Asianet Suvarna News Asianet Suvarna News

ಅಡ್ವಾಣಿಯವರನ್ನು ಬಂಧಿಸಿದ ಲಾಲು ಪ್ರಸಾದ್; ಬಂಧನದ ಫೋಟೋ ಏಕಿಲ್ಲ?

ನೀವು ಬಿಹಾರಕ್ಕೆ ರಥಯಾತ್ರೆ ತಂದರೆ ನಿಮ್ಮನ್ನು ಅರೆಸ್ಟ್‌ ಮಾಡಬೇಕಾಗುತ್ತದೆ ಎಂದು ನೇರವಾಗಿ ಅಡ್ವಾಣಿಯವರ ಬಳಿಗೆ ಹೋಗಿ ಲಾಲು ಪ್ರಸಾದ್ ಯಾದವ್ ಎಚ್ಚರಿಸಿದ್ದರು. ಅವರು ಸಿಟ್ಟುಗೊಂಡು ತಾಯಿಹಾಲು ಕುಡಿದ ಯಾವ ಮಗ ನನ್ನನ್ನು ಅರೆಸ್ಟ್‌ ಮಾಡ್ತಾನೋ ನೋಡೋಣ ಎಂದಿದ್ದರಂತೆ!

How I arrested Advani Lalu says Lalu Prasad Yadav in Autobiography
Author
Bengaluru, First Published Jun 30, 2019, 3:44 PM IST

ನಾನು ಬಿಹಾರದ ಮುಖ್ಯಮಂತ್ರಿಯಾದ ಬಳಿಕ ರಾಜ್ಯದಲ್ಲಿ ಕೋಮು ಸೌಹಾರ್ದತೆಗೆ ಧಕ್ಕೆಯಾಗದಂತೆ ನೋಡಿಕೊಳ್ಳುವುದು ಬಹುದೊಡ್ಡ ಸವಾಲಾಗಿತ್ತು. ನಾನು ಮುಖ್ಯಮಂತ್ರಿಯಾಗುವ ಪೂರ್ವದಲ್ಲಿ ಅಂದರೆ, 1989 ರಲ್ಲಿ ಆರ್‌ಎಸ್‌ಎಸ್‌-ಬಿಜೆಪಿಯ ರಾಮಶೀಲ್‌ ಪೂಜೆಯ ಮೆರವಣಿಗೆಯಲ್ಲಿ ದೊಡ್ಡ ಅನಾಹುತವಾಗಿತ್ತು.

ಆ ವೇಳೆ ಸಂಭವಿಸಿದ ಕೋಮು ಗಲಭೆಗಳಲ್ಲಿ ಬಿಹಾರದ ರೇಷ್ಮೆ ನಗರವೆಂದೇ ಖ್ಯಾತವಾದ ಭಾಗಲ್‌ಪುರದ ವ್ಯಾಪ್ತಿಗೆ ಬರುವ 250 ಗ್ರಾಮಗಳು ಹಾನಿಗೊಳಗಾಗಿದ್ದವು. ಇವುಗಳ ಹೊಡೆತಕ್ಕೆ ಸಿಲುಕಿದವರಲ್ಲಿ ಬಹುತೇಕರು ಮುಸ್ಲಿಮರು.

ಇದರ ಜೊತೆಗೆ, 1970 ಮತ್ತು 1980 ರ ದಶಕಗಳಲ್ಲಿ ನಡೆದ ಭಾರೀ ಪ್ರಮಾಣದ ಕೋಮು ಗಲಭೆಗಳಿಂದ ಅವಿಭಜಿತ ಬಿಹಾರದ ಶರೀಫ್‌, ಸೀತಾಮಡಿ, ಹಜಾರಿಬಾಗ್‌, ಜೆಮ್‌ಶೆಡ್‌ಪುರ ಹಾಗೂ ರಾಂಚಿ ಪ್ರದೇಶಗಳು ಅಕ್ಷರಶಃ ಭಯಭೀತ ವಾತಾವರಣದಲ್ಲಿ ಮುಳುಗಿದ್ದವು.

ಈ ಕಾರಣಕ್ಕೆ ರಾಜ್ಯದ ಜನರು ರಾಜ್ಯ ಸರ್ಕಾರ ಮತ್ತು ಕೇಂದ್ರದಲ್ಲಿರುವ ಕಾಂಗ್ರೆಸ್‌ ಸರ್ಕಾರದ ಬಗ್ಗೆ ಬೇಸರಗೊಂಡಿದ್ದರು. ಹಾಗಾಗಿ, 1989ರ ಲೋಕಸಭೆ ಹಾಗೂ 1990ರ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದ ಜನರು ಆರ್‌ಜೆಡಿ ಪಕ್ಷದ ಕೈಹಿಡಿದರು. ಈ ಸಂದರ್ಭದಲ್ಲಿ ಅಧಿಕಾರಕ್ಕೆ ಬಂದ ಆರ್‌ಜೆಡಿಗೆ ರಾಜ್ಯದಲ್ಲಿ ಶಾಂತಿ ಸೌಹಾರ್ದತೆ ಪುನಃ ಸ್ಥಾಪಿಸುವುದು ಬಹುದೊಡ್ಡ ಸವಾಲಾಗಿತ್ತು.

ಹಾಗಾಗಿ, ನಾನು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ, ‘ನನ್ನ ಸರ್ಕಾರ ಉಳಿಯುತ್ತದೆಯೋ ಅಥವಾ ಇಲ್ಲವೋ ಗೊತ್ತಿಲ್ಲ. ಆದರೆ, ಗಲಭೆಗಳನ್ನು ಮಾತ್ರ ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ’ ಎಂದು ಘೋಷಣೆ ಮಾಡಿದೆ. ಇದರಂತೆ ನಾನು ಮುಖ್ಯಮಂತ್ರಿಯಾದ ಬಳಿಕ ರಾಜ್ಯದಲ್ಲಿ ಯಾವುದೇ ಕೋಮು ಗಲಭೆಗಳು ನಡೆಯಲಿಲ್ಲ. ಅಲ್ಲದೆ, ಮುಸ್ಲಿಂ ಮತ್ತು ಹಿಂದುಗಳ ನಡುವೆ ಸೌಹಾರ್ದತೆ ನೆಲೆಸುವಂತೆ ಮಾಡಲು ಮುಂದಾದೆ.

ತಾಯಿ ಹಾಲು ಮತ್ತು ಎಮ್ಮೆ ಹಾಲು ಕುಡಿದಿದ್ದೇನೆ!

ಇಂಥ ಹೊತ್ತಿನಲ್ಲಿ ಬಿಜೆಪಿಯ ಹಿರಿಯ ನಾಯಕರಾಗಿದ್ದ ಲಾಲ್‌ಕೃಷ್ಣ ಅಡ್ವಾಣಿ ಅವರು ರಾಮರಥ ಯಾತ್ರೆ ಕೈಗೊಂಡರು. ಈ ರಥಯಾತ್ರೆಯನ್ನು ಬಿಹಾರದ ಮೂಲಕ ಉತ್ತರ ಪ್ರದೇಶದಲ್ಲಿರುವ ಅಯೋಧ್ಯೆಗೆ ಕೊಂಡೊಯ್ಯುವುದು ಅಡ್ವಾಣಿ ಅವರ ಉದ್ದೇಶವಾಗಿತ್ತು. ಇದು ತಿಳಿಯುತ್ತಿದ್ದಂತೆ ನಾನು ದೆಹಲಿಗೆ ದೌಡಾಯಿಸಿ, ಅಡ್ವಾಣಿ ಅವರನ್ನು ಭೇಟಿ ಮಾಡಿ, ಕೋಮುಗಲಭೆಗೆ ಕುಮ್ಮಕ್ಕು ನೀಡುವ ತಮ್ಮ ರಥಯಾತ್ರೆ ಕೈಬಿಡಿ ಎಂದು ಮನವಿ ಮಾಡಿಕೊಂಡೆ.

ಅಲ್ಲದೆ, ಬಿಹಾರದಲ್ಲಿ ನಾವು ಸ್ಥಾಪಿಸಿರುವ ಸೌಹಾರ್ದತೆ ಮೇಲೆ ರಥಯಾತ್ರೆ ಕೆಟ್ಟ ಪರಿಣಾಮ ಬೀರಲಿದೆ. ತಾವು ಈ ರಥಯಾತ್ರೆಯನ್ನು ಕೈಬಿಡದಿದ್ದರೆ ನಾನು ಸುಮ್ಮನಿರುವುದಿಲ್ಲ ಎಂದು ನೇರವಾಗಿಯೇ ಎಚ್ಚರಿಸಿದೆ. ಅದುವರೆಗೂ ನನ್ನ ಜೊತೆ ನಯವಾಗಿಯೇ ಮಾತನಾಡುತ್ತಿದ್ದ ಅಡ್ವಾಣಿ ಅವರು ಇದ್ದಕ್ಕಿದ್ದಂತೆ ನನ್ನ ವಿರುದ್ಧ ಆಕ್ರೋಶಗೊಂಡರು.

ಅಲ್ಲದೆ, ನನ್ನ ಯಾತ್ರೆಯನ್ನು ಅದ್ಯಾವ ತಾಯಿ ಹಾಲು ಕುಡಿದ ಮಗ ತಡೆಯುತ್ತಾನೆಯೋ ನೋಡಿಯೇ ಬಿಡೋಣ ಎಂದು ಕೋಪದಿಂದ ನುಡಿದರು. ಅದಕ್ಕೆ ನಾನು, ‘ನಾನು ನನ್ನ ತಾಯಿ ಮತ್ತು ಎಮ್ಮೆಗಳ ಹಾಲು ಕುಡಿದಿದ್ದೇನೆ. ನೀವು ಬಿಹಾರಕ್ಕೆ ಬಂದು ನೋಡಿ ನಾನೇನು ಮಾಡುತ್ತೇನೆ’ ಎಂದು ಅಡ್ವಾಣಿ ಅವರಿಗೆ ತಿರುಗೇಟು ನೀಡಿ ವಾಪಸ್‌ ಬಿಹಾರ ರಾಜಧಾನಿ ಪಟನಾಕ್ಕೆ ಆಗಮಿಸಿದೆ.

ಅಡ್ವಾಣಿ ಬಂಧನಕ್ಕೆ ವಿ ಪಿ ಸಿಂಗ್‌ ಮೌನ

1990ರ ಸೆಪ್ಟೆಂಬರ್‌ನಲ್ಲಿ ತಮ್ಮ ಯೋಜನೆಯಂತೆ ಅಡ್ವಾಣಿ ಅವರು ಗುಜರಾತ್‌ನ ಸೋಮನಾಥ ದೇಗುಲದಿಂದ ರಾಮರಥ ಯಾತ್ರೆಯನ್ನು ಆರಂಭಿಸಿಯೇಬಿಟ್ಟರು. ಅವರ ಈ ಯಾತ್ರೆ ಗುಜರಾತ್‌ನಲ್ಲಿ ಕೋಮು-ಗಲಭೆಗೆ ಸಾಕ್ಷಿಯಾಗಿತ್ತು. ಅಲ್ಲದೆ, ಅವರ ಯಾತ್ರೆಯ ಮೆರವಣಿಗೆ ಉತ್ತರ ಪ್ರದೇಶ ಹಾಗೂ ಬಿಹಾರ ಸೇರಿದಂತೆ ಹಲವು ರಾಜ್ಯಗಳಲ್ಲಿ ಕೋಮು ಗಲಭೆಗಳಿಗೆ ತನ್ನದೇ ಆದ ಕೊಡುಗೆ ನೀಡುವುದಿತ್ತು.

1990 ರ ಅಕ್ಟೋಬರ್‌ನಲ್ಲಿ ಮಧ್ಯಪ್ರದೇಶದಿಂದ ಬಿಹಾರದ ಧನ್‌ಬಾದ್‌ಗೆ ರಥಯಾತ್ರೆ ಆಗಮಿಸುತ್ತಿದ್ದಂತೆ ಅಡ್ವಾಣಿ ಅವರ ಬಂಧನಕ್ಕೆ ಅವಕಾಶ ಕಲ್ಪಿಸುವಂತೆ ಆಗಿನ ಪ್ರಧಾನಿಯಾಗಿದ್ದ ವಿ ಪಿ ಸಿಂಗ್‌ ಅವರಿಗೆ ಎರಡು ಬಾರಿ ಮನವಿ ಮಾಡಿದ್ದೆ. ಆದರೆ, ಕೇಂದ್ರದಲ್ಲಿ ತಮ್ಮ ಸರ್ಕಾರ ಉಳಿಸಿಕೊಳ್ಳಲು ವಿ ಪಿ ಸಿಂಗ್‌ ಅವರಿಗೆ ಬಿಜೆಪಿಯ ಅಗತ್ಯವಿತ್ತು.

ಅದಕ್ಕಾಗಿ ನನ್ನ ಕೋರಿಕೆಗೆ ಮೌನವೇ ಪ್ರಧಾನಿ ವಿ ಪಿ ಸಿಂಗ್‌ ಅವರ ಉತ್ತರವಾಗಿತ್ತು. ಅದಕ್ಕಾಗಿ ನಾನೇ ಧನ್‌ಬಾದ್‌ನ ಎಸ್‌ಪಿ ಹಾಗೂ ಡಿಸಿಪಿ ಅವರನ್ನು ಕರೆಸಿ, ಅಡ್ವಾಣಿ ಅವರನ್ನು ಅಲ್ಲಿಯೇ ಬಂಧಿಸುವಂತೆ ನಿರ್ದೇಶನ ನೀಡಿದೆ. ಆದರೆ, ಅಡ್ವಾಣಿ ಅವರ ಬಂಧನದಿಂದ ಕೋಮುಗಲಭೆಯಾಗುತ್ತದೆ ಎಂಬ ಭಯ ವ್ಯಕ್ತಪಡಿಸಿದ ಅವರು ಅಡ್ವಾಣಿ ಅವರನ್ನು ಬಂಧಿಸಲು ನಿರಾಕರಿಸಿದರು.

ಪ್ಲಾನ್‌ ‘ಎ’ ವಿಫಲ

ಆಗ ಏನು ಮಾಡಬೇಕು ಎಂಬ ಗೊಂದಲ ಸೃಷ್ಟಿಯಾಯಿತು. ಯಾಕೆಂದರೆ, ಅಡ್ವಾಣಿ ಅವರ ರಥಯಾತ್ರೆಯು ಅಲ್ಪಸಂಖ್ಯಾತರು ಹಾಗೂ ಕೋಮುಸೌಹಾರ್ದತೆಗೆ ದೊಡ್ಡ ಬೆದರಿಕೆ ಎಂಬುದು ನನಗೆ ಸ್ಪಷ್ಟವಿತ್ತು. ಅದಕ್ಕಾಗಿ ರಾಜಕೀಯ ಭೀಷ್ಮ ಎಂದೇ ಖ್ಯಾತರಾದ ಅಡ್ವಾಣಿಯವರ ಬಂಧನ ಮಾಡಲೇಬೇಕಿತ್ತು.

ಅವರ ರಥಯಾತ್ರೆ 1990ರ ಅಕ್ಟೋಬರ್‌ 9ರಂದು ಉತ್ತರ ಬಿಹಾರದಲ್ಲಿರುವ ಸಮಸ್ತೀಪುರಕ್ಕೆ ತೆರಳಬೇಕಿತ್ತು. ಅದರ ಮರುದಿನ ಅಯೋಧ್ಯೆ ಕಡೆಗೆ ಸಾಗಬೇಕಿತ್ತು. ಈ ಸಂದರ್ಭದಲ್ಲಿ ನನ್ನ ಮನೆಯ ಮಲಗುವ ಕೋಣೆಯಲ್ಲಿ ರಾಜ್ಯದ ಹಿರಿಯ ಅಧಿಕಾರಿಗಳ ರಹಸ್ಯ ಸಭೆ ಕರೆದೆ.

ಮುಖ್ಯಮಂತ್ರಿಗಳ ಕಾರ್ಯದರ್ಶಿ ಮುಕುಂದ್‌ ಪ್ರಸಾದ್‌ ಸೇರಿದಂತೆ ಇತರ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು. ನಾನು ಅವರಿಗೆ ಸ್ಪಷ್ಟವಾಗಿ ಹೇಳಿದೆ - ‘ರಥಯಾತ್ರೆಯನ್ನು ತಡೆಯಬೇಕು. ಅಡ್ವಾಣಿ, ವಿಎಚ್‌ಪಿಯ ಅಶೋಕ್‌ ಸಿಂಘಲ್‌ ಸೇರಿದಂತೆ ಸಂಘ ಪರಿವಾರದ ನಾಯಕರನ್ನು ಬಂಧಿಸಿ.’ ಅದರಿಂದ ಅಪಾಯವಿದೆಯೆಂದು ಅಧಿಕಾರಿಗಳು ಕಂಗಾಲಾದರು. ಆದರೂ ತೋರಿಸಿಕೊಳ್ಳಲಿಲ್ಲ.

ಮೊದಲಿಗೆ ಅಡ್ವಾಣಿ ಅವರನ್ನು ಮಾತ್ರ ಸಾಸರಂ ಬಳಿ ಬಂಧಿಸುವ ಯೋಜನೆ ಇತ್ತು. ಬಂಧಿತ ಬಿಜೆಪಿಯ ಹಿರಿಯ ನಾಯಕನನ್ನು ಕರೆತರಲು ಹೆಲಿಕಾಪ್ಟರ್‌ ಕಳಿಸಲಾಗುವುದು ಎಂದಿದ್ದೆ. ಪೈಲಟ್‌ನನ್ನು ಕರೆದು ನನ್ನ ಆಲೋಚನೆಗಳೇನು ಎನ್ನುವುದನ್ನು ಮೊದಲೇ ತಿಳಿಸಿದ್ದೆ.

ನನ್ನ ಮಲಗುವ ಕೋಣೆಯಲ್ಲಿ ನಡೆದಿದ್ದ ಮೀಟಿಂಗ್‌ ಬಗ್ಗೆ ಗೌಪ್ಯತೆ ಕಾಪಾಡುವಂತೆ ಅಧಿಕಾರಿಗಳಿಗೆ ತಿಳಿಸಿದ್ದೆ. ಆದರೂ ಈ ವಿಷಯ ಹೇಗೋ ಸೋರಿಕೆಯಾಗಿ ಅಡ್ವಾಣಿ ತಮ್ಮ ಹಾದಿ ಬದಲಾಯಿಸಿದ್ದರು. ಮೊದಲೇ ಹೇಳಿದಂತೆ ಕಾನೂನು ಮತ್ತು ಸುವ್ಯವಸ್ಥೆ ಹದಗೆಡುತ್ತದೆಂದು ಪೊಲೀಸ್‌ ಅಧಿಕಾರಿಗಳು ಅವರನ್ನು ಬಂಧಿಸಲು ನಿರಾಕರಿಸಿದ್ದರು.

ಅಧಿಕಾರಿಗಳನ್ನು ನನ್ನ ಮನೆಯಲ್ಲೇ ಉಳಿಸಿಕೊಂಡೆ

ಈಗ ಪ್ಲಾನ್‌ ‘ಬಿ’ ಸಮಯ. ಐಎಎಸ್‌ ಅಧಿಕಾರಿ ಆರ್‌ ಕೆ ಸಿಂಗ್‌ (ಈಗ ಕೇಂದ್ರ ಸಚಿವ) ಮತ್ತು ಡಿಪ್ಯುಟಿ ಇನ್ಸ್‌ಪೆಕ್ಟರ್‌ ಜನರಲ್‌ ಶ್ರೇಣಿಯ ಐಪಿಎಸ್‌ ಅಧಿಕಾರಿ ರಾಮೇಶ್ವರ್‌ ಒರಾನ್‌ ಅವರನ್ನು ನನ್ನ ಮನೆಗೆ ಕರೆಸಿಕೊಂಡೆ. ಅವರ ಜೊತೆಗೆ ಅಡ್ವಾಣಿಯವರನ್ನು ಬಂಧಿಸುವ ವಿಧಾನಗಳ ಬಗ್ಗೆ ಚರ್ಚಿಸಿದೆ. ಅನಂತರ ರಾಜ್ಯದ ಮುಖ್ಯ ಕಾರ‍್ಯದರ್ಶಿ, ಗೃಹ ಕಾರ‍್ಯದರ್ಶಿ ಮತ್ತು ಸಂಬಂಧಿಸಿದ ಕೆಲ ಹಿರಿಯ ಅಧಿಕಾರಿಗಳನ್ನು ಕರೆದು ಅಕ್ಟೋಬರ್‌ 9 ರ ಸಂಜೆ ವಿಶೇಷ ಆದೇಶ ಹೊರಡಿಸಿದೆ.

ಸಮಸ್ತೀಪುರದಲ್ಲಿ ಅಡ್ವಾಣಿಯವರನ್ನು ಬಂಧಿಸಬೇಕು ಎಂದು ಆರ್‌ ಕೆ ಸಿಂಗ್‌ ಮತ್ತು ಓರಾನ್‌ ಅವರಿಗೆ ಆದೇಶಿಸಿದೆ. ಆದೇಶದ ಪ್ರತಿಗೆ ಸಹಿ ಮಾಡಿದ ಬಳಿಕ ಮುಖ್ಯ ಕಾರ‍್ಯದರ್ಶಿ, ಗೃಹ ಕಾರ‍್ಯದರ್ಶಿ ಮತ್ತು ಹಿರಿಯ ಅಧಿಕಾರಿಗಳಿಗೆ ನನ್ನ ಮನೆಯಲ್ಲೇ ಉಳಿಯುವಂತೆ ಹೇಳಿದೆ. ಅವರ ಬಳಿ ಮೊಬೈಲ್‌ ಇಲ್ಲ ಎನ್ನುವುದ್ನು ಖಚಿತಪಡಿಸಿಕೊಂಡೆ.

ಈ ಪ್ಲಾನ್‌ ಲೀಕ್‌ ಆಗುವುದು ನನಗೆ ಇಷ್ಟವಿರಲಿಲ್ಲ. ಕೇಂದ್ರೀಯ ಮೀಸಲು ಪಡೆಯ ಬೆಂಗಾವಲೊಂದಿಗೆ ಅಕ್ಟೋಬರ್‌ 10ರ ಮುಂಜಾನೆ ಸಮಸ್ತೀಪುರಕ್ಕೆ ತೆರಳಿ ಅಡ್ವಾಣಿ ಬಂಧಿಸುವಂತೆ ಆರ್‌ ಕೆ ಸಿಂಗ್‌ ಮತ್ತು ಒರಾನ್‌ ಅವರಿಗೆ ಹೇಳಿದೆ.

ಸಮಸ್ತೀಪುರದ ಜಿಲ್ಲಾಧಿಕಾರಿ ಮತ್ತು ಎಸ್‌ಪಿಗೂ ಈ ವಿಷಯ ತಿಳಿಸದಂತೆ ಎಚ್ಚರಿಕೆ ನೀಡಿದ್ದೆ. ರಾಜ್ಯ ಸರ್ಕಾರದ ಹೆಲಿಕಾಪ್ಟರ್‌ನ ಪೈಲಟ್‌ ಅವಿನಾಶ್‌ ಬಳಿ ನಮ್ಮ ಹೆಲಿಕಾಪ್ಟರನ್ನು ಸಮಸ್ತೀಪುರಕ್ಕೆ ಕೊಂಡೊಯ್ಯುವಂತೆ ಹೇಳಿದ್ದೆ. ಇಷ್ಟೆಲ್ಲ ಮಾಡಿದ್ದರಿಂದ ಮುಂಜಾನೆ ಅಡ್ವಾಣಿಯವರನ್ನು ಬಂಧಿಸಿ ಆ ಸ್ಥಳದಿಂದ ಆಚೆ ಕೊಂಡೊಯ್ಯುವವರೆಗೂ ಜನರಿಗೆ ಅದರ ಸುಳಿವೇ ಸಿಕ್ಕಿರಲಿಲ್ಲ.

ನಾನು ರಿಪೋರ್ಟರ್‌ ಅಂತ ಫೋನ್‌ ಮಾಡಿದ್ದೆ

ಇಷ್ಟೊಂದು ಗೌಪ್ಯತೆಯ ನಡುವೆಯೂ ಆರ್‌ಎಸ್‌ಎಸ್‌ ಮತ್ತು ಬಿಜೆಪಿಯ ಪರಿಚಿತರು ಅಡ್ವಾಣಿಯವರ ಬಂಧನದ ಬಗ್ಗೆ ಮೊದಲೇ ಗೆಸ್‌ ಮಾಡಿದ್ದರು. ಅಕ್ಟೋಬರ್‌ 9ರ ಸಂಜೆ ನನ್ನನ್ನು ಭೇಟಿ ಮಾಡಿ ‘ಅಡ್ವಾಣಿಯವರನ್ನು ಬಂಧಿಸುವ ಪ್ಲಾನ್‌ ಮಾಡಿದ್ದೀರಾ ಎಂದು ನೇರವಾಗಿ ಕೇಳಿದ್ದರು.

ಆಗ ನಾನು, ‘ನನಗೇನು ಹುಚ್ಚಾ, ನಾನೇಕೆ ಅಡ್ವಾಣಿ ಅವರನ್ನು ಬಂಧಿಸಲಿ?’ ಎಂದು ಕೇಳಿದ್ದೆ. ಅವರು ವಾಪಸ್‌ ಹೋಗಿ ಮಲಗಿದ್ದರು. ಅಡ್ವಾಣಿ ಜೊತೆಗಿನ ಹಲವು ಪತ್ರಕರ್ತರೂ ಊಟ ಮಾಡಿ ಸಮಸ್ತೀಪುರದಲ್ಲಿ ಮಲಗಿದ್ದರು. ಆದರೆ ನಾನು ಮಾತ್ರ ಇಡೀ ರಾತ್ರಿ ಮಲಗಿರಲಿಲ್ಲ. ಅಡ್ವಾಣಿ ಅವರು ಉಳಿದುಕೊಂಡಿದ್ದ ಸಮಸ್ತೀಪುರದ ಗೆಸ್ಟ್‌ಹೌಸ್‌ನ ಲ್ಯಾಂಡ್‌ಲೈನ್‌ಗೆ ಪದೇ ಪದೇ ಕರೆ ಮಾಡಿ ವಿಚಾರ ತಿಳಿದುಕೊಳ್ಳುತ್ತಿದ್ದೆ.

ಮರುದಿನ, ಅಕ್ಟೋಬರ್‌ 10 ರ ಮುಂಜಾನೆ 4ರ ಸಮಯದಲ್ಲಿ ಬಾಣಸಿಗನೊಬ್ಬ ಕರೆ ಸ್ವೀಕರಿಸಿದ. ನಾನು ಯಾರೆಂದು ಹೇಳದೆ, ದಿನಪತ್ರಿಕೆಯ ವರದಿಗಾರ ಎಂದು ಸುಳ್ಳು ಹೇಳಿದೆ. ‘ಅಡ್ವಾಣಿ ಏನು ಮಾಡುತ್ತಿದ್ದಾರೆ?’ ಎಂದು ಕೇಳಿದೆ. ಆತ, ‘ಅವರು ಮಲಗಿದ್ದಾರೆ’ ಎಂದ. ‘ಒಬ್ಬರೇ ಇದ್ದಾರಾ ಅಥವಾ ಸುತ್ತಮುತ್ತ ಬೇರೆ ಯಾರಾದರೂ ಇದ್ದಾರಾ’ ಎಂದೆ. ‘ಅವರ ಕೋಣೆಯೊಳಗೆ ಒಬ್ಬರೇ ಇದ್ದಾರೆ’ ಎಂದ. ‘ಅವರಿಗೆ ಟೀ ಕೊಡು’ ಎಂದು ಹೇಳಿ ಫೋನಿಟ್ಟೆ. ಅದಾದ ಕೆಲವೇ ನಿಮಿಷದ ನಂತರ ಆರ್‌ ಕೆ ಸಿಂಗ್‌ ಕರೆ ಮಾಡಿ ಮಿಷನ್‌ ಶುರುವಾಗುತ್ತಿದೆ ಎಂದರು.

ಬೆಳಗಿನ ಜಾವ ನಾನು ಲಾನ್‌ನಲ್ಲಿ ಅತ್ತಿಂದಿತ್ತ ಅಡ್ಡಾಡುತ್ತಿದ್ದೆ. ಹೆಲಿಕಾಪ್ಟರ್‌ ಬರಲು ಬೇಕಾದ ಡೈರೆಕ್ಷನ್‌ ನೀಡಿಲ್ಲವಾದ್ದರಿಂದ ಈ ಬಾರಿಯೂ ಪ್ಲಾನ್‌ ಕೈಕೊಟ್ಟಿದೆ ಎಂದೇ ಭಾವಿಸಿದ್ದೆ. ಪೈಲಟ್‌ ಜೊತೆ ಸಂಪರ್ಕ ಸಾಧಿಸಿ, ‘ಏನಾಯಿತು ಅವಿನಾಶ್‌ ಬಾಬು?’ ಎಂದೆ. ‘ಇಂಧನ ತುಂಬಿಸಲು ಬಳಸುದಾರಿಯಲ್ಲಿ ಬರುತ್ತಿದ್ದೇನೆ ಸರ್‌’ ಎಂದರು! ನಂತರ ನನ್ನ ಯೋಜನೆಯಂತೆಯೇ ಅಡ್ವಾಣಿಯವರನ್ನು ವಶಕ್ಕೆ ಪಡೆದು ಬಿಹಾರ್‌-ಬಂಗಾಳ ಗಡಿಯ ದುಮ್ಕಾ ಜಿಲ್ಲೆಯ ಮಸ್ಸಂಜೋರ್‌ಗೆ ‘ಹಾರಿಸಿ’ಕೊಂಡು ಬರಲಾಗಿತ್ತು!

ಅಡ್ವಾಣಿ ಬಂಧನದ ಫೋಟೋ ಏಕಿಲ್ಲ?

ದುಮ್ಕಾದ ಜಿಲ್ಲಾಧಿಕಾರಿ ಸುಧೀರ್‌ ಕುಮಾರ್‌ ಅವರಿಗೆ ಕರೆ ಮಾಡಿ, ನಾನು ನಾಳೆ ಅಲ್ಲಿಗೆ ಬರುತ್ತೇನೆ. ಗೆಸ್ಟ್‌ ಹೌಸ್‌ ರೆಡಿ ಮಾಡಿ. ಅಡ್ವಾಣಿ ಬಂಧನ ವಿಚಾರ ಬಹಿರಂಗ ಮಾಡಬಾರದು ಎಂದು ಹೇಳಿದೆ. ಅಡ್ವಾಣಿ ಅವರನ್ನು ಗೆಸ್ಟ್‌ಹೌಸ್‌ಗೆ ಕರೆತಂದ ಬಳಿಕ ಮತ್ತೆ ಸುಧೀರ್‌ಗೆ ಕರೆ ಮಾಡಿ, ಇನ್ನಷ್ಟುಭದ್ರತೆ ನಿಯೋಜಿಸುವಂತೆ ಸೂಚಿಸಿದೆ.

ಟೀವಿ ಚಾನಲ್‌ಗಳು ಮತ್ತು ರೇಡಿಯೋ ಮೂಲಕ ಬೇಗ ಈ ಸುದ್ದಿ ಎಲ್ಲೆಡೆ ಹರಡಿತು. ಮುಂಜಾನೆಯೇ ಅಡ್ವಾಣಿಯವರನ್ನು ಬಂಧಿಸಲಾಗಿತ್ತು. ಅದಕ್ಕೆ ಅಡ್ಡಿಪಡಿಸಲು ಬಂದವರನ್ನು ಶೂಟ್‌ ಮಾಡಿಬಿಡಿ ಎಂದು ಆದೇಶಿಸಿದ್ದೆ. ಹಾಗಾಗಿ ಆ ಐತಿಹಾಸಿಕ ಘಟನೆಗೆ ಯಾರೂ ಸಾಕ್ಷಿಯಾಗಿರಲಿಲ್ಲ. ಮಾಧ್ಯಮಗಳೂ ಸುತ್ತಮುತ್ತ ಇರಲಿಲ್ಲ. ಹಾಗಾಗಿ ಅಡ್ವಾಣಿ ಬಂಧನದ ಫೋಟೋಗಳು ಲಭ್ಯವಿಲ್ಲ.

* ಇತ್ತೀಚೆಗೆ ಬಿಡುಗಡೆಯಾದ ಲಾಲೂ ಪ್ರಸಾದ್‌ ಯಾದವ್‌ ಅವರ ಆತ್ಮಕತೆ ‘ಗೋಪಾಲ್‌ಗಂಜ್‌ ಟು ರೈಸಿನಾ - ಮೈ ಪೊಲಿಟಿಕಲ್‌ ಜರ್ನಿ’ಯ ಆಯ್ದ ಭಾಗ

Follow Us:
Download App:
  • android
  • ios