ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಅವರ ಗೃಹ ಸಚಿವ ಹೊಣೆಗಾರಿಕೆ ನಾಳೆ ಮುಕ್ತಾಯಗೊಳ್ಳಲಿದ್ದು, ಈಗಾಗಲೇ ಅವರು ಈ ಹುದ್ದೆಗೆ ನೀಡಿರುವ ರಾಜೀನಾಮೆ ಪತ್ರ ಒಂದೆರಡು ದಿನಗಳಲ್ಲಿ ರಾಜ್ಯಪಾಲರಿಗೆ ರವಾನೆಯಾಗಲಿದೆ.
ಬೆಂಗಳೂರು (ಜೂ.20): ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಅವರ ಗೃಹ ಸಚಿವ ಹೊಣೆಗಾರಿಕೆ ನಾಳೆ ಮುಕ್ತಾಯಗೊಳ್ಳಲಿದ್ದು, ಈಗಾಗಲೇ ಅವರು ಈ ಹುದ್ದೆಗೆ ನೀಡಿರುವ ರಾಜೀನಾಮೆ ಪತ್ರ ಒಂದೆರಡು ದಿನಗಳಲ್ಲಿ ರಾಜ್ಯಪಾಲರಿಗೆ ರವಾನೆಯಾಗಲಿದೆ.
ಇದರ ಬೆನ್ನಲ್ಲೇ ಮುಂದಿನ ಗೃಹ ಸಚಿವ ಯಾರು? ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಖಾತೆಯನ್ನು ತಾವೇ ನಿಭಾಯಿಸಲಿದ್ದಾರೆಯೇ ಅಥವಾ ಬೇರೆ ಯಾರಿಗಾದರೂ ನೀಡಲಿದ್ದಾರೆಯೇ? ನೀಡಲಿದ್ದರೆ, ಯಾವಾಗ ಎಂಬ ಬಗ್ಗೆ ಕಾಂಗ್ರೆಸ್ ವಲಯದಲ್ಲಿ ತೀವ್ರ ಚರ್ಚೆ ಆರಂಭವಾಗಿದೆ. ಮೂಲಗಳ ಪ್ರಕಾರ ಪರಮೇಶ್ವರ್ ಅವರೇ ಈ ಹೊಣೆಗಾರಿಕೆಯನ್ನು ಇನ್ನೂ ಕೆಲ ತಿಂಗಳು ನಿರ್ವಹಿಸಲಿ ಎಂಬ ಉದ್ದೇಶ ಸಿಎಂ ಸಿದ್ದರಾಮಯ್ಯ ಅವರಿಗೆ ಇತ್ತು. ಈ ಬಗ್ಗೆ ಸಿಎಂ ಅವರು ಒಂದೆರಡು ಬಾರಿ ಪರಮೇಶ್ವರ್ ಅವರಿಗೆ ಸೂಚನೆಯನ್ನೂ ನೀಡಿದ್ದರು. ಸಿಎಂ ಅವರ ಈ ನಿಲುವಿಗೆ ಸಂಪುಟದ ಬಹುತೇಕ ಹಿರಿಯ ಸಚಿವರು ತಾವು ಹಾಲಿ ನಿರ್ವಹಿಸುತ್ತಿರುವ ಖಾತೆಯನ್ನು ತ್ಯಜಿಸಿ ಗೃಹ ಖಾತೆಯನ್ನು ವಹಿಸಿಕೊಳ್ಳಲು ಸಿದ್ಧರಿಲ್ಲದಿರುವುದು ಕಾರಣ ಎನ್ನಲಾಗುತ್ತಿದೆ. ಆದರೆ, ಈಗಾಗಲೇ ರಾಜೀನಾಮೆ ನೀಡಿರುವುದರಿಂದ ಅಧಿಕಾರಿ ವರ್ಗಕ್ಕೆ ಸ್ಪಷ್ಟ ಸಂದೇಶ ಹೋಗಿದೆ. ಇನ್ನೂ ಖಾತೆಯಲ್ಲಿ ಮುಂದುವರೆದರೆ ನಿಯಂತ್ರಣ ಕಷ್ಟ ಎಂಬ ಕಾರಣಕ್ಕೆ ಪರಮೇಶ್ವರ್ ಅವರು ಹೊಣೆಗಾರಿಕೆ ಸಾಕು ಎಂದು ಸಿಎಂ ಅವರಿಗೆ ಸ್ಪಷ್ಟವಾಗಿ ತಿಳಿಸಿದ್ದಾರೆ ಎಂದು ಮೂಲಗಳು ಹೇಳಿವೆ. ಹೀಗಾಗಿ ಪರಮೇಶ್ವರ್ ಅವರು ಗೃಹ ಖಾತೆಗೆ ನೀಡಿರುವ ರಾಜೀನಾಮೆಯನ್ನು ಸಿದ್ದರಾಮಯ್ಯ ಅವರು ಒಂದೆರಡು ದಿನಗಳಲ್ಲಿ ರಾಜ್ಯಪಾಲರಿಗೆ ಕಳುಹಿಸುವ ಸಾಧ್ಯತೆ ಹೆಚ್ಚಿದೆ.
ಸದ್ಯಕ್ಕೆ ಸಿಎಂ ಬಳಿಯೇ ಗೃಹ ಖಾತೆ:
ಪರಮೇಶ್ವರ್ ಶೀಘ್ರ ಖಾತೆಯಿಂದ ವಿಮುಕ್ತಿ ಪಡೆಯಲು ಬಯಸಿರುವುದು ಹಾಗೂ ಹಿರಿಯ ಸಚಿವರು ಈ ಖಾತೆಯನ್ನು ವಹಿಸಿಕೊಳ್ಳಲು ಸಜ್ಜಾಗದೇ ಇರುವುದರಿಂದ ಸಚಿವ ಸಂಪುಟ ವಿಸ್ತರಣೆವರೆಗೂ ಗೃಹ ಖಾತೆಯನ್ನು ತಾತ್ಕಾಲಿಕವಾಗಿ ತಾವೇ ನಿರ್ವಹಿಸಲು ಸಿಎಂ ಸಿದ್ದರಾಮಯ್ಯ ನಿರ್ಧರಿಸಿದ್ದಾರೆ ಎಂದು ಅವರ ಆಪ್ತ ವಲಯಗಳು ಹೇಳುತ್ತವೆ. ವಾಸ್ತವವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಖಾತೆಯನ್ನು ನಿರ್ವಹಿಸುವಂತೆ ತಮ್ಮ ಆಪ್ತ ಸಚಿವ ಮಹದೇವಪ್ಪ ಅವರಿಗೆ ಸೂಚಿಸಿದ್ದರು. ಆದರೆ, ಲೋಕೋಪಯೋಗಿ ಖಾತೆಯಂತಹ ಮಹತ್ವದ ಖಾತೆ ಹೊಣೆ ಹೊತ್ತಿರುವ ಮಹದೇವಪ್ಪ ಗೃಹ ಖಾತೆಯ ಭಾರವನ್ನು ಹೊರಲು ತಯಾರಿಲ್ಲ. ಇನ್ನು ಕೆ.ಜೆ. ಜಾರ್ಜ್ ಅವರಂತೂ ಸುತರಾಂ ಈ ಹೊಣೆಗಾರಿಕೆಗೆ ತಯಾರಿಲ್ಲ ಎನ್ನಲಾಗಿದೆ. ಇನ್ನು ಕಾಂಗ್ರೆಸ್ ಹೈಕಮಾಂಡ್ ಈ ಹೊಣೆಯನ್ನು ಇಂಧನ ಸಚಿವ ಡಿ.ಕೆ. ಶಿವಕುಮಾರ್ ಅವರಿಗೆ ನೀಡಬಹುದೇ ಪರಿಶೀಲಿಸಿ ಎಂದು ಸಿಎಂ ಸಿದ್ದರಾಮಯ್ಯ ಅವರಿಗೆ ಸೂಚಿಸಿದೆ. ಆದರೆ, ಶಿವಕುಮಾರ್‌ಗೆ ಈ ಖಾತೆಯನ್ನು ನೀಡಲು ಸಿಎಂ ಸಿದ್ದರಾಮಯ್ಯ ಸುತರಾಂ ತಯಾರಿಲ್ಲ. ಹೀಗಾಗಿ ಹಿರಿಯ ಸಚಿವರಾದ ದೇಶಪಾಂಡೆ ಹಾಗೂ ಎಚ್.ಕೆ.ಪಾಟೀಲ್ ಅವರಂತಹ ಹೆಸರುಗಳು ಚಾಲ್ತಿಗೆ ಬಂದಿದೆ. ಆದರೆ, ಈ ಯಾವ ಸಚಿವರೂ ತಾವು ಹಾಲಿ ನಿರ್ವಹಿಸುತ್ತಿರುವ ಖಾತೆಯ ಬದಲಿಗೆ ಗೃಹ ಖಾತೆ ಹೊಣೆ ಹೊರಲು ತಯಾರಿಲ್ಲ. ಬದಲಾಗಿ, ಹೆಚ್ಚುವರಿಯಾಗಿ ಗೃಹ ಖಾತೆ ದೊರಕಿದರೆ ನಿರ್ವಹಿಸಲು ಸಿದ್ಧರಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಮಹತ್ವದ ಗೃಹ ಖಾತೆಯನ್ನು ಹೆಚ್ಚುವರಿಯಾಗಿ ನೀಡಲು ಸಿಎಂ ಸಿದ್ದರಾಮಯ್ಯ ಅವರಿಗೆ ಮನಸಿಲ್ಲ.
ಈ ಸಂಕೀರ್ಣ ಸಂದರ್ಭವನ್ನು ನಿಭಾಯಿಸಲು ಸಿದ್ದರಾಮಯ್ಯ ಎರಡು ರೀತಿಯ ಚಿಂತನೆ ಹೊಂದಿದ್ದಾರೆ ಎಂದು ಅವರ ಆಪ್ತ ಮೂಲಗಳು ಹೇಳುತ್ತವೆ. 1. ತಾವೇ ಈ ಖಾತೆಯನ್ನು ತಮ್ಮ ಆಪ್ತ ಹಾಗೂ ಗೃಹ ಸಚಿವರ ಸಲಹೆಗಾರರಾದ ಕೆಂಪಯ್ಯ ಅವರ ನೆರವಿನಿಂದ ನಿರ್ವಹಿಸುವುದು. 2. ಸಂಪುಟ ವಿಸ್ತರಣೆ ವೇಳೆ ಹಿರಿಯ ಸಚಿವರಲ್ಲಿ ಕೆಲವರ ಖಾತೆಗಳನ್ನು ಬದಲಾವಣೆ ಮಾಡುವುದು. ಆ ಸಂದರ್ಭದಲ್ಲಿ ಒಬ್ಬರಿಗೆ ಗೃಹ ಖಾತೆಯನ್ನು ಪರಿಪೂರ್ಣವಾಗಿ ವಹಿಸುವುದು. ಈ ಎರಡರ ಪೈಕಿ ಯಾವ ಹಾದಿಯನ್ನು ಅಂತಿಮವಾಗಿ ತುಳಿಯಲಿದ್ದಾರೆ ಎಂಬುದನ್ನು ಕಾದು ನೋಡಬೇಕು.
