ಮಯೂರ ಹೆಗಡೆ

  ಹುಬ್ಬಳ್ಳಿ [ಆ.15]:  ಜಮ್ಮು ಕಾಶ್ಮೀರದಲ್ಲಿದ್ದ 370ನೇ ವಿಧಿ ರದ್ದಾದ ಬಳಿಕ ಇದೇ ಮೊದಲ ಬಾರಿಗೆ ಹುಬ್ಬಳ್ಳಿಯ ಬೆಂಗೇರಿಯಲ್ಲಿ ಸಿದ್ಧವಾದ ತ್ರಿವರ್ಣ ಧ್ವಜವೂ ಹಾರಿದೆ. ಈಗಾಗಲೇ ತಿರಂಗಾ ಜಮ್ಮು ತಲುಪಿದ್ದು, ಸ್ವಾತಂತ್ರ್ಯ ದಿನಾಚರಣೆಯಂದು ಹಿಮಾಲಯದಲ್ಲಿ ಕಣಿವೆ ರಾಜ್ಯದಲ್ಲಿ ವಿಜೃಂಭಿಸಿ ಭಾರತದ ಸಾರ್ವಭೌಮತ್ವವನ್ನ ಸಾರಲಾಗಿದೆ.

ಸ್ವಾತಂತ್ರ್ಯದ 72 ವರ್ಷದ ಬಳಿಕ ಜಮ್ಮುವಿನಲ್ಲಿ ತಿರಂಗಾ ಹಾರುತ್ತಿದ್ದು, ಬೆಂಗೇರಿಯಲ್ಲಿರುವ ಕರ್ನಾಟಕ ಖಾದಿ ಗ್ರಾಮೋದ್ಯೋಗ ಸಂಯುಕ್ತ ಸಂಘದಲ್ಲಿ ಸಂಪೂರ್ಣವಾಗಿ ಮಹಿಳೆಯರೇ ಸಿದ್ಧಪಡಿಸಿದ ಬಾವುಟಗಳು ಇಲ್ಲಿಂದ ದೆಹಲಿ ಖಾದಿ ಭವನದ ಮೂಲಕ ಜಮ್ಮುವಿಗೆ ಪೂರೈಕೆಯಾಗಿದೆ. ಜಮ್ಮುವಿನಲ್ಲಿ ಹಾರಲಿರುವ ಬಾವುಟ ರಾಜ್ಯದಲ್ಲಿ ಅದರಲ್ಲೂ ಗಂಡು ಮೆಟ್ಟಿದ ನಾಡೆಂದು ಕರೆಯಲ್ಪಡುವ ಹುಬ್ಬಳ್ಳಿಯಲ್ಲಿ ಸಿದ್ಧವಾಗಿರುವುದು ಹೆಮ್ಮೆಯ ಸಂಗತಿ.

ಕರ್ನಾಟಕ ಪ್ರವಾಹದ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಗುರುವಾರ ನಡೆಯುವ 73ನೇ ಸ್ವಾತಂತ್ರ್ಯ ದಿನಾಚರಣೆಗಾಗಿ ದೆಹಲಿ ಖಾದಿ ಭವನ ಹಾಗೂ ಶಿಮ್ಲಾ ಕರ್ನಾಟಕ ಖಾದಿ ಗ್ರಾಮೋದ್ಯೋಗ ಸಂಯುಕ್ತ ಸಂಘವು ನೂರಾರು ಬಾವುಟಗಳನ್ನು ತರಿಸಿಕೊಂಡಿವೆ. ಈ ಬಾರಿ 1.80 ಲಕ್ಷ ರು. ಮೌಲ್ಯದ  ಬಾವುಟಗಳು ಅಲ್ಲಿಂದ ಪೂರೈಕೆ ಮಾಡಿದ್ದೇವೆ. ಅಲ್ಲಿಂದ ಜಮ್ಮುವಿಗೆ ಬಾವುಟಗಳು ರವಾನೆ ಆಗುತ್ತವೆ ಎಂದು ಸಂಘದ ವ್ಯವಸ್ಥಾಪಕಿ ಅನ್ನಪೂರ್ಣಾ ಕೋಟಿ ತಿಳಿಸಿದರು.

2006ರಿಂದ ಇಲ್ಲಿ ಧ್ವಜ ನಿರ್ಮಾಣವಾಗುತ್ತಿದ್ದು ಒಂದೇ ಕೇಂದ್ರದಲ್ಲಿ ಬಟ್ಟೆ, ಬ್ಲಿಚಿಂಗ್‌ ಮಾಡಿ ಧ್ವಜ ನಿರ್ಮಿಸುವ ದೇಶದ ಏಕೈಕ ಸಂಸ್ಥೆ ಎಂಬ ಹೆಗ್ಗಳಿಕೆಗೆ ಈ ಖಾದಿ ಗ್ರಾಮೋದ್ಯೊಗ ಸಂಘದ್ದಾಗಿದೆ.