ಬೆಂಗಳೂರು-ಚೆನ್ನೈ 6 ತಾಸಿನ ಪ್ರಯಾಣಕ್ಕೆ ಕೇವಲ 23 ನಿಮಿಷ ಸಾಕು | ಯೋಜನೆ ಕಾರ್ಯಸಾಧುತ್ವ ಪರಿಶೀಲನೆಗೆ ವರ್ಜಿನ್ ಕಂಪನಿ ಜತೆ ಒಪ್ಪಂದ

ಬೆಂಗಳೂರು: ಬೆಂಗಳೂರಿನಿಂದ ಚೆನ್ನೈಗೆ ವಾಹನದಲ್ಲಿ ರಸ್ತೆ ಮೂಲಕ ಹೋಗಲು ಕನಿಷ್ಠ ಆರು ಗಂಟೆ ಬೇಕಾಗುತ್ತದೆ. ಇದರ ಬದಲು ಕೇವಲ 23 ನಿಮಿಷಗಳಲ್ಲಿ ಚೆನ್ನೈ ತಲುಪುವಂತಹ ವ್ಯವಸ್ಥೆ ಬಂದರೆ ಹೇಗಿರುತ್ತದೆ..?!

ಇದನ್ನು ಸಾಧ್ಯವಾಗಿಸುವ ಅತ್ಯಾಧುನಿಕ ಸಾರಿಗೆ ತಂತ್ರಜ್ಞಾನ ಹೈಪರ್‌ಲೂಪ್ ಯೋಜನೆಯನ್ನು ರಾಜ್ಯಕ್ಕೆ ತರುವ ದಿಸೆಯಲ್ಲಿ ರಾಜ್ಯ ಸರ್ಕಾರ ಮುಂದಡಿಯಿಟ್ಟಿದೆ. ಕೇವಲ ಚೆನ್ನೈ ಮಾತ್ರವಲ್ಲ, ತುಮಕೂರು, ಹುಬ್ಬಳ್ಳಿ-ಧಾರವಾಡ ಮತ್ತಿತರ ಪ್ರಮುಖ ನಗರಗಳ ನಡುವೆ ಹೈಪರ್‌ಲೂಪ್ ಸಂಪರ್ಕ ಯೋಜನೆ ಜಾರಿಗೊಳಿಸಲು ಅಗತ್ಯವಾದ ಕಾರ್ಯಸಾಧು ವರದಿ ಪಡೆಯಲು ರಾಜ್ಯ ಸರ್ಕಾರವು ಅಮೆರಿಕದ ‘ವರ್ಜಿನ್ ಹೈಪರ್‌ಲೂಪ್ ಒನ್’ ಕಂಪನಿಯೊಂದಿಗೆ ತಿಳಿವಳಿಕೆ ಒಪ್ಪಂದ ಮಾಡಿಕೊಂಡಿದೆ.

ಕರ್ನಾಟಕ ನಗರಾಭಿವೃದ್ಧಿ ಇಲಾಖೆ ಮತ್ತು ಹೈಪರ್‌ಲೂಪ್ ಕಂಪನಿಗಳ ಮಧ್ಯ ಒಪ್ಪಂದ ಏರ್ಪಟ್ಟಿದ್ದು, ಬೆಂಗಳೂರಿನಲ್ಲಿ ನಡೆಯುತ್ತಿರುವ ಬೆಂಗಳೂರು ಟೆಕ್ ಸಮಾವೇಶ- 2017 ಕಾರ್ಯಕ್ರಮದಲ್ಲಿ ಸುದ್ದಿಗೋಷ್ಠಿಯಲ್ಲಿ ಹೈಪರ್‌ಲೂಪ್ ಕಂಪನಿಯ ನಿಕ್ ಅರ್ಲೆ ಈ ವಿಷಯ ತಿಳಿಸಿದರು.

ಹೈಪರ್‌ಲೂಪ್ ಕೊಳವೆ ಮಾದರಿಯ ಸಾರಿಗೆ ವ್ಯವಸ್ಥೆಯಾಗಿದೆ. ಕ್ಷಣಾರ್ಧದಲ್ಲಿ ಅತ್ಯಂತ ವೇಗವಾಗಿ ಸಂಚಾರ ಸಾಧ್ಯವಾಗಲಿದೆ. ಈ ಯೋಜನೆಯನ್ನು ಪ್ರಮುಖ ನಗರಗಳನ್ನು ಸಂಪರ್ಕಿಸಲು ನಿರ್ಮಿಸಬಹುದಾಗಿದೆ. ಹೈಸ್ಪೀಡ್ ರೈಲಿಗಿಂತ ಕಡಿಮೆ ವೆಚ್ಚದ ಯೋಜನೆ ಇದಾಗಿದೆ ಎಂದರು.

ನಿಮಿಷಗಳಲ್ಲಿ ದೂರದೂರಿಗೆ ಪ್ರಯಾಣ: ಇಂದಿನ ಸಂಚಾರ ವ್ಯವಸ್ಥೆಯಲ್ಲಿ ಜನರು ವರ್ಷಕ್ಕೆ 600 ದಶಲಕ್ಷ ಗಂಟೆಗಳ ಕಾಲ ಪ್ರಯಾಣದಲ್ಲೇ ಕಾಲ ಕಳೆಯುವಂತಹ ಸ್ಥಿತಿಯಿದೆ. ಆದರೆ, ಹೈಪರ್‌ಲೂಪ್ ಯೋಜನೆ ಈ ಪ್ರಯಾಣದ ಅವಧಿಯನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ. ಅಲ್ಲದೆ, ಇದರಿಂದ ಉದ್ಯೋಗಗಳು ಸೃಷ್ಟಿಯಾಗುತ್ತವೆ ಎಂದು ತಿಳಿಸಿದರು.

ಯೋಜನೆ ಕಾರ್ಯಸಾಧುವೇ ಎಂಬುದೂ ಸೇರಿದಂತೆ ಯಾವ ಮಾರ್ಗದಲ್ಲಿ ಜಾರಿಗೆ ತರಬಹುದು ಎಂಬ ಬಗ್ಗೆ ಅಧ್ಯಯನ ಮಾಡಿ ಆರು ವಾರಗಳಲ್ಲಿ ವರದಿ ಸಲ್ಲಿಸಲಾಗುವುದು ಎಂದು ನಿಕ್ ಅರ್ಲೆ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಸದ್ಯ ಯೋಜನೆ ಕಾರ್ಯಸಾಧುವೇ ಎಂಬುದನ್ನು ಪರಿಶೀಲಿಸುವ ಬಗ್ಗೆ ಮಾತ್ರ ಒಪ್ಪಂದ ಮಾಡಿಕೊಳ್ಳಲಾಗಿದೆ. ವರದಿ ಬಂದ ನಂತರ ಸರ್ಕಾರ ಯೋಜನೆ ಜಾರಿಗೊಳಿಸುವ ಬಗ್ಗೆ ಚಿಂತನೆ ಮಾಡಲಿದೆ ಎಂದು ಐಟಿ, ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು.