Asianet Suvarna News Asianet Suvarna News

ಜ್ಯೋತಿಷಿ ಮಾತು ಕೇಳಿ ದುರಂತ ಅಂತ್ಯ ಕಂಡ ಶರವಣ ಭವನದ ದೋಸೆ ರಾಜ!

ಈರುಳ್ಳಿ ಮಾರಿಕೊಂಡಿದ್ದ ರಾಜಗೋಪಾಲ್‌ ಒಬ್ಬ ಜ್ಯೋತಿಷಿಯ ಮಾತು ಕೇಳಿ ಸಣ್ಣ ಹೋಟೆಲ್‌ ಖರೀದಿಸಿದ್ದರು. ನಿಷ್ಠೆಯಿಂದ ಕೆಲಸ ಮಾಡಿ, ರುಚಿಕರ ಆಹಾರ ನೀಡಿ, ಲಕ್ಷಾಂತರ ಗ್ರಾಹಕರನ್ನು ಗಳಿಸಿ ಜಗತ್ತಿಗೇ ತಮ್ಮ ಹೋಟೆಲ್‌ ಸರಣಿಯನ್ನು ವಿಸ್ತರಿಸಿದರು. ಸಿಬ್ಬಂದಿಗೆ ವಿಮೆಯೂ ಸೇರಿದಂತೆ ಸಕಲ ಸೌಲಭ್ಯ ನೀಡಿ ನೆಚ್ಚಿನ ಅಣ್ಣಾಚಿಯಾದರು. ಕೊನೆಗೆ ಅದೇ ಜ್ಯೋತಿಷಿಯ ಮಾತು ಕೇಳಿ ಹುಡುಗಿಯೊಬ್ಬಳ ಮೇಲೆ ಕಣ್ಣು ಹಾಕಿದರು. ಅದು ಅವರ ಭವಿಷ್ಯವನ್ನೇ ಮುಳುಗಿಸಿತು.

How astrology led to the Dosa King Saravana Bhavan founder downfall
Author
Bangalore, First Published Jul 19, 2019, 10:39 AM IST

ಚೆನ್ನೈ[ಜು.19]: ತಮಿಳುನಾಡು ಮೂಲದ ಸರವಣ ಭವನದ ಹೆಸರು ಕೇಳದವರಿಲ್ಲ. ಇದರ ಶಾಖೆಗಳು ಲಂಡನ್‌, ಸಿಂಗಾಪುರ, ಸಿಡ್ನಿ, ಸ್ಟಾಕ್‌ಹೋಮ್‌ ಸೇರಿದಂತೆ ವಿದೇಶಗಳಲ್ಲೂ ಇವೆ. ರುಚಿಕರವಾದ ಇಡ್ಲಿ, ದೋಸೆ, ವಡೆಯಂತಹ ತಿನಿಸುಗಳಿಂದಾಗಿ ಇದು ವಿಶ್ವವಿಖ್ಯಾತ. ಈ ಜನಪ್ರಿಯ ಹೋಟೆಲ್‌ ಸಂಸ್ಥಾಪಕ, ‘ದೋಸಾ ಕಿಂಗ್‌’ ಎಂದೇ ಖ್ಯಾತಿ ಪಡೆದ ಪಿ.ರಾಜಗೋಪಾಲ್‌ ಜುಲೈ 7ರಿಂದ ಆಜೀವ ಜೈಲುವಾಸಕ್ಕೆ ತೆರಳಲಿದ್ದಾರೆ. ಈರುಳ್ಳಿ ಮಾರಿಕೊಂಡಿದ್ದ ಬಡ ವ್ಯಕ್ತಿಯೊಬ್ಬ ಹೋಟೆಲ್‌ ಸಾಮ್ರಾಜ್ಯವನ್ನೇ ಕಟ್ಟಿಮೆರೆದ ಹಾಗೂ ಕೊನೆಗಾಲದಲ್ಲಿ ದಾರುಣವಾಗಿ ಅವಸಾನ ಕಂಡ ಕತೆ ಅತ್ಯಂತ ಕುತೂಹಲಕಾರಿ.

ಈರುಳ್ಳಿ ವ್ಯಾಪಾರಿ ಮಗ

ರಾಜಗೋಪಾಲ್ ತಮಿಳುನಾಡಿನ ಈರುಳ್ಳಿ ವ್ಯಾಪಾರಿಯ ಮಗ. ಅವರಿಗೆ ಈಗ 71 ವರ್ಷ. ಬಿಳಿ ಪಂಚೆ ಮತ್ತು ಶರ್ಟ್‌, ಹಣೆಯ ಮೇಲೊಂದು ಗಂಧದ ತಿಲಕ ರಾಜಗೋಪಾಲ… ಅವರ ಟಿಪಿಕಲ… ಸ್ಟೈಲ್‌. 1979ರಲ್ಲಿ ಚೆನ್ನೈನ ಕೆ.ಕೆ ನಗರದಲ್ಲಿ ಕಿರಾಣಿ ಅಂಗಡಿ ತೆರೆದಿದ್ದ ರಾಜಗೋಪಾಲ್‌ ಒಂದು ದಿನ ಆ ಪ್ರದೇಶದಲ್ಲಿ ಹಸಿದ ಸೇಲ್ಸ್‌ಮನ್‌ ಒಬ್ಬ ಹೋಟೆಲ್‌ ಸಿಗುತ್ತದೆಯೇ ಎಂದು ಹುಡುಕಾಡಿದ್ದನ್ನು ನೋಡಿದ್ದ. ಅಲ್ಲಿ ಒಂದೇ ಒಂದು ಹೋಟೆಲ್‌ ಇರಲಿಲ್ಲ. ಆ ಘಟನೆಯಿಂದ ರಾಜಗೋಪಾಲ್‌ಗೆ ಹೋಟೆಲ್‌ ಆರಂಭಿಸುವ ಐಡಿಯಾ ಹೊಳೆಯಿತು.

1981ರ ಕಾಲಘಟ್ಟದಲ್ಲಿ ಭಾರತೀಯರು ಮನೆಯಿಂದ ಹೊರಬಂದು ತಿನ್ನುವುದಕ್ಕೆ ಹಿಂದೆಮುಂದೆ ನೋಡುತ್ತಿದ್ದರು. ಆ ಕಾಲದಲ್ಲಿ ರಾಜಗೋಪಾಲ್‌ಗೆ ಜ್ಯೋತಿಷಿಯೊಬ್ಬ ನೀನು ಹೋಟೆಲ್‌ ಆರಂಭಿಸಿದರೆ ಮೇಲೆ ಬರುತ್ತೀಯಾ ಎಂದು ಭವಿಷ್ಯ ಹೇಳಿದ್ದ. ಅದೇ ಸಮಯಕ್ಕೆ ಕಾಮಾಕ್ಷಿ ಭವನ ಎಂಬ ಚಿಕ್ಕ ಹೋಟೆಲ್ಲನ್ನು ಅದರ ಯಜಮಾನ ನಷ್ಟದಿಂದ ಮುಚ್ಚಲು ಹೊರಟಿದ್ದ. ರಾಜಗೋಪಾಲ್‌ ತನ್ನ ಸ್ನೇಹಿತನ ಜೊತೆ ಸೇರಿ ಅದನ್ನು ಕೊಂಡುಕೊಂಡು, ‘ಸರವಣ ಭವನ’ ಎಂದು ಹೆಸರಿಟ್ಟರು. ರಾಜಗೋಪಾಲ್‌ಗೆ ಸಲಹೆ ನೀಡಿದ ವ್ಯಕ್ತಿಯೊಬ್ಬ ಕಡಿಮೆ ಬೆಲೆಯ ಪದಾರ್ಥಗಳನ್ನು ಅಡುಗೆಗೆ ಬಳಸಿ, ಸಿಬ್ಬಂದಿಗೆ ಅಷ್ಟೋ ಇಷ್ಟೋ ಕಾಸು ಕೊಟ್ಟು ಉದ್ಯಮ ನಡೆಸುವಂತೆ ಹೇಳಿದ್ದ. ಆದರೆ ರಾಜಗೋಪಾಲ್‌ ಅದಕ್ಕೆ ತದ್ವಿರುದ್ಧವಾಗಿ ವ್ಯವಹಾರ ಮಾಡಿ, ಉದ್ಯಮ ಬೆಳೆಸಿದರು. ಅಡುಗೆಗೆ ಶುದ್ಧ ತೆಂಗಿನ ಎಣ್ಣೆ, ಗುಣಮಟ್ಟದ ತರಕಾರಿ ಬಳಸಿದರು. ಸಿಬ್ಬಂದಿಗೆ ಉತ್ತಮ ಸಂಬಳ ನೀಡಿದರು.

How astrology led to the Dosa King Saravana Bhavan founder downfall

ಆ ಸಮಯದಲ್ಲಿ ಎಲ್ಲಾ ತಿನಿಸುಗಳನ್ನು 1 ರು.ಗೆ ಮಾರಾಟ ಮಾಡುತ್ತಿದ್ದರು. ಹಾಗಾಗಿ ಅವರ ಉದ್ಯಮ ನಷ್ಟದತ್ತ ಸಾಗಿತ್ತು. ಆದರೆ ರುಚಿಕರವಾದ ಕೈಗೆಟಕುವ ಹೋಟೆಲ್‌ ಎಂದರೆ ಸರವಣ ಭವನ ಎಂದು ಚೆನ್ನೈನಲ್ಲಿ ಇವರ ಹೋಟೆಲ್‌ ಮನೆಮಾತಾಯಿತು. ಕೆಲವೇ ದಿನಗಳಲ್ಲಿ ಮನೆರುಚಿಯನ್ನೇ ನೀಡುವ, ಕೈಗೆಟಕುವ ಬೆಲೆಯ ದೋಸೆ, ವಡೆ ಮತ್ತು ಇಡ್ಲಿ ರಾಜಗೋಪಾಲ್‌ ಕೈಹಿಡಿದವು. ಅಲ್ಲಿಂದ ರಾಜಗೋಪಾಲ… ಹಿಂತಿರುಗಿ ನೋಡಲೇ ಇಲ್ಲ. ಹೋಟೆಲ… ಉದ್ಯಮದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ತಂದವರು ರಾಜಗೋಪಾಲ… ಎಂಬ ಮಾತು ಕೇಳಿಬಂತು. ‘ದೋಸೆ ಕಿಂಗ್‌’ ಎಂಬ ಖ್ಯಾತಿ ರಾಜಗೋಪಾಲ್‌ಗೆ ಬರತೊಡಗಿತು.

ವಿದೇಶದಲ್ಲೂ ಸರವಣ ಭವನ

ಸರವಣ ಭವನ ಮಧ್ಯಮ ವರ್ಗದವರ ಮನೆಮಾತಾಯಿತು. ಬಹುಬೇಗ ತಮಿಳುನಾಡಿಗರ ಮೊದಲ ಆಯ್ಕೆಯಾಗಿ ಬೆಳೆಯಿತು. ವರ್ಷದಿಂದ ವರ್ಷಕ್ಕೆ ಯಶಸ್ಸಿನ ಉತ್ತುಂಗಕ್ಕೆ ಏರಿತು. ತಮಿಳುನಾಡು ಮಾತ್ರವಲ್ಲದೆ ದೇಶದ ವಿವಿಧ ನಗರಗಳಲ್ಲಿ ಸರವಣ ಭವನಗಳು ತಲೆಯೆತ್ತಿದವು. ನಂತರ ವಿದೇಶದಲ್ಲೂ ಶಾಖೆಗಳು ತೆರೆದವು. ಸದ್ಯ ಭಾರತದಲ್ಲಿ 30 ರೆಸ್ಟೋರೆಂಟ್‌ಗಳಿದ್ದು, ಅಮೆರಿಕ, ಗಲ್‌್ಫ ರಾಷ್ಟ್ರಗಳು, ಯುರೋಪ್‌ ಮತ್ತು ಆಸ್ಪ್ರೇಲಿಯಾಗಳಲ್ಲಿ 70ಕ್ಕೂ ಹೆಚ್ಚು ಸರವಣ ಭವನಗಳಿವೆ. ಸರವಣ ಭವನದ ಇನ್ನೊಂದು ವಿಶೇಷ ಎಂದರೆ, ಗ್ರಾಹಕರಿಗೆ ಮಾತ್ರ ಇದು ಅಚ್ಚುಮೆಚ್ಚಲ್ಲ, ಅಲ್ಲಿ ಕೆಲಸ ಮಾಡುವ ಉದ್ಯೋಗಿಗಳಿಗೂ ಇದು ಅಚ್ಚುಮೆಚ್ಚು. ಏಕೆಂದರೆ ರಾಜಗೋಪಾಲ್‌ ತನ್ನ ಸಿಬ್ಬಂದಿಯನ್ನು ಮಕ್ಕಳಂತೆ ಕಂಡರು. ಪ್ರತಿ ಸಿಬ್ಬಂದಿಗೂ ಆರೋಗ್ಯ ವಿಮೆ, ಮನೆ ನಿರ್ಮಾಣಕ್ಕೆ ಹಣ ಸೇರಿದಂತೆ ಮಗಳ ವಿವಾಹಕ್ಕೂ ಹಣ ನೀಡುತ್ತಿದ್ದರು. ಅವರೆಲ್ಲ ರಾಜಗೋಪಾಲ್‌ರನ್ನು ‘ಅಣ್ಣಾಚಿ’ ಎಂದು ಪ್ರೀತಿಯಿಂದ ಕರೆಯುತ್ತಾರೆ.

ಜೋತಿಷ್ಯಿ ಮಾತು ಕೇಳಿ ಕೆಟ್ಟರು!

ಸರವಣ ಭವನದಲ್ಲಿ ದೇವರ ಫೋಟೋ ಜೊತೆಗೆ ಮತ್ತೆರಡು ಫೋಟೋಗಳಿರುತ್ತವೆ. ಒಂದು- ರಾಜಗೋಪಾಲ್‌ ಸದ್ಯ ಸರವಣ ಭವನದ ಮುಖ್ಯಸ್ಥನಾದ ತನ್ನ ಮಗನ ಜೊತೆ ಇರುವ ಫೋಟೋ. ಇನ್ನೊಂದು - ರಾಜಗೋಪಾಲ್‌ ತನ್ನ ಆಧ್ಯಾತ್ಮಿಕ ಗುರೂಜಿ ಜೊತೆ ಇರುವ ಫೋಟೋ. ಆದರೆ ರಾಜಗೋಪಾಲ್‌ ಏಳಿಗೆಗೆ ಕಾರಣರಾಗಿದ್ದ ಇದೇ ಜ್ಯೋತಿಷಿ ಮುಂದೆ ರಾಜಗೋಪಾಲ್‌ರ ದುರಂತ ಅವಸಾನಕ್ಕೂ ಕಾರಣರಾದರು.

ಹೌದು. ಈ ಜೋತಿಷ್ಯಿ 2000ನೇ ಇಸ್ವಿಯಲ್ಲಿ, ‘ಇನ್ನೂ ಇಪತ್ತು ದಾಟದ, ಎಡಗೆನ್ನೆಯ ಮೇಲೆ ಮಚ್ಚೆಯಿರುವ ಹುಡುಗಿಯೊಬ್ಬಳಿದ್ದಾಳೆ. ಆಕೆಯ ಮದುವೆಯಾಗಿ ನೋಡು ಕೋಟಿಗಳಲ್ಲಿ ಹೊರಳಾಡುತ್ತೀಯ’ ಎಂದು ಭವಿಷ್ಯ ನುಡಿದಿದ್ದರು. ರಾಜಗೋಪಾಲ್‌ ಈ ಲಕ್ಷಣದ ಹುಡುಗಿಯ ಹುಡುಕಾಟದಲ್ಲಿರುವಾಗ ಸರವಣ ಭವನದ ಚೆನ್ನೈ ಬ್ರಾಂಚ್‌ನ ಅಸಿಸ್ಟೆಂಟ್‌ ಮ್ಯಾನೇಜರ್‌ನ ಮಗಳು ಜೀವಜ್ಯೋತಿಗೆ ಕೆನ್ನೆಯ ಮೇಲೆ ಬೇಳೆ ಕಾಳಿನ ಗಾತ್ರದ ಮಚ್ಚೆಯಿದೆ ಎಂಬ ವಿಷಯ ತಿಳಿಯಿತು. ಆಕೆ ನೋಡುವುದಕ್ಕೂ ಚೆನ್ನಾಗಿದ್ದಳು. ಅಲ್ಲಿಂದ ಜೀವಜ್ಯೋತಿ ಮೇಲೆ ರಾಜಗೋಪಾಲ್‌ ಕಣ್ಣು ಬಿತ್ತು.

ರಾಜಗೋಪಾಲ್‌ಗೆ ಮೊದಲೇ ಇಬ್ಬರು ಹೆಂಡಿರಿದ್ದರು. ನಿರೀಕ್ಷೆಯಂತೆ ಜೀವಜ್ಯೋತಿ ಇವರ ಪ್ರಸ್ತಾಪವನ್ನು ತಿರಸ್ಕರಿಸಿ, ಬೇರೆ ಮದುವೆಯಾದರು. ಆದರೆ ಯಾರಿಂದಲೂ ‘ನೋ’ ಎಂಬ ಉತ್ತರ ಕೇಳಿ ರಾಜಗೋಪಾಲ್‌ಗೆ ಗೊತ್ತಿರಲಿಲ್ಲ. ಹೀಗಾಗಿ ಆಕೆಯ ಕುಟುಂಬವನ್ನು ಹೊಡೆದು, ಬಡಿದು ‘ದಾರಿಗೆ ತರುವ’ ಪ್ರಯತ್ನ ಮಾಡಿದರು. ಆಗ ದಂಪತಿಗಳಿಬ್ಬರೂ ರಾಜಗೋಪಾಲ್‌ ವಿರುದ್ಧ ಪೊಲೀಸರಿಗೆ ದೂರನ್ನೂ ನೀಡಿದ್ದರು. ಅದಾದ ಕೆಲವೇ ದಿನಗಳಲ್ಲಿ ಶಾಂತಕುಮಾರ್‌ ಅಪಹರಣವಾದರು. ಈ ಬಗ್ಗೆ ಜೀವಜ್ಯೋತಿ ರಾಜಗೋಪಾಲ್‌ ವಿರುದ್ಧ ದೂರು ನೀಡಿದರು. 2001ರ ಅಕ್ಟೋಬರ್‌ 3ರಂದು ಕೊಡೈಕೆನಾಲ್‌ನ ಟೈಗರ್‌ ಚೋಲಾ ಕಾಡಿನಲ್ಲಿ ಶಾಂತಕುಮಾರ್‌ ಮೃತದೇಹ ಸಿಕ್ಕಿತು. ಉಸಿರುಗಟ್ಟಿಸಿ ಕೊಲೆಗೈಯಲಾಗಿದೆ ಎಂದು ಮರಣೋತ್ತರ ಪರೀಕ್ಷೆಯ ವರದಿ ಹೇಳಿತು.

How astrology led to the Dosa King Saravana Bhavan founder downfall

ಸುಪಾರಿ ಕೊಟ್ಟು ಕೊಲೆ

ಪ್ರಕರಣ ಸಂವೇದನಾತ್ಮಕವಾದಾಗ ಅದೇ ವರ್ಷ ನವೆಂಬರ್‌ 23ರಂದು ರಾಜಗೋಪಾಲ್‌ ಪೊಲೀಸರಿಗೆ ಶರಣಾದರು. 2003ರ ಜುಲೈ15ರಂದು ಜಾಮೀನು ಪಡೆದು ಹೊರಬಂದರು. ಜೈಲಿನಿಂದ ಬಿಡುಗಡೆಯಾಗುತ್ತಿದ್ದಂತೇ ಮತ್ತೊಂದು ವಿವಾದ ರಾಜಗೋಪಾಲ್‌ ಅವರನ್ನು ಸುತ್ತಿಕೊಂಡಿತು. 6 ಲಕ್ಷ ರು. ನೀಡಿ ಜೀವಜ್ಯೋತಿಯೊಂದಿಗೆ ರಾಜಿ ಮಾಡಿಕೊಳ್ಳಲು ಯತ್ನಿಸಿದರು. ಅದಕ್ಕೆ ಆಕೆಯ ಕುಟುಂಬ ಮತ್ತು ಸಹೋದರ ಒಪ್ಪದಿದ್ದಾಗ ಅವರ ಮೇಲೂ ಹಲ್ಲೆ ಮಾಡಿಸಿದರು. ಅವರಿಗೆ ಹೊಡೆಸಲು ಖುದ್ದು ರಾಜಗೋಪಾಲ್‌ ಹೋಗಿದ್ದರು.

ನಾಗಪಟ್ಟಿನಂ ಜಿಲ್ಲೆಯ ಥೇತಕ್ಕುಡಿ ಗ್ರಾಮದಲ್ಲಿ ಜೀವಜ್ಯೋತಿಯ ಅಕ್ಕಪಕ್ಕದ ಮನೆಯವರಿಗೆ ಗದ್ದಲದ ಶಬ್ದ ಕೇಳಿಸಿತ್ತು. ಅವರೆಲ್ಲ ಹೊರಬಂದು ಹಲ್ಲೆ ನಿಯಂತ್ರಿಸಲು ಹೋದಾಗ ಹೇಗೋ ರಾಜಗೋಪಾಲ್‌ ಮತ್ತಿತರರು ಗ್ರಾಮಸ್ಥರ ಕೈಯಿಂದ ಎಸ್ಕೇಪ್‌ ಆಗಿದ್ದರು. ಆದರೆ ಅವರ ಕಾನೂನು ಸಲಹೆಗಾರ ಗ್ರಾಮಸ್ಥರ ಬಳಿ ಸಿಕ್ಕಿಬಿದ್ದಿದ್ದ.

2004ರಲ್ಲಿ ಕೊಲೆ ಆಪಾದನೆ ಮೇಲೆ ಸ್ಥಳೀಯ ನ್ಯಾಯಾಲಯ ರಾಜಗೋಪಾಲ್‌ಗೆ 10 ವರ್ಷ ಸೆರೆವಾಸದ ಶಿಕ್ಷೆ ವಿಧಿಸಿತು. ಶಿಕ್ಷೆ ಕಡಿಮೆಯಾಯಿತು ಎಂದು ಅದರ ವಿರುದ್ಧ ಜೀವಜ್ಯೋತಿ ಮದ್ರಾಸ್‌ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದರು. ಸ್ಪಷ್ಟಉದ್ದೇಶದಿಂದಲೇ ಕೊಲೆ ಮಾಡಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ 2009ರಲ್ಲಿ ಮದ್ರಾಸ್‌ ಹೈಕೋರ್ಟ್‌ ರಾಜಗೋಪಾಲ್‌ಗೆ ಜೀವಾವಧಿ ಶಿಕ್ಷೆ ವಿಧಿಸಿತು. ಇತ್ತೀಚೆಗೆ ಮದ್ರಾಸ್‌ ಹೈಕೋರ್ಟ್‌ನ ತೀರ್ಪನ್ನು ಸುಪ್ರೀಂಕೋರ್ಟ್‌ ಎತ್ತಿಹಿಡಿದಿತ್ತು. ಅನಾರೋಗ್ಯದ ಕಾರಣದಿಂದ ಜಾಮೀನು ಪಡೆದು ಹೊರಗಿದ್ದ ರಾಜಗೋಪಾಲ್‌ ಜೀವಾವಧಿ ಶಿಕ್ಷೆ ಆರಂಭಕ್ಕೆ ಕಾಲಾವಕಾಶ ಕೇಳಿದ್ದರು. ಆದರೆ ಸುಪ್ರೀಂಕೋರ್ಟ್‌ ಇವರ ಮನವಿಯನ್ನು ತಿರಸ್ಕರಿಸಿದ ಕಾರಣ ಆ್ಯಂಬುಲೆನ್ಸ್‌ ಮೂಲಕ ಕೃತಕ ಉಸಿರಾಟ ವ್ಯವಸ್ಥೆಯಲ್ಲೇ ಜುಲೈ 9ರಂದು ನ್ಯಾಯಾಲಯಕ್ಕೆ ಶರಣಾಗಿದ್ದಾರು.

ಅವರ ಮುಂದಿರುವ ಕಾನೂನು ಆಯ್ಕೆಗಳೆಲ್ಲ ಬರಖಾಸ್ತಾಗಿ, ದೋಸೆ ಕಿಂಗ್‌ಗೆ ಜೈಲುವಾಸ ಬಿಟ್ಟರೆ ಬೇರೆ ಆಯ್ಕೆ ಇಲ್ಲವಾಗಿತ್ತು. ಪರಿಣಾಮ ಇವರ ಆರೋಗ್ಯ ಮತ್ತಷ್ಟುಹದಗೆಟ್ಟು ಗುರುವಾರ ಇಹಲೋಕ ತ್ಯಜಿಸಿದ್ದಾರೆ. ಈ ಮೂಲಕ ಬಡತನದಿಂದ ಮೇಲೆ ಬಂದು ಒಂದು ಕಾಲದಲ್ಲಿ ಮೆರೆದಿದ್ದ ಪಿ.ರಾಜಗೋಪಾಲ್‌ ಬದುಕು ದುರಂತ ಅಂತ್ಯ ಕಂಡಂತಾಗಿದೆ.

Follow Us:
Download App:
  • android
  • ios