ತಿರುವನಂತಪುರ (ಆ. 23): ಪ್ರತಿ ವರ್ಷ ಜೂನ್ ವೇಳೆಗೆ ತಿರುವಾಂಕೂರು (ತಿರುವನಂತಪುರ) ಮಾನ್ಸೂನ್ ಋತು ಪ್ರಾರಂಭವಾಗಿರುತ್ತದೆ. ಹನಿಹನಿಯಾಗಿ ಚಿಮುಕಿಸುತ್ತಾ ಸುರಿಯುವ ಮಳೆಯಿಂದಾಗಿ ಕರಾವಳಿ ನಾಡಿನ ಸೊಬಗು ಇಮ್ಮಡಿಗೊಳ್ಳುತ್ತದೆ.

ಅಂಕುಡೊಂಕಿನೊಂದಿಗೆ ಹರಿವ ನದಿಗಳು ಸಮುದ್ರ ಸೇರುತ್ತವೆ. ಭುವಿಯು ಹಚ್ಚ ಹಸಿರಿನಿಂದ ಶ್ರೀಮಂತಗೊಳ್ಳುತ್ತದೆ. ಕಾಡು, ಮೇಡು, ಹಿನ್ನೀರಿನ ಸರೋವರಗಳು ಹಿಂದೆಂದಿಗಿಂತಲೂ ಆಪ್ಯಾಯಮಾನವಾಗಿ ಕಂಡು ಮನಸ್ಸಿಗೆ ಮುದನೀಡುತ್ತವೆ. ಉತ್ತರ ಮತ್ತು ಕೇಂದ್ರ ತಿರುವಾಂಕೂರು ಭತ್ತದ ಗದ್ದೆಗಳು ಸಣ್ಣಪುಟ್ಟ ಸರೋವರಗಳ ನಡುವೆ ಹಾದುಹೋಗಿವೆ. ಜೊತೆಗೆ ಅಚ್ಚುಕಟ್ಟಾದ ಚಿಕ್ಕ ದೋಣಿಗಳನ್ನು ಹಿಡಿದು ಜನರು ತಮ್ಮ ವ್ಯವಹಾರಗಳಿಗೆ ಹೋಗುವ ದೃಶ್ಯ ಚುಕ್ಕೆ ಇಟ್ಟ ರಂಗೋಲಿಯಂತೆ ಭಾಸವಾಗುತ್ತದೆ.

ಇದಿಷ್ಟೂ ಭೌಗೋಳಿಕ ಚಿತ್ರಣ ದೇವರ ನಾಡಿನ ಹೇರಳ ನಿಸರ್ಗ ಸಮೃದ್ಧಿಯನ್ನು ಪ್ರತಿನಿಧಿಸುತ್ತದೆ.

1924 ರ ಭೀಕರ ಮಹಾಮಳೆ

ಆದರೆ ಕೇರಳಕ್ಕೆ 1924 ರ ಮಾನ್ಸೂನ್ ಅಪ್ಪಳಿಸಿದ ನೆನಪು ಮಾತ್ರ ಸುಂದರ ಬಣ್ಣನೆಗಿಂತ ಅದರ ಭೀಕರತೆ, ಅದು ಮನಕಲಕಿದ ರೀತಿಗೇ ಹೆಚ್ಚು ನೆನಪಿನಲ್ಲಿ ಉಳಿದಿದೆ. ಸುಂದರ ನಾಡು ಛಿದ್ರವಾಗುವಂತೆ ಆಕಾಶವನ್ನೇ ಸೀಳಿ ನೀರು ಸುರಿದಂತೆ ಅಂದು ಮಳೆ ಸುರಿದಿತ್ತು. ಖ್ಯಾತ ಲೇಖಕ ತಕಾಝಿ ತಮ್ಮ ‘ಇನ್ ದ ಫ್ಲಡ್’ನಲ್ಲಿ ತಮ್ಮ ಊರು, ದೇವಸ್ಥಾನದ ತುತ್ತತುದಿಯಲ್ಲಿ ನೆರೆದ ಜನ, ಅಲ್ಲಿ ನಿಂತ 67 ವಿದ್ಯಾರ್ಥಿಗಳು, ಮುನ್ನೂರಕ್ಕೂ ಹೆಚ್ಚು ಯುವಕರು ಮತ್ತು ಅಸಂಖ್ಯಾತ ಸಾಕುಪ್ರಾಣಿಗಳು ರಕ್ಷಣೆಗೆ ಕಾಯುತ್ತಿದ್ದ ರೀತಿಯನ್ನು ‘ವಾಟರ್ ವಾಟರ್ ಎವೆರಿವೇರ್’ ಎಂದು ಬಣ್ಣಿಸಿದ್ದರು.

ಇದೇ ರೀತಿಯ ಧಾರಾಕಾರ ಮಳೆ ತಿರುವಾಂಕೂರಿನತ್ತ ತಿರುಗಿತ್ತು. ಜಾನುವಾರುಗಳ ಶವ ತೇಲುತ್ತಿತ್ತು ಒಂದು ವಾರ ಮಳೆ ನಿರಂತರವಾಗಿ ಸುರಿಯಿತು. ಜನಜೀವನ ಅಸ್ತವ್ಯಸ್ತಗೊಂಡಿತು. ಮನೆಗಳು ಕೊಚ್ಚಿಹೋದವು. ಗರ್ಭಿಣಿಯರು, ಮಕ್ಕಳು ಗೊತ್ತುಗುರಿ ಇಲ್ಲದೆ ಅಲೆಯುವಂತಾಯಿತು. ಜಾನುವಾರುಗಳ ಶವ ಉಬ್ಬುಹೊಟ್ಟೆಯಲ್ಲಿ ನೀರಿನಲ್ಲಿ ತೇಲುತ್ತಿದ್ದವು. ಈ ದೃಶ್ಯಾವಳಿ ಎಂಥವರನ್ನೂ ಆಘಾತಗೊಳಿಸುವಂತಿತ್ತು.

ಅಂತಿಮವಾಗಿ ಈ ಮಹಾಮಳೆಗೆ ಸಾವಿರಾರು ಜನ ಜಾನುವಾರುಗಳು ಪ್ರಾಣ ಕಳೆದುಕೊಂಡವು. ಆ ವರ್ಷ ಅಲ್ಲಿನ ಸ್ಥಳೀಯ ಇತಿಹಾಸದಲ್ಲಿ ಕರಾಳ ಹೆಗ್ಗುರುತು. ಪ್ರಾಕೃತಿಕ ಬಿಕ್ಕಟ್ಟು ಪ್ರಾರಂಭವಾಗುತ್ತಿದ್ದಂತೇ ಪುನರ್‌ವಸತಿ ಕಾರ್ಯವೂ ಆರಂಭವಾಯಿತು. ಪ್ರವಾಹ ಶಮನ ಸಮಿತಿ ರೂಪಿಸಲಾಯಿತು. ದಿವಾನ್ ಟಿ.ರಾಘವಯ್ಯ ಮದ್ರಾಸ್ ಬ್ರಿಟಿಷ್ ಪ್ರಾಂತದ ಸರ್ಕಾರದಿಂದ ನಾಗರಿಕ ಸೇವಾ ಅಧಿಕಾರಿಯಾಗಿ ನೇಮಕಗೊಂಡ ನಿಪುಣ ಅಧಿಕಾರಿಯಾಗಿದ್ದರು. ಪ್ರವಾಹಪೀಡಿತ ಪ್ರದೇಶಗಳ ಜನರ ಪುನರ್ವಸತಿಗೆ ಸೂಕ್ತ ಉಪಕ್ರಮಗಳನ್ನು ತೆಗೆದುಕೊಂಡರು. ಪ್ರಾಥಮಿಕ ನೆರವಿಗಾಗಿ ಅಧಿಕ ಪ್ರಮಾಣದ ಹಣ ಬಿಡುಗಡೆಗೊಳಿಸಿದರು.

ಮಹಾರಾಜರು ಅನಾರೋಗ್ಯದಿಂದ ಮಲಗಿದ್ದರು. ದಿವಾನ್ ರಾಘವಯ್ಯ ಸ್ವತಃ ತಾವೇ ಖುದ್ದಾಗಿ ನೆರೆ ಸಂತ್ರಸ್ತರಲ್ಲಿಗೆ ಹೋಗಿ ಸ್ಥಿತಿಗತಿ ವಿಚಾರಿಸಿದ್ದರು. ಸಾರ್ವಜನಿಕರಲ್ಲಿ ಆತ್ಮಸ್ಥೈರ್ಯ ತುಂಬಿದ್ದರು. ಆಶ್ರಯ ಚಟುವಟಿಕೆಯ ಮೇಲ್ವಿಚಾರಣೆ ನಡೆಸಿದ್ದರು. ಈ ವೇಳೆ ಮಹಾರಾಜರು ಸಾವನ್ನಪ್ಪಿದರು. ಆದಾಗ್ಯೂ ಆಗಸ್ಟ್ ಮೊದಲ ಭಾಗದಲ್ಲಿ ಸಾವಿರಾರು ನಿರಾಶ್ರಿತರಿಗೆ ನಿರಾಶ್ರಿತ ಕೇಂದ್ರಗಳಲ್ಲಿ ಆಶ್ರಯ ನೀಡಲಾಯಿತು. 4000 ಜನರನ್ನು ಅಂಬಲಪುರ, 3000 ಜನರನ್ನು ಅಲೆಪ್ಪಿ, 5000 ಜನರನ್ನು ಕೊಟ್ಟಾಯಂ, 3000 ಜನರನ್ನು ಚಂಗನಶ್ಶೇರಿ ಮತ್ತು 8000 ಜನರನ್ನು ಪರೂರು ಹೀಗೆ ಹಲವು ಕೇಂದ್ರಗಳಲ್ಲಿ ಇರಿಸಿ ಆರೈಕೆ
ಮಾಡಲಾಯಿತು.

ಯಾರೂ ಹಸಿವಿನಿಂದ ಬಳಲಲಿಲ್ಲ!

ದಿವಾನ್ ರಾಘವಯ್ಯ ಸಾರ್ವಜನಿಕರೊಂದಿಗೆ ನಿರಂತರ ಸಂಪರ್ಕದಲ್ಲಿದ್ದರು. ನಾಗರಿಕರು ಮತ್ತು ಸರ್ಕಾರಿ ಅಧಿಕಾರಿಗಳ ಶ್ರಮದ ಫಲವಾಗಿ ಯಾರೊಬ್ಬರೂ ಹಸಿವಿನಿಂದ ಬಳಲಿಲ್ಲ ಎಂಬುದು ಸಾರ್ವಜನಿಕರ ಮೆಚ್ಚುಗೆಗೆ ಕಾರಣವಾಯಿತು. ಬಿಕ್ಕಟ್ಟನ್ನು ಸಮಸ್ಥಿತಿಗೆ ತರುವಲ್ಲಿ ಮಹಾರಾಜ ಮುಲಾಮ್ ತಿರುನಲ್‌ರ ಸರ್ಕಾರ ಸಮರ್ಥವಾಗಿ ಕಾರ್ಯನಿರ್ವಹಿಸಿತ್ತು. ಆದರೆ ಮಳೆಯಿಂದಾಗಿ ಅಪಾರ ನಷ್ಟ ಸಂಭವಿಸಿತ್ತು. ಆ ವರ್ಷ ಬೆಳೆ ಸಂಪೂರ್ಣ ನಾಶವಾಗಿತ್ತು.

ಮನ್ನಾರ್ ಪ್ರವಾಹ ಪರಿಹಾರ ಆಯೋಗದ ವರದಿ ಪ್ರಕಾರ, ೫೦೦ ಮನೆಗಳು, 200 ತೆಂಗು ತೋಟಗಳು, 1000 ಎಕರೆ ಭೂಮಿ ಮತ್ತು 6,40,000 ಕಿಲೋ ಧಾನ್ಯಗಳು ಕೇಂದ್ರ ತಿರುವಾಂಕೂರು ಪ್ರದೇಶದಲ್ಲಿ ಮತ್ತು ಅದರ ನೆರೆಹೊರೆ ಪ್ರದೇಶದಲ್ಲಿ ಮಾತ್ರವೇ ಹಾನಿಗೊಳಗಾಗಿತ್ತು. ಇನ್ನು ಇಡೀ ರಾಜ್ಯದ ಹಲವೆಡೆ ಫಲವತ್ತಾದ ಭೂಮಿಯೇ ಕೊಚ್ಚಿಹೋಗಿತ್ತು.

ಮರುನಿರ್ಮಾಣ ಕಾರ್ಯ ಹೇಗಿತ್ತು?
ಆ ವರ್ಷ ಮಹಾರಾಜರು ತೆರಿಗೆ ರದ್ದು ಮಾಡಿದರು. 4 ಲಕ್ಷಕ್ಕೂ ಅಧಿಕ ಹಣವನ್ನು ಕೃಷಿ ಸಾಲಕ್ಕೆಂದೇ ಮೀಸಲಿಡಲಾಗಿತ್ತು. ವಸತಿ ಮರುನಿರ್ಮಾಣ ನಿಧಿ ಸ್ಥಾಪಿಸಲಾಯಿತು. ಅರಣ್ಯ ಇಲಾಖೆ ಬಡವರಿಗೆ ತಾತ್ಕಾಲಿಕ ಮನೆ ನಿರ್ಮಾಣಕ್ಕಾಗಿ ಉಚಿತವಾಗಿ ಬಿದಿರು ಮತ್ತಿತರ ವಸ್ತುಗಳನ್ನು ಒದಗಿಸಿತ್ತು. ಮಾರುಕಟ್ಟೆಯಲ್ಲಿ ಬೆಲೆ ಸ್ಥಿರತೆ ಕಾಪಾಡಲು ಕ್ರಮ ಕೈಗೊಳ್ಳಲಾಗಿತ್ತು. ಹಣದುಬ್ಬರ ಏರಿಕೆ ತಡೆಯಲು ಸರ್ಕಾರವೇ ಧಾನ್ಯಗಳನ್ನು ಒದಗಿಸಿತ್ತು.

ಮಹಾರಾಜರ ಸಾವಿನ ನಂತರ ಸೇತು ಲಕ್ಷ್ಮೀಬಾಯಿ ಅಧಿಕಾರಕ್ಕೆ ಬಂದರು. ರಾಜ ಮನೆತನದಲ್ಲಿ ಸಾವು ಸಂಭವಿಸಿದರೆ 3 ದಿನ ಸರ್ಕಾರಿ ಕಾರ್ಯಗಳು ನಿಲ್ಲಬೇಕು. ಆದರೆ, ಜನರಿಗೆ ತೊಂದರೆಯಾಗುತ್ತದೆಯೆಂದು ರಾಣಿ ಯಾವುದೇ ಕಾರ್ಯ ನಿಲ್ಲಿಸಲಿಲ್ಲ. ಇನ್ನು, ರಾಜ ಕುಟುಂಬಕ್ಕೆ 12 ದಿನಗಳ ಸೂತಕವಿದ್ದರೂ ತೆರೆಮರೆಯಿಂದಲೇ ಲಕ್ಷ್ಮೀಬಾಯಿ ಪ್ರವಾಹ ಪರಿಹಾರ ಕಾರ್ಯಾಚರಣೆಯ ಉಸ್ತುವಾರಿ ನೋಡಿಕೊಂಡರು.

ಹೊಸತಾಗಿ ಪಟ್ಟಕ್ಕೇರಿದ ರಾಣಿಗೆ ಅನುಭವದ ಕೊರತೆ ಇದ್ದರೂ ದಿಟ್ಟವಾಗಿ ಪರಿಸ್ಥಿತಿ ನಿಭಾಯಿಸಿದ್ದರು. ಆಗಸ್ಟ್ 28 ರಂದು ಕೃಷಿ ಸಾಲವನ್ನು 5.5 ಲಕ್ಷದವರೆಗೆ ಹೆಚ್ಚಿಸಿದ್ದಾಗಿ ರಾಣಿ ಘೋಷಿಸಿದರು. ಮತ್ತು ಕೃಷಿ ಸಾಲಕ್ಕೆ ಇದ್ದ ಬಡ್ಡಿ ತಗ್ಗಿಸಿದರು. ಲೋಕೋಪಯೋಗಿ ಇಲಾಖೆಯ ನೆರವಿನೊಂದಿಗೆ ಮರುನಿರ್ಮಾಣ ಕಾರ್ಯಗಳು, ಮತ್ತಿತರ ಮೂಲಸೌಕರ್ಯಾಭಿವೃದ್ಧಿ ಕಾರ್ಯಗಳು ಯಶಸ್ವಿಯಾಗಿ ನಡೆದವು. ಸೆಪ್ಟೆಂಬರ್ ವೇಳೆಗೆ ಜನರು ತಮ್ಮ ತಮ್ಮ ಮನೆಗಳಿಗೆ ಮರಳತೊಡಗಿದ ಮೇಲೆಯೇ ರಾಣಿ ಲಕ್ಷ್ಮೀಬಾಯಿ ಅಧಿಕೃತವಾಗಿ ಪಟ್ಟಾಭಿಷೇಕ ಮಾಡಿಸಿಕೊಂಡರು. 

- ಮನು ಎಸ್ ಪಿಳ್ಳೈ, ಇಂಗ್ಲೀಷ್ ಲೇಖಕ 

ದಿ ಐವರಿ ಥ್ರೋನ್ ಪುಸ್ತಕದಿಂದ ಉದ್ದೃತ