ಕೇಂದ್ರ ಸರ್ಕಾರದ ಈ ಕ್ರಮದಿಂದಾಗಿ ಕೆಲವರಿಗೆ ಭಾರಿ ಸಮಸ್ಯೆ ಉಂಟಾಗಿದೆ. ಆದರೆ, ಇನ್ನೂ ಕೆಲವರಿಗೆ ಇದರ ಬಿಸಿಯೇ ತಟ್ಟದೇ ಹೋಗದಿದ್ದುದು ಹೇಗೆ ಎಂದು ನ್ಯಾಯಪೀಠ ಪ್ರಶ್ನಿಸಿದೆ.
ನವದೆಹಲಿ(ಡಿ.15): ಕೆಲವೇ ಕೆಲವು ಮಂದಿಗೆ ಮಾತ್ರ ಭಾರಿ ಸಂಖ್ಯೆಯಲ್ಲಿ ಹೊಸ ಮುಖ ಬೆಲೆಯ ನೋಟುಗಳು ಹೇಗೆ ಸಿಗುತ್ತಿವೆ ಎಂದು ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರವನ್ನು ಖಾರವಾಗಿ ಪ್ರಶ್ನಿಸಿದೆ.
ನೋಟು ಅಮಾನ್ಯ ಮಾಡಿದ ಸರ್ಕಾರದ ಕ್ರಮ ಪ್ರಶ್ನಿಸಿ ಸಲ್ಲಿಸಲಾಗಿದ್ದ ಹಲವು ಅರ್ಜಿಗಳ ವಿಚಾರಣೆ ವೇಳೆ ಮುಖ್ಯ ನ್ಯಾ. ಟಿ.ಎಸ್.ಠಾಕೂರ್ ನೇತೃತ್ವದ ನ್ಯಾಯಪೀಠ ಈ ಪ್ರಶ್ನೆ ಹಾಕಿದೆ. ಕೇಂದ್ರ ಸರ್ಕಾರದ ಈ ಕ್ರಮದಿಂದಾಗಿ ಕೆಲವರಿಗೆ ಭಾರಿ ಸಮಸ್ಯೆ ಉಂಟಾಗಿದೆ. ಆದರೆ, ಇನ್ನೂ ಕೆಲವರಿಗೆ ಇದರ ಬಿಸಿಯೇ ತಟ್ಟದೇ ಹೋಗದಿದ್ದುದು ಹೇಗೆ ಎಂದು ನ್ಯಾಯಪೀಠ ಪ್ರಶ್ನಿಸಿದೆ.
‘ಸಾಮಾನ್ಯ ಜನರಿಗೆ ಪ್ರತಿ ವಾರಕ್ಕೆ ₹24 ಸಾವಿರ ಸಿಗುವುದೇ ಕಷ್ಟವಾಗಿದೆ. ಆದರೆ ಕೆಲವರು ಮಾತ್ರ ಭಾರಿ ಮೊತ್ತದ ಹೊಸ ನೋಟುಗಳನ್ನು ಇಟ್ಟುಕೊಂಡಿರುವುದು ಹೇಗೆ ಎಂದು ನ್ಯಾ.ಟಿ.ಎಸ್.ಠಾಕೂರ್ ಅವರು ಅಟಾರ್ನಿ ಜನರಲ್ ಮುಕುಲ್ ರೋಹಟಗಿ ಅವರನ್ನು ಪ್ರಶ್ನಿಸಿದರು. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಅಟಾರ್ನಿ ಜನರಲ್ ಬ್ಯಾಂಕ್'ಗಳ ಕೆಲವು ಮ್ಯಾನೇಜರ್‌ಗಳು ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾರೆ. ಅವರ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳಲಿದೆ ಎಂದರು.
ಅರ್ಜಿದಾರರ ಪರ ವಾದ ಮಂಡಿಸಿದ ಮಾಜಿ ಸಚಿವ ಕಪಿಲ್ ಸಿಬಲ್ ‘‘ಪ್ರತಿ ವಾರಕ್ಕೆ ₹24 ಸಾವಿರ ವಿಥ್'ಡ್ರಾ ಮಿತಿ ಹೇರಿರುವ ಸರ್ಕಾರದ ನಿರ್ಧಾರದಿಂದಾಗಿ ಸಾರ್ವಜನಿಕರಿಗೆ ತೊಂದರೆಯಾಗಿದೆ. ಇದರಿಂದಾಗಿ ಹಲವಾರು ಮಂದಿಗೆ ಅಗತ್ಯವಾಗಿರುವ ಹಣ ಸಿಗುತ್ತಿಲ್ಲ,’’ ಎಂದು ವಾದಿಸಿದರು. ಅದಕ್ಕೆ ಉತ್ತರಿಸಿದ ರೋಹಟಗಿ ‘‘ಇದುವರೆಗೆ ₹5 ಲಕ್ಷ ಕೋಟಿ ನೋಟುಗಳನ್ನು ಮುದ್ರಿಸಲಾಗಿದೆ. ಕಡಿಮೆ ಮುಖ ಬೆಲೆಯ ನೋಟುಗಳು ಈಗಾಗಲೇ ಚಲಾವಣೆಯಲ್ಲಿವೆ ಎಂದರು.
ಡಿಸಿಸಿ ಬ್ಯಾಂಕ್‌ಗಳಿಗೆ ಅವಕಾಶ
ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್'ಗಳಲ್ಲಿ ಹಳೆಯ ಮುಖ ಬೆಲೆಯ ನೋಟುಗಳನ್ನು ಸ್ವೀಕರಿಸಿ ಅವುಗಳನ್ನು ಆರ್‌ಬಿಐಗೆ ಸಲ್ಲಿಸುವುದಕ್ಕೆ ಶೀಘ್ರದಲ್ಲಿಯೇ ಅವಕಾಶ ಮಾಡಿಕೊಡಲಾಗುತ್ತದೆ. ಈ ಬಗ್ಗೆ ನಿಮ್ಮ ಗ್ರಾಹಕರನ್ನು ಅರಿಯಿರಿ (ಕೆವೈಸಿ) ಫಾರಂಗಳನ್ನು ಭರ್ತಿ ಮಾಡುವ ಪ್ರಕ್ರಿಯೆನ್ನು ಅವುಗಳು ಪೂರ್ತಿಗೊಳಿಸಬೇಕು ಎಂದು ಅಟಾರ್ನಿ ಜನರಲ್ ಮುಕುಲ್ ರೋಹಟಗಿ ಸುಪ್ರೀಂಕೋರ್ಟ್'ಗೆ ಅರಿಕೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಅವರು ಅಫಿಡವಿಟ್ ಅನ್ನೂ ನ್ಯಾಯಪೀಠಕ್ಕೆ ಸಲ್ಲಿಕೆ ಮಾಡಿದ್ದಾರೆ.
