ಅತ್ಯಾಧುನಿಕ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುವುದರಲ್ಲಿ ಮುಂಚೂಣಿಯಲ್ಲಿರುವ ಚೀನಾದಿಂದ ಮತ್ತೊಂದು ಸಾಧನೆ | ಎಚ್‌ಐವಿ ಪ್ರೂಫ್ ಅವಳಿ ಹೆಣ್ಣು ಮಕ್ಕಳ ಸೃಷ್ಟಿ | ಜಗತ್ತೇ ನಿಬ್ಬೆರಗಾಗುವಂತೆ ಮಾಡಿದೆ ಈ ಅಚ್ಚರಿ 

ಹಾಂಕಾಂಗ್ (ನ.27): ವಿಶ್ವದ ಅತಿ ಉದ್ದದ ಸೇತುವೆ, ಅತಿ ಎತ್ತರದ ರೈಲು ಮಾರ್ಗ ಹಾಗೂ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುವುದರಲ್ಲಿ ಮುಂಚೂಣಿಯಲ್ಲಿರುವ ಚೀನಾ, ಇದೀಗ ಎಚ್‌ಐವಿ ನಿರೋಧಕ ಅವಳಿ ಹೆಣ್ಣು ಮಕ್ಕಳನ್ನು ಸೃಷ್ಟಿಸಿದೆ. 

ವಂಶವಾಹಿಯನ್ನೇ ತಿರುಚಿ ಮಾಡಲಾದ ವಿಶ್ವದ ಮೊದಲ ಸಂಶೋಧನೆ ಇದಾಗಿದ್ದು, ವೈಜ್ಞಾನಿಕ ಸಮುದಾಯದಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಚೀನಾದ ವಿಜ್ಞಾನಿ ಪ್ರೊ. ಹೀ ಜಿಯಾನ್‌ಕುಯ್ ಅವರು ಈ ಸಂಶೋಧನೆಯ ಪಿತಾಮಹ. ಸಂಶೋಧನೆ ಯಶಸ್ವಿಯಾಗಿದ್ದು, ಕೆಲವು ವಾರಗಳ ಹಿಂದೆ ೨ ಅವಳಿ ಹೆಣ್ಣುಮಕ್ಕಳ ಜನನವಾಗಿದೆ. ಈ ಇಬ್ಬರೂ ಮಕ್ಕಳಿಗೆ ಎಚ್‌ಐವಿ ಸೋಂಕು ತಗುಲದಂತೆ ಡಿಎನ್‌ಎಯಲ್ಲೇ ಮಾರ್ಪಾಡು ಮಾಡಲಾಗಿದೆ ಎಂದು ಘೋಷಣೆ ಮಾಡಿದ್ದಾರೆ. ಈ ಕುರಿತಂತೆ ಯುಟ್ಯೂಬ್‌ನಲ್ಲಿ ವಿಡಿಯೋವೊಂದನ್ನೂ ಬಿತ್ತರಿಸಿದ್ದಾರೆ.

ಅಮೆರಿಕದ ಸ್ಟಾನ್‌ಫೋರ್ಡ್ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡಿರುವ ಹಾಗೂ ದಕ್ಷಿಣ ಚೀನಾದ ಶೆಂಜೆನ್ ನಗರದ ಪ್ರಯೋಗಾಲಯವೊಂದರಲ್ಲಿ ಕಾರ್ಯ ನಿರ್ವಹಿಸುತ್ತಿರುವ ಈ ಪ್ರೊಫೆಸರ ಪ್ರಕಾರ, ‘ಅತ್ಯಂತ ನಿಖರವಾಗಿ ವಂಶವಾಹಿಯನ್ನು ತೆಗೆದು, ಆ ಜಾಗಕ್ಕೆ ಬೇರೆಯದನ್ನು ಅಳವಡಿಸಲು ‘ಇ್ಕಐಖಕ್ಕೃ’ ಎಂಬ ವಿಧಾನ ಬಳಸಲಾಗಿದೆ. ಕೃತಕ ಗರ್ಭಧಾರಣೆ ವಿಧಾನದಡಿ ಈ ಮಕ್ಕಳನ್ನು ಹೆರಲಾಗಿದೆ.

ಅದಕ್ಕೂ ಮುನ್ನ ಅಂಡಾಣುವನ್ನು ಅಂಡಾಶಯಕ್ಕೆ ಅಳವಡಿಕೆ ಮಾಡುವ ಮೊದಲು ಅದರ ಡಿಎನ್‌ಎಯನ್ನು ಮಾರ್ಪಡಿಸಲಾಗಿದೆ. ಭವಿಷ್ಯದಲ್ಲಿ ಈ ಮಕ್ಕಳು ಎಚ್‌ಐವಿ ಸೋಂಕಿಗೆ ತುತ್ತಾಗದಂತೆ ವಂಶವಾಹಿಗೆ ಸರ್ಜರಿ ಮಾಡಲಾಗಿದೆ.’ ಈ ಕುರಿತು ಇನ್ನಷ್ಟು ಮಾಹಿತಿ ಬಯಲಾಗಿಲ್ಲ. ಮಂಗಳವಾರ ಹಾಂಕಾಂಗ್‌ನಲ್ಲಿ ವಿಶ್ವ ವಿಜ್ಞಾನಿಗಳ ಸಮ್ಮೇಳನ ನಡೆಯಲಿದ್ದು, ಹೆಚ್ಚಿನ ವಿವರ ದೊರೆಯುವ ಸಂಭವವಿದೆ.

ಈ ಸಂಶೋಧನ ವೈಜ್ಞಾನಿಕ ಸಮುದಾಯದಲ್ಲಿ ವಾಕ್ಸಮರಕ್ಕೆ ನಾಂದಿ ಹಾಡಿದೆ. ಇಂತಹ ಸಂಶೋಧನೆ ನಡೆದಿರುವ ಬಗ್ಗೆಯೇ ಅನುಮಾನವಿದೆ ಎಂದು ಕೆಲ ವಿಜ್ಞಾನಿಗಳು ಹೇಳಿದ್ದರೆ, ಇನ್ನೂ ಕೆಲವರು ಇದು ಆಧುನಿಕ ಸುಸಂತಾನ (ಉತ್ತಮ ಸಂತಾನ ಪಡೆಯುವುದಕ್ಕೆ ಸಂಬಂಧಿಸಿದ ವಿಜ್ಞಾನ) ಆಗಿದೆ ಎಂದು ಬಣ್ಣಿಸಿದ್ದಾರೆ.

ಭ್ರೂಣದಲ್ಲಿ ಬದಲಾವಣೆ ಮಾಡುವುದರಿಂದ ಭವಿಷ್ಯದ ಪೀಳಿಗೆಗೂ ಅದು ಸಾಗುತ್ತದೆ. ಇದರಿಂದ ಒಟ್ಟಾರೆ ಇಡೀ ವಂಶವಾಹಿಗಳ ಗುಚ್ಛದ ಮೇಲೆಯೇ ಪರಿಣಾಮವಾಗುವ ಸಾಧ್ಯತೆ ಇದೆ ಎಂದೂ ಹೇಳಿದ್ದಾರೆ.