ನವದೆಹಲಿ[ಜೂ.26]: ಪ್ರಧಾನಿ ನರೇಂದ್ರ ಮೋದಿ, 17ನೇ ಲೋಕಸಭೆಯ ಮೊದಲ ಅಧಿವೇಶನದ ವೇಳೆ ಕಾಂಗ್ರೆಸ್ ನಾಯಕರನ್ನು ಭರ್ಜರಿಯಾಗಿ ತರಾಟೆಗೆ ತೆಗೆದು ಕೊಂಡಿದ್ದಾರೆ. ರಾಷ್ಟ್ರಪತಿಗಳ ಭಾಷಣಕ್ಕೆ ವಂದನೆ ಸಲ್ಲಿಸುವ ನಿರ್ಣಯದ ಮೇಲೆ ಮಂಗಳವಾರ ಭಾಷಣ ಮಾಡಿದ ಪ್ರಧಾನಿ ಮೋದಿ, ತುರ್ತುಪರಿಸ್ಥಿತಿ, ಹಿರಿಯ ನಾಯಕರಿಗೆ ಗೌರವ ಸಲ್ಲಿಸದ ಕಾಂಗ್ರೆಸ್‌ನ ಪರಿಪಾಠ, ಕೇವಲ ಗಾಂಧೀ ನೆಹರೂ ಕುಟುಂಬದ ಓಲೈಕೆ, ತ್ರಿವಳಿ ತಲಾಖ್ ಸೇರಿದಂತೆ ಹಲವು ವಿಷಯಗಳನ್ನು ಪ್ರಸ್ತಾಪಿಸಿ ಕಾಂಗ್ರೆಸ್ ನಾಯಕರಿಗೆ ಮಾತಿನ ಪಂಚ್ ನೀಡಿದರು. ಜೊತೆಗೆ ಬಿಜೆಪಿಯ 2ನೇ ಅವಧಿಯ ಗೆಲುವು, ಸರ್ಕಾರ ಕೈಗೊಂಡ ಕ್ರಮಗಳ ಬಗ್ಗೆ ಪ್ರಸ್ತಾಪಿಸಿದರು

ತಮ್ಮ ವಿರುದ್ಧ ಕೀಳು ಹೇಳಿಕೆ ನೀಡಿದ ಕಾಂಗ್ರೆಸ್ ನಾಯಕ ಅಧೀರ್ ರಂಜನ್‌ಗೆ ತಿರುಗೇಟು ನೀಡಿದ ಮೋದಿ, ‘ನೀವು ಎಷ್ಟು ಎತ್ತರಕ್ಕೆ ಏರುತ್ತೀರೋ, ನಾನು ಅಷ್ಟೇ ಸಂತೋಷಪಡುತ್ತೇನೆ’ ಎಂದು ಹೇಳಿದರು.

* ಸೋನಿಯಾ, ರಾಹುಲ್ ಜೈಲಿಗೆ ಹಾಕೋದು ನಾವಲ್ಲ ಕೆಲ ವ್ಯಕ್ತಿಗಳನ್ನು (ಸೋನಿಯಾ, ರಾಹುಲ್) ಜೈಲಿಗೆ ಕಳುಹಿಸದೇ ಇದ್ದದ್ದಕ್ಕೆ ನಮ್ಮನ್ನು ಟೀಕಿಸಲಾಗುತ್ತಿದೆ. ಇದಕ್ಕೆ ಕಾರಣವೇನೆಂದರೆ, ಯಾರನ್ನು ಬೇಕಾದರೂ ಜೈಲಿಗೆ ತಳ್ಳುವ ತುರ್ತು ಪರಿಸ್ಥಿತಿ ಸಮಯವಲ್ಲ. ಈ ವಿಷಯವನ್ನು ನ್ಯಾಯಾಂಗ ನಿರ್ವಹಿಸುತ್ತದೆ. ಕಾನೂ ನು ತನ್ನ ಕೆಲಸ ಮಾಡುವುದಕ್ಕೆ ನಾವು ಬಿಟ್ಟಿದ್ದೇವೆ.

* ಕಾಂಗ್ರೆಸ್‌ಗೆ ಮುಸ್ಲಿಂ ಅಭಿವೃದ್ಧಿ ಬೇಕಿಲ್ಲ ಮುಸ್ಲಿಮರ ಅಭಿವೃದ್ಧಿ ಕಾಂಗ್ರೆಸ್‌ನ ಹೊಣೆಯಲ್ಲ. ಅವರು ಗಟಾರದಲ್ಲೇ ಇರಬೇಕೆಂದು ಬಯಸಿದ್ದರೆ ಅಲ್ಲೇ ಇರಲಿ ಎಂದು ಶಾ ಬಾನೋ ಪ್ರಕರಣದ ವೇಳೆ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹೇಳಿ ದ್ದರಂತೆ. ಇದೇನಾ ನಿಮ್ಮ ಕಳಕಳಿ. ನಾವು ಮತ್ತೆ ಆ ಮಸೂದೆ ಮಂಡಿಸಿದ್ದೇವೆ. ಅದನ್ನು ಬೆಂಬಲಿಸಿ.

* ನಿಮಗೆ ನೆಲವೇ ಕಾಣೋಲ್ಲ ಕಾಂಗ್ರೆಸ್ಸಿಗರು ತಮ್ಮ ಭ್ರಮೆಯಲ್ಲಿ ಅದೆಷ್ಟು ಮೇಲೇರಿ ನಿಂತಿದ್ದಾರೆ ಎಂದರೆ ಅವರಿಗೆ ನೆಲವೇ ಕಾಣೋಲ್ಲ. ನಿಮ್ಮ ಬೇರುಗಳನ್ನೇ ನೀವು ಮರೆ ತಿದ್ದೀರಿ. ಮೇಲೇರಿ ನಿಂತ ನೀವು ಕೆಳಗಿದ್ದವರೆಲ್ಲಾ ಕೀಳು ಎಂದೇ ಪರಿಗಣಿಸಿದ್ದೀರಿ. ನೀವು ಮೇಲೇರಿದಷ್ಟೂ ನಮಗೆ ಸಂತಸವೇ ಸರಿ.

* ತುರ್ತು ಪರಿಸ್ಥಿತಿ ಮರೆಯಲ್ಲ ಹಲವು ಚರ್ಚೆಗಳ ವೇಳೆ ನೀವು ನಮ್ಮ ಬಗ್ಗೆ ತುರ್ತು ಪರಿಸ್ಥಿತಿ ಆರೋಪ ಮಾಡುತ್ತೀರಿ. ಇಂದು ಜೂನ್ 25. 1974ರಲ್ಲಿ ದೇಶದ ಮೇಲೆ ತುರ್ತುಪರಿಸ್ಥಿತಿ ಹೇರಿದವರು ಯಾರು? ಆ ಕರಾಳ ದಿನಗಳನ್ನು ನಾವು ಎಂದಿಗೂ ಮರೆಯುವುದಿಲ್ಲ.

* ಸಿಂಗ್ ಈಸ್ ಕಿಂಗ್ ಅಲ್ಲ ನೀವು ಎಂದಾದರೂ ನಿಮ್ಮದೇ ನಾಯಕ ನರಸಿಂಹರಾವ್ ಅವರ ಸರ್ಕಾರ ಸಾಧನೆ ಮೆಚ್ಚಿದ್ದೀರಾ? ಒಮ್ಮೆಯಾದರೂ ಮಾಜಿ ಪ್ರಧಾನಿ ಮನಮೋಹನ್‌ಸಿಂಗ್ ಅವರ ಸಾಧನೆ ಪ್ರಸ್ತಾಪಿಸುವ ಧೈರ್ಯ ತೋರಿದ್ದಾರಾ?

* ಬಿಜೆಪಿಯ 2ನೇ ಗೆಲುವು ಯುಪಿಎ ಸರ್ಕಾರದಿಂದ ಪಾರಾ ಗಲು ಎನ್‌ಡಿಎಗೆ ಅವಕಾಶ ನೀಡಿ ದರು. ‘ನಾನು ಚುನಾವಣೆಯಲ್ಲಿ ಗೆಲುವು ಮತ್ತು ಸೋಲಿನ ಹೊರತಾಗಿ ಯೋಚಿಸುತ್ತೇನೆ. ದೇಶದ ಜನರ ಕಲ್ಯಾಣಕ್ಕಾಗಿ ಶ್ರಮಿಸುತ್ತೇನೆ.

* ಜನ ಪರ ಯೋಜನೆ ಕೆಲವು ವಾರಗಳ ಹಿಂದಷ್ಟೇ ನಾವು ಮತ್ತೊ ಮ್ಮೆ ಅಧಿಕಾರವನ್ನು ವಹಿಸಿಕೊಂಡಿದ್ದೇವೆ. ಹೊಸ ಸರ್ಕಾರದಲ್ಲಿ ನಾವು ಹಲವಾರು ಜನಪರ ನಿರ್ಧಾರಗಳನ್ನು ಕೈಗೊಂಡಿರುವುದಕ್ಕೆ ನನಗೆ ಸಂತೋಷವಿದೆ. ರೈತರು, ವ್ಯಾಪಾರಿಗಳು, ಯುವಕರು, ಮತ್ತು ಸಮಾಜದ ಇತರ ವಲಯಗಳಿಗೆ ಪ್ರಯೋಜನವಾಗುವ ನಿರ್ಧಾರಗಳನ್ನು ಕೈಗೊಳ್ಳಲಾಗುವುದು.

* ಜೈ ಅನುಸಂಧಾನ್ ಜೈ ಜವಾನ್ ಜೈ ಕಿಸಾನ್ ಘೋಷಣೆಗೆ ಮೋದಿ ಜೈ ಅನುಸಂಧಾನ್ ಎಂಬ ಘೋಷಣೆಯನ್ನು ಸೇರಿಸಿದರು. ಇಂದು ನಾವು ಜಲ ಸಂಪನ್ಮೂಲದ ಬಗ್ಗೆ ಮಾತನಾಡುವ, ‘ನಾನು ಡಾ| ಅಂಬೇಡ್ಕರ್ ಅವರನ್ನು ನೆನಪಿಸಿಕೊಳ್ಳುತ್ತೇನೆ. ಅಂಬೇಡ್ಕರ್ ಅವರು ನೀರಾವರಿ, ನೀರಿನ ಕಾಲುವೆ ನಿರ್ಮಾಣಕ್ಕೆ ಶ್ರದ್ಧೆಯಿಂದ ಕೆಲಸ ಮಾಡಿದ್ದರು.

* ಭ್ರಷ್ಟಾಚಾರದ ಬಗ್ಗೆ ನಮ್ಮ ದೇಶದಲ್ಲಿ ಭ್ರಷ್ಟಾಚಾರಕ್ಕೆ ಜಾಗವೇ ಇಲ್ಲ. ಭ್ರಷ್ಟಾಚಾರದ ವಿರುದ್ಧ ನಮ್ಮ ಹೋರಾಟ ಮುಂದುವರಿಯಲಿದೆ. ಶಕ್ತಿಶಾಲಿ, ಸುರಕ್ಷಿತ, ಅಭಿವೃದ್ಧಿ ಹೊಂದಿದ ಮತ್ತು ಎಲ್ಲರನ್ನೂ ಒಳಗೊಂಡ ಭಾರತವನ್ನು ನಿರ್ಮಿಸುವ ಕನಸನ್ನು ಈಡೇರಿಸಲು ನಾವೆಲ್ಲಾ ಒಟ್ಟಾಗಿ ಕಾರ್ಯನಿರ್ವಹಿಸಬೇಕಿದೆ.