ಲಿಫ್ಟ್‌ ಕಿಂಡಿಯಲ್ಲಿ ಕಾಲು ಸಿಲುಕಿ 9ರ ಬಾಲಕಿ ಸಾವು!| ಹೈದರಾಬಾದ್‌ನ ದಾರುಣ ಘಟನೆ| ಹಸ್ತಿನಾಪುರಂ ಪ್ರದೇಶದಲ್ಲಿರುವ ಮೂರು ಅಂತಸ್ತಿನ ಮನೆಯಲ್ಲಿ ಘಟನೆ 

ಹೈದರಾಬಾದ್‌[ಅ.20]: ಮೂರನೇ ಮಹಡಿಯಲ್ಲಿರುವ ಮನೆಗೆ ಹೋಗಲು ಲಿಫ್ಟ್‌ ಹತ್ತುವಾಗ ಕಾಲು ಸಿಕ್ಕಿಹಾಕಿಕೊಂಡಿದ್ದರಿಂದ 9 ವರ್ಷದ ಬಾಲಕಿಯೊಬ್ಬಳು ಸಾವನ್ನಪ್ಪಿದ ಮನಕಲುಕುವ ಘಟನೆ ಹೈದರಾಬಾದ್‌ ಹೊರವಲಯದಲ್ಲಿ ನಡೆದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಹಸ್ತಿನಾಪುರಂ ಪ್ರದೇಶದಲ್ಲಿರುವ ಮೂರು ಅಂತಸ್ತಿನ ಮನೆಯಲ್ಲಿ ಈ ಘಟನೆ ನಡೆದಿದೆ. ಬಾಲಕಿ ಲಾಸ್ಯಾ ಯಾದವ್‌ ಎಂಬಾಕೆ ಶುಕ್ರವಾರ ಮಧ್ಯಾಹ್ನ 12.30ರ ಸಮಯದಲ್ಲಿ ಮೂರನೇ ಮಹಡಿಗೆ ತೆರಳುವಾಗ ಲಿಫ್ಟ್‌ನ ಬಾಗಿಲು ಮತ್ತು ಲಿಫ್ಟ್‌ ಚಲಿಸುವ ಡಕ್ಟ್ ಮಧ್ಯೆ ಇರುವ ಕಿರಿದಾದ ಜಾಗದಲ್ಲಿ ಕಾಲು ಸಿಕ್ಕಿಹಾಕಿಕೊಂಡಿತ್ತು. ಬಾಲಕಿ ಕಾಲನ್ನು ಹೊರಗೆಳೆಯಲು ಯತ್ನಿಸುತ್ತಿದ್ದ ವೇಳೆ ವೇಳೆ ಮೂರನೇ ಮಹಡಿಯಲ್ಲಿ ಯಾರೋ ಒಬ್ಬರು ಕೆಳಗೆ ಇಳಿಯಲು ಲಿಫ್ಟ್‌ನ ಬಟನ್‌ ಒತ್ತಿದ್ದರು. ಹೀಗಾಗಿ ಲಿಫ್ಟ್‌ ಮೇಲೆ ಚಲಿಸಿದ್ದು, ಹೊರಗಿನ ಬಾಗಿಲು ತೆರೆದುಕೊಂಡೇ ಬಾಲಕಿಯನ್ನು ಉಜ್ಜಿಕೊಂಡು ಹೋಗಿದೆ.

ತಕ್ಷಣವೇ ಬಾಲಕಿಯ ತಂದೆ ಆ್ಯಂಬುಲೆನ್ಸ್‌ ಸೇವೆ ಹಾಗೂ ಲಿಫ್ಟ್‌ ನಿರ್ವಹಣಾ ಸಿಬ್ಬಂದಿಗೆ ಕರೆ ಮಾಡಿದ್ದರು. ಸ್ಥಳಕ್ಕೆ ಆಗಮಿಸಿದ ಸಿಬ್ಬಂದಿ ಲಿಫ್ಟ್‌ ಮಧ್ಯದಲ್ಲಿ ಸಿಲಿಕಿಕೊಂಡಿದ್ದ ಲಾಸ್ಯಾಳನ್ನು 2 ಗಂಟೆಯ ಕಾರ್ಯಾಚರಣೆಯ ಬಳಿಕ ಹೊರತೆಗೆದು, ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಬದುಕಿ ಉಳಿಯಲಿಲ್ಲ.

ಸುರಕ್ಷತಾ ಮಾನದಂಡಗಳನ್ನು ಬಳಸದೇ ಕಳಪೆ ಗುಣಮಟ್ಟದ ಲಿಫ್ಟ್‌ ನಿರ್ಮಿಸಿದ್ದೇ ಘಟನೆಗೆ ಕಾರಣ ಎಂಬ ಆರೋಪ ಕೇಳಿ ಬಂದಿದೆ. ಇದೊಂದು ಆಕಸ್ಮಿಕ ಮರಣ ಎಂದು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.