ನವದೆಹಲಿ[ಏ.29]: ವಿವಾದಾತ್ಮಕ ಹೇಳಿಕೆಗಳ ಮೂಲಕವೇ ಸದ್ದು ಮಾಡುವ ಕಾಂಗ್ರೆಸ್‌ನ ಹಿರಿಯ ನಾಯಕ ಮಣಿಶಂಕರ್‌ ಅಯ್ಯರ್‌, 2019ರ ಲೋಕಸಭಾ ಚುನಾವಣೆ ವೇಳೆ ಸುದ್ದಿಯಾಗಿದ್ದು ಕಡಿಮೆ. ಹೀಗಾಗಿ, ಪಾಕಿಸ್ತಾನದ ಬಾಲಾಕೋಟ್‌ನಲ್ಲಿ ಭಾರತ ವಾಯುಪಡೆ ನಡೆಸಿದ ವೈಮಾನಿಕ ದಾಳಿಯಲ್ಲಿ ಸತ್ತಿದ್ದಾರೆ ಎಂಬ ಟ್ರೋಲ್‌ ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ವೈರಲ್‌ ಆಗಿದೆ.

ತಮ್ಮ ಕುರಿತಾದ ಈ ಟ್ರೋಲ್‌ಗೆ ಪ್ರತಿಕ್ರಿಯೆ ನೀಡಿರುವ ಅಯ್ಯರ್‌, ತಾನಿನ್ನೂ ಗಟ್ಟಿಮುಟ್ಟಾಗಿದ್ದೇನೆ ಎಂದು ಹೇಳಿದ್ದಾರೆ. ಈ ಬಗ್ಗೆ ಮಾಧ್ಯಮವೊಂದರ ಜೊತೆ ಮಾತನಾಡಿದ ಅಯ್ಯರ್‌ ಅವರು, ‘ಪಾಕಿಸ್ತಾನದ ಬಾಲಾಕೋಟ್‌ನಲ್ಲಿ ಸಾವನ್ನಪ್ಪಿದ್ದೇನೆ ಎಂಬುದೂ ಸೇರಿದಂತೆ ನನ್ನ ಸಾವಿನ ಕುರಿತ ಹಲವು ವದಂತಿ ಕೇಳಿದ್ದೇನೆ. ಆದರೆ, ನಾನು ಸತ್ತಿದ್ದೇನೆ ಎಂದು ಭಾವಿಸುವವರಿಗೆ ನಾನಿನ್ನೂ ಬದುಕಿದ್ದೇನೆ ಎಂಬುದನ್ನು ತಿಳಿಸಲು ವಿಷಾದಿಸುತ್ತೇನೆ,’ ಎಂದು ತಾವು ಸತ್ತಿದ್ದೇನೆಂಬ ವಿಚಾರವನ್ನು ವೈರಲ್‌ ಮಾಡಿದವರಿಗೆ ತಿರುಗೇಟು ನೀಡಿದ್ದಾರೆ.

2014ರ ಲೋಕಸಭಾ ಹಾಗೂ 2017ರ ವಿಧಾನಸಭೆ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಚಾಯ್‌ವಾಲಾ ಹಾಗೂ ನೀಚ ಎಂದು ಸಂಬೋಧಿಸುವ ಮೂಲಕ ಮಣಿಶಂಕರ್‌ ಅಯ್ಯರ್‌ ಅವರು ವಿವಾದದ ಕೇಂದ್ರಬಿಂದುವಾಗಿದ್ದರು.