ಬೆಂಗಳೂರು :  ಅರಣ್ಯ ಭೂಮಿಯನ್ನು ಅರಣ್ಯೇತರ ಚಟುವಟಿಕೆಗೆ ನೀಡಲು ಪರಿಸರ ತಜ್ಞರು ವಿರೋಧಿಸುತ್ತಿರುವ ಬೆನ್ನಲ್ಲೇ ಪಶ್ಚಿಮಘಟ್ಟದ ದಟ್ಟಕಾನನದಲ್ಲಿ ಹಾದುಹೋಗುವ ಹುಬ್ಬಳ್ಳಿ-ಅಂಕೋಲ ರೈಲು ಮಾರ್ಗಕ್ಕೆ ಅರಣ್ಯ ಭೂಮಿ ಮಂಜೂರು ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ.

1999ರಲ್ಲಿ ಶಂಕು ಸ್ಥಾಪನೆಗೊಂಡ ಈ ಯೋಜನೆಯಿಂದ ವನ್ಯ ಜೀವಿಗಳಿಗೆ ತೊಂದರೆಯಾಗಲಿದೆ ಎಂಬ ಕಾರಣಕ್ಕೆ ವಿಳಂಬವಾಗಿತ್ತು. ಹುಲಿ ಸಂರಕ್ಷಿತ ಪ್ರದೇಶ ಮತ್ತು ಆನೆ ಕಾರಿಡಾರ್‌ನಲ್ಲಿ ಈ ರೈಲು ಮಾರ್ಗ ಹಾದು ಹೋಗಲಿದೆ. ಯೋಜನೆ ಪ್ರಾರಂಭವಾದರೆ ಅವುಗಳ ಜೀವಕ್ಕೆ ಕುತ್ತುಂಟಾಗುತ್ತದೆ ಎಂದು ಪರಿಸರ ಸಂಘಟನೆಗಳು, ಸಾರ್ವಜನಿಕರು, ತಜ್ಞರು ಈ ಯೋಜನೆಗೆ ತೀವ್ರ ವಿರೋಧ ಪಡಿಸಿದ್ದರು. ಇದೇ ಕಾರಣದಿಂದ ಕೇಂದ್ರ ಪರಿಸರ ಇಲಾಖೆ, ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರವೂ ಸಹ ಯೋಜನೆ ಕೈ ಬಿಡಲು ಸೂಚನೆ ನೀಡಿತ್ತು. ಅಲ್ಲದೆ, ಈ ಸಂಬಂಧದ ಪ್ರಕರಣ ಸುಪ್ರೀಂಕೋರ್ಟ್‌ನಲ್ಲಿ ವಿಚಾರಣಾ ಹಂತದಲ್ಲಿದೆ. ಆದರೂ, ಉತ್ತರ ಕನ್ನಡ ಜಿಲ್ಲೆ ವ್ಯಾಪ್ತಿಯ ಪಶ್ಚಿಮಘಟ್ಟದಲ್ಲಿ ಸುಮಾರು 1,470ಕ್ಕೂ ಹೆಚ್ಚು ಎಕರೆ ಜಮೀನನ್ನು ರೈಲು ಮಾರ್ಗಕ್ಕಾಗಿ ನೀಡಲು ಅರಣ್ಯ ಇಲಾಖೆ ನಿರ್ಧರಿಸಿದೆ.

ಜ.9ರಂದು ಸಭೆ:  ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅಧ್ಯಕ್ಷತೆಯಲ್ಲಿ ಜ.9ರಂದು ರಾಜ್ಯ ವನ್ಯಜೀವಿ ಮಂಡಳಿಯ 11ನೇ ಸಭೆ ನಿಗದಿಯಾಗಿದೆ. ಸಭೆಯ ಕಾರ್ಯಸೂಚಿಯಲ್ಲಿ ಹುಬ್ಬಳ್ಳಿ-ಅಂಕೋಲ ನಡುವಿನ ರೈಲು ಮಾರ್ಗ ನಿರ್ಮಾಣಕ್ಕೆ ಕಾರವಾರ, ಯಲ್ಲಾಪುರ ಮತ್ತು ಧಾರವಾಡ ವ್ಯಾಪ್ತಿಗೆ ಒಳಪಡುವ ಸುಮಾರು 595.64 ಹೆಕ್ಟೇರ್‌ (1,470ಕ್ಕೂ ಎಕರೆಗೂ ಹೆಚ್ಚು ಭೂಮಿ) ಅರಣ್ಯ ಭೂಮಿಯನ್ನು ಅರಣ್ಯೇತರ ಉದ್ದೇಶಕ್ಕೆ ಮಂಜೂರು ಮಾಡುವ ವಿಷಯವನ್ನು ಸೇರಿಸಲಾಗಿದೆ.

ಫೆ.2ರಂದು ಪ್ರತಿಭಟನೆ:  ಅರಣ್ಯ ಮತ್ತು ವನ್ಯಜೀವಿ ಸಂಪತ್ತನ್ನು ಉಳಿಸುವ ಸಲುವಾಗಿ ಕಳೆದ 20 ವರ್ಷಗಳಿಂದ ಹೋರಾಡಲಾಗುತ್ತಿದೆ. ಕೇಂದ್ರ ಪರಿಸರ ಇಲಾಖೆಯೂ ಈ ಯೋಜನೆಗೆ ವಿರೋಧ ವ್ಯಕ್ತಪಡಿಸಿದೆ. ಆದರೆ, ಕೆಲವು ಅರಣ್ಯ ಇಲಾಖೆ ಅಧಿಕಾರಿಗಳು ಯೋಜನೆ ಭೂಮಿ ನೀಡಲು ಮುಂದಾಗುತ್ತಿದ್ದು, ಇದಕ್ಕೆ ಅವಕಾಶ ನೀಡಬಾರದು ಎಂದು ಯುನೈಟೆಡ್‌ ಕನ್ಸರ್‌ವೇಷನ್‌ ಮೂಮೆಂಟ್‌ ಸಂಘಟನೆ ಒತ್ತಾಯಿಸಿದೆ. ಈ ಸಂಬಂಧ ಮಂಗಳವಾರ (ಜ.8)ದಿಂದ ಸಾಮಾಜಿಕ ಜಾಲಾತಾಣಗಳಲ್ಲಿ ಅಭಿಯಾನ ಪ್ರಾರಂಭಿಸಲಾಗುವುದು. ಆ ಮೂಲಕ ರಾಜ್ಯಾದ್ಯಂತ ಪರಿಸರ ಪ್ರೇಮಿಗಳನ್ನು ಒಗ್ಗೂಡಿಸಿ ಫೆ.2ರಂದು ಬೃಹತ್‌ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಸಂಘಟನೆ ತಿಳಿಸಿದೆ.

ರಾಹುಲ್‌ ಗಾಂಧಿಗೆ ಪತ್ರ:  ಹುಬ್ಬಳ್ಳಿ - ಅಂಕೋಲ ರೈಲು ಮಾರ್ಗ ನಿರ್ಮಾಣದಿಂದ ಆನೆಗಳು ಹಾಗೂ ಹುಲಿಗಳ ಜೀವಕ್ಕೆ ತೊಂದರೆಯಾಗಲಿದೆ. 21 ಲಕ್ಷ ಮರಗಳಿಗೆ ಕೊಡಲಿ ಪೆಟ್ಟು ಬೀಳಲಿದ್ದು, ಅರಣ್ಯಕ್ಕೆ ದೊಡ್ಡ ಮಟ್ಟದ ಹಾನಿಯಾಗಲಿದೆ. ನೈಸರ್ಗಿಕ ವಿಕೋಪಗಳು ಎದುರಾಗುವ ಸಾಧ್ಯತೆಯಿದೆ. ಹೀಗಾಗಿ ಯೋಜನೆ ಜಾರಿಗೆ ತರಲು ಮುಂದಾಗಿರುವ ಸಮ್ಮಿಶ್ರ ಸರ್ಕಾರದ ಯತ್ನವನ್ನು ತಡೆಯಬೇಕು ಎಂದು ಪರಿಸರ ಪ್ರೇಮಿಗಳು ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಅವರಿಗೆ ಪತ್ರ ಬರೆದಿದ್ದಾರೆ.

ಪಶ್ಚಿಮ ಘಟ್ಟಗಳ ಅರಣ್ಯದಲ್ಲಿ ಅಭಿವೃದ್ಧಿ ಕೆಲಸ ಮಾಡುವುದು ತಪ್ಪು. ಹುಬ್ಬಳ್ಳಿ-ಅಂಕೋಲ ರೈಲು ಮಾರ್ಗ ನಿರ್ಮಾಣವಾಗಬಾರದು ಎಂದು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರವೂ ಸೇರಿದಂತ ಪರಿಸರ ಪ್ರೇಮಿಗಳ ಆಗ್ರಹವಾಗಿದೆ. ಈ ಭಾಗದಲ್ಲಿ ರೈಲು ಮಾರ್ಗ ನಿರ್ಮಿಸುವುದಕ್ಕೆ ನಮ್ಮ ವಿರೋಧವಿದೆ.

- ಉಲ್ಲಾಸ್‌ ಕಾರಂತ್‌, ವನ್ಯಜೀವಿ ತಜ್ಞ