ಕೋಲ್ಕತ್ತಾ ಮೂಲದ ಮುಜು ಎಂಬ ಕಾಂಟ್ರಾಕ್ಟರ್ ಬಳಿ ದಂಪತಿ ಕೆಲಸ ಮಾಡ್ತಾ ಇದ್ದರು. ಈ ವೇಳೆ ಕಾಂಟ್ರಾಕ್ಟರ್  ಮುಜು, ಕೆಲಸಗಾರನ ಹೆಂಡತಿಯ ಮೇಲೆ ಕಣ್ಣು ಹಾಕಿದ್ದ. ಅಲ್ಲದೆ ಲೈಂಗಿಕ ಸಂಬಂಧಕ್ಕೂ ಪುಸಲಾಯಿಸಿದ್ದಾನೆ.

ಬೆಂಗಳೂರು (ಜ.18): ಲೈಂಗಿಕ ಸಂಬಂಧಕ್ಕೆ ಸಹಕರಿಸಲಿಲ್ಲ ಎಂಬ ಕಾರಣಕ್ಕೆ ಮಹಿಳೆಯ ಗಂಡನನ್ನೇ ಅಪಹರಿಸಿರುವ ಘಟನೆ ಬೆಂಗಳೂರಿನ ಬಾಣಸವಾಡಿಯಲ್ಲಿ ಬೆಳಕಿಗೆ ಬಂದಿದೆ.

ಪತಿಯ ಅಪಹರಣದಿಂದ ನೊಂದ ಪತ್ನಿ ಮಗುವಿನೊಂದಿಗೆ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಕೋಲ್ಕತ್ತಾ ಮೂಲದ ಮುಜು ಎಂಬ ಕಾಂಟ್ರಾಕ್ಟರ್ ಬಳಿ ದಂಪತಿ ಕೆಲಸ ಮಾಡ್ತಾ ಇದ್ದರು. ಈ ವೇಳೆ ಕಾಂಟ್ರಾಕ್ಟರ್ ಮುಜು, ಕೆಲಸಗಾರನ ಹೆಂಡತಿಯ ಮೇಲೆ ಕಣ್ಣು ಹಾಕಿದ್ದ. ಅಲ್ಲದೆ ಲೈಂಗಿಕ ಸಂಬಂಧಕ್ಕೂ ಪುಸಲಾಯಿಸಿದ್ದಾನೆ.

ಆದರೆ ಮಾಲಾ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಳು. ಇದಕ್ಕೆ ಪ್ರತಿಕಾರ ತೀರಿಸಿಕೊಳ್ಳಲು ಮಜು, ಗೌತಮ್, ಸಂಜಯ್ ಸೇರಿದಂತೆ 6 ಜನರ ತಂಡ ಆಕೆಯ ಪತಿಯನ್ನೇ ಜನವರಿ 11ರಂದು ಅಪಹರಿಸಿದ್ದಾರೆ. ಪತಿ ನಾಪತ್ತೆ ಬಗ್ಗೆ ಪತ್ನಿ ಮಾಲಾ ಬಾಣಸವಾಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಳು.

ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಆರೋಪಿಗಳನ್ನು ಬಂಧಿಸಿ ಬಿಡುಗಡೆ ಮಾಡಿದ್ದರು. ಆದರೆ ಅಪಹರಣಗೊಂಡಿರುವ ಪತಿ​ ಮಾತ್ರ ಪತ್ತೆಯಾಗಿಲ್ಲ. ಇದರಿಂದ ನೊಂದ ಪತ್ನಿ ತನ್ನ ಮಗುವಿನ ಜೊತೆ ಆತ್ಮಹತ್ಯೆಗೆ ಯತ್ನಿಸಿದ್ದಾಳೆ.