ಆಡಳಿತ ಮತ್ತು ಸರ್ಕಾರ ನಡೆಸುವ ವಿಷಯದಲ್ಲಿ ನಾವು ಕೊಡುವ ಸಲಹೆಯೇ ಪಕ್ಷ ವಿರೋಧಿ ಚಟುವಟಿಕೆಯಾಗಿದೆ. ಇಷ್ಟಕ್ಕೂ ಜನರ ಸಮಸ್ಯೆ ಕುರಿತು ಚರ್ಚಿಸುವ ಸಿಎಲ್‌ಪಿ ಸಭೆಗೆ ನೋಟಿಸ್ ನೀಡುವ ಅಧಿಕಾರವೇ ಇಲ್ಲ.
ಮೈಸೂರು(ಫೆ.26): ಜನಸಾಮಾನ್ಯರ ಸಮಸ್ಯೆ ಕುರಿತು ಚರ್ಚಿಸಬೇಕಾದ ಸಿಎಲ್ಪಿ (ಕಾಂಗ್ರೆಸ್ ಶಾಸಕಾಂಗ ಪಕ್ಷ) ಸಭೆಗೆ ನೋಟಿಸ್ ಕೊಡುವ ಅಧಿಕಾರವೇ ಇಲ್ಲ. ಆದರೂ ಪಕ್ಷದಿಂದ ನನ್ನನ್ನು ತೆಗೆಯಬೇಕೆಂದೇ ಇದ್ದರೆ ವಜಾ ಮಾಡಿ ಬಿಡಿ ಎಂದು ಮಾಜಿ ಸಂಸದ ಎಚ್. ವಿಶ್ವನಾಥ್ ಕಿಡಿಕಾರಿದರು.
ನಗರದಲ್ಲಿ ಶನಿವಾರ ಕಾಂಗ್ರೆಸ್ ನಿಷ್ಠಾವಂತ ಮುಖಂಡರು, ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ನಾನೊಬ್ಬ ನಿಷ್ಠಾವಂತ ಕಾಂಗ್ರೆಸ್ಸಿಗ. ನಾನು ಪಕ್ಷದಲ್ಲಿ ಉಳಿಯಬೇಕಾ? ಅವಮಾನ ಸಹಿಸಿಕೊಂಡು ಇರಬೇಕಾ ಎಂದು ಸಭೆಯಲ್ಲಿ ಹಾಜರಿದ್ದ ಮುಖಂಡರ ಮುಂದೆ ಪ್ರಶ್ನಿಸುವ ಮೂಲಕ ಅಭಿಪ್ರಾಯ ಸಂಗ್ರಹಿಸಿದರು.
ಆಡಳಿತ ಮತ್ತು ಸರ್ಕಾರ ನಡೆಸುವ ವಿಷಯದಲ್ಲಿ ನಾವು ಕೊಡುವ ಸಲಹೆಯೇ ಪಕ್ಷ ವಿರೋಧಿ ಚಟುವಟಿಕೆಯಾಗಿದೆ. ಇಷ್ಟಕ್ಕೂ ಜನರ ಸಮಸ್ಯೆ ಕುರಿತು ಚರ್ಚಿಸುವ ಸಿಎಲ್ಪಿ ಸಭೆಗೆ ನೋಟಿಸ್ ನೀಡುವ ಅಧಿಕಾರವೇ ಇಲ್ಲ. ನಿಮಗೆ ಸಾಮಾನ್ಯಜ್ಞಾನ (ಕಾಮನ್ ಸೆನ್ಸ್) ಇದೆಯಾ? ತಲೆ ಇದೆಯಾ? ಎಂದು ವರಿಷ್ಠರನ್ನು ತರಾಟೆಗೆ ತೆಗೆದುಕೊಂಡರು.
ಈ ವೇಳೆ ಸಿಎಂ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಅವರು, ಪಕ್ಷದಿಂದ ತೆಗೆಯಬೇಕಿದ್ದರೆ, ತೆಗೆದುಬಿಡಿ. ಅವಮಾನ ಮಾಡಬೇಡಿ. ಕಾಂಗ್ರೆಸ್ಗಾಗಿ ನಾನು 40 ವರ್ಷದಿಂದ ದುಡಿದಿದ್ದೇನೆ. ನನ್ನ ಸೇವೆ ಗಮನಿಸದೆ ನೋಟಿಸ್ ಕೊಡುತ್ತೇವೆ ಎಂದರೆ, ಮುಖಂಡರು, ಕಾರ್ಯಕರ್ತರು ಮತ್ತು ಪಕ್ಷಕ್ಕಾಗಿ ದುಡಿದವರ ಗತಿ ಏನು? ಪಕ್ಷದಲ್ಲಿನ ಇಂಥ ನಡವಳಿಕೆ ಹೇಗೆ ಪರಿಣಾಮ ಬೀರಲಿದೆ. ನನಗೆ ಅಧಿಕೃತವಾಗಿ ನೋಟಿಸ್ ಬಂದಿಲ್ಲ ಎಂದರು.
