ನವದೆಹಲಿ[ಜು.17]: ಕರ್ನಾಟಕದ ವಿಧಾನಸಭಾ ಚುನಾವಣೆಯಲ್ಲಿ ಒಂದು ಅಂದಾಜಿನ ಪ್ರಕಾರ 5500ರಿಂದ 6000 ಕೋಟಿವರೆಗೆ ಖರ್ಚಾಗಿದೆಯಂತೆ. ಎರಡು ರಾಷ್ಟ್ರೀಯ ಪಕ್ಷಗಳು ತಲಾ 700ರಿಂದ 800 ಕೋಟಿವರೆಗೆ ಪ್ರಚಾರ, ಪಾರ್ಟಿ ಫಂಡ್‌ಗಾಗಿ ಖರ್ಚು ಮಾಡಿದ್ದು, ಪ್ರಾದೇಶಿಕ ಪಕ್ಷ ಜೆಡಿಎಸ್ ಕೂಡ 200ರಿಂದ 300 ಕೋಟಿವರೆಗೆ ಖರ್ಚು ಮಾಡಿರುವ ಬಗ್ಗೆ ಅಂದಾಜು ಮಾಡಲಾಗಿದೆ. ಇದನ್ನು ಬಿಟ್ಟು ಅಭ್ಯರ್ಥಿಗಳು 3000 ಕೋಟಿವರೆಗೆ ಹಣ ಖರ್ಚು ಮಾಡಿರುವ ಬಗ್ಗೆ ಅಂದಾಜಿದೆ.

ಇದನ್ನೆಲ್ಲ ಲೆಕ್ಕ ಹಾಕಿರುವ ಕೆಲ ಚುನಾವಣಾ ತಜ್ಞರು ಸರ್ಕಾರಿ ಖರ್ಚಿನಲ್ಲಿಯೇ ಚುನಾವಣೆ ಜೊತೆಗೆ ಪ್ರಚಾರಕ್ಕೂ ಚುನಾವಣಾ ಆಯೋಗವೇ ಹಣ ಕೊಡುವ ಬಗ್ಗೆ ಪ್ರಸ್ತಾಪ ಮಾಡುತ್ತಿದ್ದು, ಕಪ್ಪು
ಹಣದ ಚಲಾವಣೆ ಕಡಿಮೆ ಆಗಿ 1500 ಕೋಟಿಯಲ್ಲಿ ಇಡೀ ವಿಧಾನಸಭಾ ಚುನಾವಣೆ ಮತ್ತು ಪ್ರಚಾರ ಮುಗಿಸಬಹುದಂತೆ. 

ಕಾಂಗ್ರೆಸ್ ಉಸ್ತುವಾರಿ ಬದಲಿ?

ಕರ್ನಾಟಕದ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲರನ್ನು ಬದಲಿಸಿ ಹಿರಿಯರಾದ ಗುಲಾಂ ನಬಿ ಅಜಾದ್ ಅವರನ್ನು ಉಸ್ತುವಾರಿಯನ್ನಾಗಿ ನೇಮಿಸುವ ಸಂಕೇತಗಳು ಸಿಗುತ್ತಿವೆ. ಕೇರಳದಲ್ಲಿ ಲೋಕಸಭಾ ಚುನಾವಣೆ ಎದುರಿಸಲಿರುವ ವೇಣುಗೋಪಾಲರಿಗೆ ಸಮಯ ಕೊಡಬೇಕು ಎನ್ನುವ ದೃಷ್ಟಿಯಿಂದ ಕೂಡ ಉಸ್ತುವಾರಿ ಬದಲಿಸುವ ಬಗ್ಗೆ ಚಿಂತನೆ ನಡೆದಿದೆ. 

ಸಮ್ಮಿಶ್ರ ಸರ್ಕಾರ ರಚನೆ ಆಗಿರುವುದರಿಂದ ದೇವೇಗೌಡರ ಕುಟುಂಬದ ಜೊತೆಗೆ ಮಾತುಕತೆ ದೃಷ್ಟಿಯಿಂದ ಕೂಡ ಹಿರಿಯರನ್ನು ನೇಮಿಸುವ ಪ್ರಸ್ತಾಪವಿದ್ದು, ಆದರೆ ಯಾವಾಗ ಎನ್ನುವ
ಪ್ರಶ್ನೆಗೆ ಇದುವರೆಗೂ ಖಚಿತ ಉತ್ತರ ಸಿಗುತ್ತಿಲ್ಲ.

[ಕನ್ನಡಪ್ರಭ : ಪ್ರಶಾಂತ್ ನಾತು ಅವರ ಇಂಡಿಯಾ ಗೇಟ್ ಅಂಕಣದ ಆಯ್ದ ಭಾಗ ]