ಪ್ರಕೃತಿ ವಿಕೋಪದ ಹೆಸರಲ್ಲಿ ಪರಿಸರ ಬ್ಯಾಲೆನ್ಸ್ ಮಾಡುವ ವಸುಧೆ| ವಸುಧೆ ಬಳಿ ಇವೆ ಹತ್ತು ಹಲವು ವಿನಾಶಕಾರಿ ಬತ್ತಳಿಕೆಗಳು| ಮಲೇಷ್ಯಾದ ಪೆನಾಂಗ್ ದ್ವೀಪದಲ್ಲಿ ಭಾರೀ ಜಲಸ್ಫೋಟ| ಜೀವಜಲದ ರುದ್ರನರ್ತನಕ್ಕೆ ದ್ವೀಪದಲ್ಲಿ ಭಾರೀ ಭೂಕುಸಿತ|
ಪೆನಾಂಗ್(ಏ.02): ಪ್ರಕೃತಿ ವಿನಾಶಕ್ಕೆ ಮನುಷ್ಯ ಎಂಬ ಪ್ರಾಣಿ ಕೊಟ್ಟಷ್ಟು ಕೊಡುಗೆ ಮತ್ತಿನ್ಯಾವ ಜೀವರಾಶಿಯೂ ನೀಡಿಲ್ಲ. ನಿತ್ಯವೂ ಪ್ರಕೃತಿ ಮೇಲೆ ಗದಾಪ್ರಹಾರ ಮಾಡುವ ಮನುಷ್ಯ ವಸುಧೆಯನ್ನು ನಿತ್ಯವೂ ಹರಿದು ತಿನ್ನುತ್ತಿದ್ದಾನೆ.
ಆದರೆ ಭೂಮಿಗೂ ತಾಳ್ಮೆ ಇದೆ. ತಾಳ್ಮೆಯು ಮೀತಿ ಮೀರಿದಾಗ ಪ್ರಕೃತಿ ವಿಕೋಪದ ಹೆಸರಲ್ಲಿ ಭೂಮಿ ಮತ್ತೆ ಪರಿಸರವನ್ನು ಬ್ಯಾಲೆನ್ಸ್ ಮಾಡುತ್ತದೆ. ಆದರೆ ಭೂಮಿಯ ಬತ್ತಳಿಕೆಯಲ್ಲಿರುವ ಪ್ರಕೃತಿ ವಿಕೋಪಗಳು ಒಂದೇ ಎರಡೇ?
ಭೂಕಂಪ, ಜ್ವಾಲಾಮುಖಿ, ಸುನಾಮಿ, ಚಂಡಮಾರುತ, ನೆರೆ ಹೀಗೆ ವಸುಧೆ ಬಳಿ ಹತ್ತು ಹಲವು ವಿನಾಶಕಾರಿ ಬತ್ತಳಿಕೆಗಳಿವೆ. ಮಾನವ ನಿರ್ಮಿತ ಯಾವುದೇ ಅಣ್ವಸ್ತ್ರ ಬತ್ತಳಿಕೆಯೂ ಇವಕ್ಕೆ ಸರಿಸಮಾನವಾಗಲಾರದು.
ಅದರಂತೆ ಮಲೇಷ್ಯಾದ ಪೆನಾಂಗ್ ದ್ವೀಪದಲ್ಲಿ ಭಾರೀ ಜಲಸ್ಫೋಟ ಸಂಭವಿಸಿದ್ದು, ನೀರಿನ ರುದ್ರನರ್ತನಕ್ಕೆ ದ್ವೀಪದಲ್ಲಿ ಭಾರೀ ಭೂ ಕುಸಿತ ಸಂಭವಿಸಿದೆ. ಸಮುದ್ರದಲ್ಲಿ ಏಕಾಏಕಿ ಜಲಸ್ಫೋಟಗೊಂಡಿದ್ದು, ಭಾರೀ ವೇಗದಲ್ಲಿ ಬಂದು ಭೂಮಿಗೆ ಅಪ್ಪಳಿಸಿದೆ.
ಏಕಾಏಕಿ ಸಂಭವಿಸಿದ ಜಲಸ್ಫೋಟದಿಂದ ಜನ ಭಯಭೀತರಾಗಿದ್ದು, ಕಡಲಿಗೆ ಬಂದು ಹೊಡೆದ ಪರಿಣಾಮವಾಗಿ ಪೆನಾಂಗ್ ದ್ವೀಪದಲ್ಲಿ ಭೂಕುಸಿತ ಉಂಟಾಗಿದೆ.
ಇನ್ನು ಪೆನಾಂಗ್ ನಲ್ಲಿ ಸಂಭವಿಸಿದ ಜಲಸ್ಫೋಟದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಪ್ರಕೃತಿ ವಿಸ್ಮಯಕ್ಕೆ ಮಾನವ ಮೂಕವಿಸ್ಮಿತನಾಗಿದ್ದಾನೆ.
