ರಮ್ಯಾ ತಾಯಿ ಮಂಡ್ಯ ಲೋಕಸಭಾ ಉಪಚುನಾವಣೆ ಟಿಕೆಟ್ ಆಕಾಂಕ್ಷಿ | ಮಂಡ್ಯದಿಂದ ಟಿಕೆಟ್ ನೀಡುವಂತೆ ವರಿಷ್ಠರಿಗೆ ಮನವಿ 

ಮಂಡ್ಯ (ಅ. 12): ಮಂಡ್ಯ ಲೋಕಸಭಾ ಉಪ ಚುನಾವಣೆಯಲ್ಲಿ ಜೆಡಿಎಸ್‌ ಬೆಂಬಲಿಸುವ ಕಾಂಗ್ರೆಸ್‌ ವರಿಷ್ಠರ ನಿರ್ಧಾರಕ್ಕೆ ಮಾಜಿ ಸಂಸದೆ ರಮ್ಯಾ ಅವರ ತಾಯಿ ರಂಜಿತಾ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಜತೆಗೆ, ಕ್ಷೇತ್ರದಿಂದ ನಾನೂ ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿ, ಈ ಬಾರಿ ಒಂದು ಅವಕಾಶ ನೀಡಿ ಎಂದು ವರಿಷ್ಠರಿಗೆ ಮನವಿ ಮಾಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಪಕ್ಷಕ್ಕೆ ಜಿಲ್ಲೆಯಲ್ಲಿ 5 ಲಕ್ಷ ಮತದಾರಿದ್ದಾರೆ, ಕಾರ್ಯಕರ್ತರಿದ್ದಾರೆ. ಅವರನ್ನೆಲ್ಲ ಅನಾಥರನ್ನಾಗಿ ಮಾಡುವುದು ಬೇಡ. ಈ ಉಪ ಚುಣಾವಣೆಯಲ್ಲಿ ಅಭ್ಯರ್ಥಿ ಹಾಕದಿದ್ದರೆ ಮುಂದಿನ ಸಾರ್ವತ್ರಿಕ ಚುಣಾವಣೆಯಲ್ಲಿ ಗೆಲ್ಲುವುದು ಪಕ್ಷಕ್ಕೆ ಕಷ್ಟವಾಗಲಿದೆ. ಜತೆಗೆ ಕಾಂಗ್ರೆಸ್‌ನ ಅಸ್ವಿತ್ವಕ್ಕೂ ಕುತ್ತುಬರಲಿದೆ. ಹಾಗಾಗಿ ಅಭ್ಯರ್ಥಿ ಹಾಕುವಂತೆ ಎಲ್ಲಾ ಕಾಂಗ್ರೆಸ್‌ ಮುಖಂಡರಿಗೆ ಕರೆಮಾಡಿ ಮನವಿ ಮಾಡಿದ್ದೇನೆ ಎಂದು ಅವರು ತಿಳಿಸಿದರು.

ಜತೆಗೆ, ನಾನು ಸ್ಥಳೀಯ ಕಾಂಗ್ರೆಸ್‌ ಮುಖಂಡರ ಬಳಿ ಮಾತನಾಡಿದ್ದೇನೆ. ನಾನೂ ಟಿಕೆಟ್‌ ಆಕಾಂಕ್ಷಿ, ನನಗೂ ಒಂದು ಅವಕಾಶ ಮಾಡಿ ಕೊಡಿ ಎಂದು ಇದೇ ವೇಳೆ ರಂಜಿತಾ ಅವರು ವರಿಷ್ಠರಿಗೆ ಮನವಿ ಮಾಡಿದರು.