ಥಾನ ಸಿಗದಿದ್ದರೂ, ಸಚಿವ ಸ್ಥಾನ ಸಿಕ್ಕರೂ ಒಳ್ಳೆಯ ಖಾತೆ ಸಿಗದಿದ್ದರೆ, ಶಾಸಕರಾಗಿ ತಾವು ಗೆದ್ದು ತಮ್ಮ ಪಕ್ಷ ಆಡಳಿತ ಚುಕ್ಕಾಣಿ ಹಿಡಿಯದಿದ್ದರೆ... ಹೀಗೆ ಹಲವು ಕಾರಣಗಳಿಗಾಗಿ ರಾಜಕಾರಣಿಗಳು ಪ್ರತಿಹಂತದಲ್ಲಿಯೂ ಖಿನ್ನತೆಯನ್ನು ಅನುಭವಿಸುತ್ತಾರೆ ಎಂದು ರಮೇಶ್‌ಕುಮಾರ್‌ ಹೇಳಿದಾಗ ಇಡೀ ಸಭಾಂಗಣ ನಗೆಯಲ್ಲಿ ತೇಲಿತು. ಬಹಿರಂಗವಾಗಿ ರಾಜಕಾರಣಿಗಳು ಖಿನ್ನತೆಕ್ಕೊಳಗಾಗಿರುವುದನ್ನು ತೋರ್ಪಡಿಸಿಕೊಳ್ಳುವುದಿಲ್ಲ. ಆದರೆ, ಮಾನಸಿಕವಾಗಿ ನೋವುಂಡಿರುತ್ತಾರೆ. ಅವರ ನೋವು ಅವರಿಗೆ ಮಾತ್ರ ಗೊತ್ತಿರುತ್ತದೆ. ಸಾಮಾನ್ಯರು ಖಿನ್ನತೆಕ್ಕೊಳಗಾಗಿದ್ದರೆ, ಅವರಿಗೆ ಚಿಕಿತ್ಸೆ ನೀಡಿ ಗುಣಮುಖ ಮಾಡಬಹುದು. ರಾಜಕಾರಣಿಗಳು ಇದಕ್ಕೆ ಅಪವಾದವಾಗಿದ್ದು, ಅವರು ಶಾಶ್ವತ ಖಿನ್ನತೆ ಅನುಭವಿಸುತ್ತಾರೆ ಎಂದು ಚಟಾಕಿ ಹಾರಿಸಿದರು.