‘ಧರ್ಮದ ಆಧಾರದ ಮೇಲೆ ದೇಶ ವಿಭಜನೆ ಐತಿಹಾಸಿಕ ತಪ್ಪು’| ಲೋಕಸಭೆಯಲ್ಲಿ ಗುಡುಗಿದ ಕೇಂದ್ರ ಗೃಹ ಸಚಿವ ಅಮಿತ್ ಶಾ| ದೇಶ ವಿಭಜನೆಗೆ ನೆಹರೂ ಕಾರಣ ಎಂದು ದೂಷಿಸಿದ ಅಮಿತ್ ಶಾ| ‘ಕಾಶ್ಮೀರದ ಇಂದಿನ ಬಿಕ್ಕಟ್ಟಿಗೆ ನೆಹರೂ ತಪ್ಪು ನೀತಿಗಳೇ ಕಾರಣ’| ಅಮಿತ್ ಶಾ ಆರೋಪಕ್ಕೆ ಕೆರಳಿದ ಕಾಂಗ್ರೆಸ್ ಸದಸ್ಯರು| ‘ಕಣಿವೆಯಲ್ಲಿ ಭಾರತ ವಿರೋಧಿ ಧೋರಣೆಯನ್ನು ಕೇಂದ್ರ ಸರ್ಕಾರ ಬದಲಿಸಲಿದೆ’|
ನವದೆಹಲಿ(ಜೂ.28): ಅವಿಭಜಿತ ಭಾರತವನ್ನು ಧರ್ಮದ ಆಧಾರದ ಮೇಲೆ ವಿಭಜನೆ ಮಾಡುವ ಮೂಲಕ, ಮಾಜಿ ಪ್ರಧಾನಿ ಜವಾಹರ್ ಲಾಲ್ ನೆಹರೂ ದೊಡ್ಡ ತಪ್ಪು ಮಾಡಿದರು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಆರೋಪಿಸಿದ್ದಾರೆ.
ಲೋಕಸಭೆಯಲ್ಲಿ ಇಂದು ಮಾತನಾಡಿದ ಅಮಿತ್ ಶಾ, ಕಾಶ್ಮೀರದ ಇಂದಿನ ಬಿಕ್ಕಟ್ಟು ಮತ್ತು ಸಮಸ್ಯೆಗಳಿಗೆ ನೆಹರೂ ವರ ನೀತಿಗಳೇ ಕಾರಣ ಎಂದು ದೂರಿದರು.
ಧರ್ಮದ ಆಧಾರದ ಮೇಲೆ ದೇಶ ವಿಭಜನೆ ಮಾಡಿದ್ದು ಐತಿಹಾಸಿಕ ತಪ್ಪು ಎಂದ ಶಾ, ದೇಶದ ಮೊದಲ ಪ್ರಧಾನಿಯ ತಪ್ಪು ನೀತಿಗಳಿಂದಾಗಿ ದೇಶ ಇಂದಿಗೂ ಬೆಲೆ ತೆರುತ್ತಿದೆ ಎಂದು ಹರಿಹಾಯ್ದರು.
ಇನ್ನು ನೆಹರೂ ಹೆಸರು ಪ್ರಸ್ತಾಪವಾಗುತ್ತಿದ್ದಂತೇ ಕೆರಳಿದ ಕಾಂಗ್ರೆಸ್ ಸದಸ್ಯರು, ದೇಶ ಕಟ್ಟಿದ ಮಹಾನ್ ನಾಯಕನಿಗೆ ಗೃಹ ಸಚಿವರು ಅವಮಾನ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಇದಕ್ಕೆ ತಿರುಗೇಟು ನೀಡಿದ ಅಮಿತ್ ಶಾ, ಇಂದು ಮೂರನೇ ಒಂದು ಭಾಗದಷ್ಟು ಜಮ್ಮು ಮತ್ತು ಕಾಶ್ಮೀರ ಭಾರತದ ಹತೋಟಿಯಲ್ಲಿ ಇಲ್ಲ. ಈ ಪರಿಸ್ಥಿತಿಗೆ ಯಾರು ಕಾರಣ ಎಂದು ಮರು ಪ್ರಶ್ನಿಸಿದರು.
ಕಾಶ್ಮೀರದಲ್ಲಿ ಬದಲಾವಣೆಯ ಗಾಳಿ ಬೀಸುತ್ತಿದ್ದು, ಕಣಿವೆಯಲ್ಲಿ ಭಾರತ ವಿರೋಧಿ ಧೋರಣೆಯನ್ನು ಕೇಂದ್ರ ಸರ್ಕಾರ ಬದಲಿಸಲು ಮುಂದಾಗಿದೆ ಎಂದು ಶಾ ನುಡಿದರು.
