ಬೆಂಗಳೂರು (ಜೂ.21) :   ‘ರೈಟ್ ನೌ ಐ ಯಾಮ್ ಹೆಲ್ಪ್‌ಲೆಸ್. ಯೂ ಹ್ಯಾವ್ ಟು ಮ್ಯಾನೇಜ್ ಹಿಮ್..!’ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಅವರು ತಮ್ಮ ಪಕ್ಷದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕುರಿತಂತೆ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡರ ಬಳಿ ಹೇಳಿರುವ ಮಾತಿದು. 

ಲೋಕಸಭಾ ಚುನಾವಣೆಯ ಫಲಿತಾಂಶದ ಬಳಿಕ ಇತ್ತೀಚೆಗೆ ದೆಹಲಿಗೆ ತೆರಳಿ ರಾಹುಲ್ ಗಾಂಧಿ ಅವರೊಂದಿಗೆ ಮಾತುಕತೆ ನಡೆಸಿದ ವೇಳೆ ದೇವೇಗೌಡರು, ರಾಜ್ಯದಲ್ಲಿನ ಸಮ್ಮಿಶ್ರ ಸರ್ಕಾರಕ್ಕೆ ಸಂಬಂಧಿಸಿದ ಬೆಳವಣಿಗೆಗಳನ್ನು ಪ್ರಸ್ತಾಪಿಸಿದರು. ಸಿದ್ದರಾಮಯ್ಯ ಅವರ ಬೆಂಬಲಿಗ ಶಾಸಕರೇ ಸರ್ಕಾರಕ್ಕೆ ಇರಿಸುಮುರಿಸು ಉಂಟು ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಅವರನ್ನು ನಿಯಂತ್ರಿಸಬೇಕು ಎಂಬ ವಿಷಯವನ್ನು ಮುಂದಿಟ್ಟರು. ಆದರೆ, ಇದಕ್ಕೆ ಅಚ್ಚರಿಯ ಪ್ರತಿಕ್ರಿಯೆ ವ್ಯಕ್ತಪಡಿಸಿದ ರಾಹುಲ್ ಗಾಂಧಿ, ‘ಸದ್ಯಕ್ಕೆ ನಾನು ಅಸಹಾಯಕನಾಗಿದ್ದೇನೆ. ನೀವೇ ಅವರನ್ನು ನಿಭಾಯಿಸಬೇಕು’ ಎಂದಿದ್ದಾರೆ ಎಂಬ ಕುತೂಹಲಕರ ಮಾಹಿತಿ ಹೊರಬಿದ್ದಿದೆ.

ರಾಹುಲ್ ಅವರಿಂದ ಈ ರೀತಿಯ ಪ್ರತಿ ಕ್ರಿಯೆ ನಿರೀಕ್ಷಿಸಿರದ ದೇವೇಗೌಡರು ಒಂದು ಕ್ಷಣ ವಿಚಲಿತರಾದಂತೆ ಕಂಡು ಬಂದರೂ ನಂತರ ಸಾವರಿಸಿಕೊಂಡು, ಬಂದದ್ದು ಬರಲಿ ಎಂದುಕೊಂಡು ಬೆಂಗಳೂರಿಗೆ ವಾಪಸಾದರು. 

ಅಲ್ಲಿಂದ ಬಂದ ಬಳಿಕ ತಮ್ಮ ಆಪ್ತರ ಜೊತೆ ಸಮಾಲೋಚನೆ ನಡೆಸಿ ಅಧಿಕಾರದಲ್ಲಿ ಇರುವಷ್ಟು ದಿನಗಳಲ್ಲೇ ಪಕ್ಷ ಸಂಘಟನೆಯನ್ನು  ಬಲಪಡಿಸುವ ಬಗ್ಗೆ ರೂಪರೇಷೆ ಸಿದ್ಧಪಡಿಸಲು ನಿರ್ಧರಿಸಿದರು ಎಂದು ತಿಳಿದು ಬಂದಿದೆ. ಅಲ್ಲದೆ, ಸಾಧ್ಯವಾ ದಷ್ಟು ದಿನ ಸಮ್ಮಿಶ್ರ ಸರ್ಕಾರದ ರಥವನ್ನು ಎಳೆಯೋಣ.

ನಮ್ಮಿಂದ ಮೈತ್ರಿ ಧರ್ಮ ಉಲ್ಲಂಘನೆಯಾಗ ದಂತೆ ಎಚ್ಚರಿಕೆ ವಹಿಸೋಣ. ತೀರಾ ಕಷ್ಟ ಎನಿಸಿದಾಗ, ಅಂಥ ಪರಿಸ್ಥಿತಿ ನಿರ್ಮಾಣವಾದರೆ ಮಧ್ಯಂತರ ಚುನಾವಣೆಯನ್ನೇ ಎದುರಿಸಿದರಾಯಿತು ಎಂಬ ಮನಸ್ಥಿತಿಗೆ ಬಂದಿದ್ದಾರೆ ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ. 

ಜೂ.10 ರಂದು ನಡೆದಿದ್ದ ಭೇಟಿ: ಇದೇ ತಿಂಗಳ 10ರಂದು ದೇವೇಗೌಡರು ದಿಢೀರನೆ ದೆಹಲಿಗೆ ತೆರಳಿ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿದ್ದರು. ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರಾಗಿ ನೀವೇ ಮುಂದುವರೆಯಬೇಕು ಎಂದು ಸಮಾ ಧಾನಪಡಿಸುವ ಮಾತುಗಳನ್ನು ಕೆಲಕಾಲ ಆಡಿದ ನಂತರ ಸಹಜವಾಗಿ ರಾಜ್ಯ ರಾಜಕಾರಣದತ್ತ ಚರ್ಚೆ ಹೊರಳಿತು.

ಸಿದ್ದರಾಮಯ್ಯ ಅವರ ಬಗ್ಗೆ ನೇರವಾಗಿ ದೂರು ನೀಡದಿದ್ದರೂ ಪರೋಕ್ಷವಾಗಿ ಅವರ ಕಾರ್ಯವೈಖರಿ ಬಗ್ಗೆ ಗೌಡರು ಅಸಮಾಧಾನ ಹೊರಹಾಕಿದರು. ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಉಭಯ ಪಕ್ಷಗಳ ಸೋಲಿಗೆ ಕಾರಣಗಳೂ ಸೇರಿದಂತೆ ಕಳೆದ ಹಲವು ತಿಂಗಳುಗಳಿಂದ ಆಡಳಿತ ನಡೆ ಸಲು ಎದುರಾಗುತ್ತಿರುವ ತೊಂದರೆಗಳನ್ನು ಗೌಡರು ರಾಹುಲ್ ಅವರಿಗೆ ವಿವರಿಸಿದರು. ಅಂತಿಮವಾಗಿ ಸಿದ್ದರಾಮಯ್ಯ ಅವರನ್ನು ನಿಯಂತ್ರಿಸಿ ಎಂಬ ಅಂಶವನ್ನು ರಾಹುಲ್ ಬಳಿ ಪ್ರಸ್ತಾಪಿಸಿದರು ಎನ್ನಲಾಗಿದೆ.

ಇದಕ್ಕೆ ಪ್ರತಿಕ್ರಿಯಿಸಿದ ರಾಹುಲ್ ಗಾಂಧಿ, ಸದ್ಯದ ಪರಿಸ್ಥಿತಿಯಲ್ಲಿ ನಾನು ಸಿದ್ದರಾಮಯ್ಯ ಅವರನ್ನು ನಿಯಂತ್ರಿಸಲು ಸಾಧ್ಯವಿಲ್ಲ. ಕರ್ನಾಟಕದಲ್ಲಿನ ಜೆಡಿಎಸ್ ಮತ್ತು ಕಾಂಗ್ರೆಸ್ ನೇತೃತ್ವದ ಸಮ್ಮಿಶ್ರ ಸರ್ಕಾರ ಸುಸೂತ್ರವಾಗಿ ನಡೆಯಬೇಕು ಎಂಬುದು ನನ್ನ ಆಶಯ. ಸಿದ್ದರಾಮಯ್ಯ ಹಿರಿಯ ನಾಯಕರು. ಅವರಿಗೆ ಅನುಭವವಿದೆ. ಅವರನ್ನು ನೀವೇ ನಿಭಾಯಿಸಿ. ಈ ವಿಷಯದಲ್ಲಿ ನಾನು ಹೇಳುವುದು ಸರಿಯಾಗಲಿಕ್ಕಿಲ್ಲ ಎಂಬರ್ಥದಲ್ಲಿ ಹೇಳಿದರು ಎಂದು ದೆಹಲಿಯ ಉನ್ನತ ಮೂಲಗಳು ಖಚಿತಪಡಿಸಿವೆ.

ದೇವೇಗೌಡ ಮತ್ತು ರಾಹುಲ್ ಗಾಂಧಿ ನಡುವಿನ ಈ ಭೇಟಿಯ ನಂತರ ಜೆಡಿಎಸ್ ಪಾಳೆಯದಲ್ಲಿನ ಚಿತ್ರಣವೇ ಬದಲಾಗುತ್ತಿದೆ. ಕಳೆದ ಒಂದು ವರ್ಷದಿಂದ ಪ್ರತಿಪಕ್ಷ ಹಾಗೂ ಸಾರ್ವಜನಿಕರಿಂದ ಕೇಳಿಬರುತ್ತಿದ್ದ ಆರೋಪಗಳನ್ನು ಅಲ್ಲಗಳೆಯುವಂತೆ ಆಡಳಿತಕ್ಕೆ ಚುರುಕು ಮೂಡಿಸಲು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮುಂದಾಗಿದ್ದಾರೆ. ಮುಂದಿನ ನಾಲ್ಕು ವರ್ಷಗಳ ಕಾಲ ಸರ್ಕಾರ ಇರುತ್ತದೊ ಬಿಡುತ್ತದೊ ಗೊತ್ತಿಲ್ಲ.  ಆದರೆ, ಇದ್ದಷ್ಟು ಕಾಲದಲ್ಲೇ ಉತ್ತಮ ಅಭಿಪ್ರಾಯ ಮೂಡಿಸಬೇಕು ಎಂಬ ಸಲಹೆಯನ್ನು ದೇವೇಗೌಡರು ಕುಮಾರಸ್ವಾಮಿ ಅವರಿಗೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.