ಇದು ವಿಪರ್ಯಾಸವಾದ್ರೂ ನಿಜ. ನಾವು-ನೀವು ನಂಬಲೇಬೇಕು. ಇಂಗ್ಲೆಂಡ್ ತಂಡ ಭಾರತ ಪ್ರವಾಸ ಕೈಗೊಂಡಾಗ ಭಾರತದಲ್ಲಿ ಯಾವುದಾದ್ರೂ ಒಂದು ಆಹಿತಕರ ಘಟನೆ ನಡೆಯುತ್ತದೆ. ಒಂದಲ್ಲ ಎರಡಲ್ಲ ಹಲವು ಬಾರಿ ಇದು ಸಾಬೀತಾಗಿದೆ. ಕೆಲವ್ರಿಗೆ ಇದು ತಮಾಷೆ ಎನಿಸಿದ್ರೂ ಇದು ಸತ್ಯ. 1984ರಿಂದ 2016ವರೆಗಿನ ಆ ದುರ್ಘಟನೆಗಳು ಇಲ್ಲಿವೆ ನೋಡಿ.

ಬೆಂಗಳೂರು: ಇಂಗ್ಲೆಂಡ್​ ಕ್ರಿಕೆಟ್ ತಂಡ ಭಾರತ ಪ್ರವಾಸ ಕೈಗೊಂಡಿದೆ ಅಂದ್ರೆ ಸಾಕು ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಭಯ ಶುರುವಾಗುತ್ತದೆ. ಕಳೆದ ಮೂರು ದಶಕಗಳಿಂದ ಕ್ರಿಕೆಟ್​ ಫಾಲೋ ಮಾಡುತ್ತಿರುವವರಿಗೆ ಈ ವಿಷಯ ತಿಳಿದಿದೆ. ಭಾರತಕ್ಕೆ ಇಂಗ್ಲೆಂಡ್​ ತಂಡ ಆಗಮಿಸಿದರೆ ಸಾಕು ಇಲ್ಲಿ ಒಂದು ದೊಡ್ಡ ದುರಂತ ನಡೆಯುವುದು ಖಚಿತ. ಕಳೆದ ಮೂರು ದಶಕದಲ್ಲಿ ಇಂಗ್ಲೆಂಡ್​ ತಂಡ ಅಪ್ರಿಯ ಘಟನೆಗಳ ಬಿಸಿ ಅನುಭವಿಸಿದೆ.

1984ರಲ್ಲಿ ಇಂದಿರಾಗಾಂಧಿ ಹತ್ಯೆ
1984ರಲ್ಲಿ ಇಂಗ್ಲೆಂಡ್​ ತಂಡ 5 ಟೆಸ್ಟ್'​ಗಳ ಸರಣಿ ಆಡಲು ಭಾರತ ಪ್ರವಾಸಕೈಗೊಂಡಿತ್ತು. ನವೆಂಬರ್​​ 28ರಂದು ಇಂಗ್ಲೆಂಡ್​ ಮೊಹಾಲಿಯಲ್ಲಿ ಅಭ್ಯಾಸ ಪಂದ್ಯವಾಡಬೇಕಿತ್ತು. ಆದರೆ ಅಕ್ಟೋಬರ್​ 31ರಂದೇ ಇಂದಿರಾಗಾಂಧಿ ಹತ್ಯೆಯಾಯ್ತು. ಹಾಗಾಗಿ ಪಂಜಾಬ್'​ನ ಮೊಹಾಲಿಯಲ್ಲಿ ಬಿಗುವಿನ ವಾತಾವರಣ ಮುಂದುವರೆಯಿತು. ಇಂಧಿರಾಗಾಂಧಿ ಹತ್ಯೆಯಿಂದಾಗಿ ಹಲವು ದಿನಗಳ ಕಾಲ ಇಂಗ್ಲೆಂಡ್ ತಂಡ ಅಭ್ಯಾಸ ಪಂದ್ಯವಿಲ್ಲದೆ ಹೊಟೇಲ್'​ನಲ್ಲೇ ದಿನ ಕಳೆಯುವಂತಹ ಇಕ್ಕಟ್ಟಿಗೆ ಸಿಲುಕಿತ್ತು.

1993ರಲ್ಲಿ ಮುಂಬೈ ಬಾಂಬ್​ ಬ್ಲಾಸ್ಟ್​:
1993ರಲ್ಲಿ ಇಂಗ್ಲೆಂಡ್​ ತಂಡ ಜನವರಿಯಿಂದ ಮಾರ್ಚ್'ವರೆಗೆ ಏಕದಿನ ಮತ್ತು ಟೆಸ್ಟ್ ಸರಣಿ ಆಡಲು ಭಾರತ ಪ್ರವಾಸ ಕೈಗೊಂಡಿತ್ತು. ಇಂಗ್ಲೆಂಡ್​ ಫೆಬ್ರವರಿ 19ರಿಂದ 23ವರೆಗೆ ಮುಂಬೈನಲ್ಲಿ 3ನೇ ಟೆಸ್ಟ್​ ಆಡಿತ್ತು. ಆದರೆ ಇದಾದ ತತ್'ಕ್ಷಣ ಮುಂಬೈ ಭೀಕರ ಬಾಂಬ್​ ಬ್ಲಾಸ್ಟ್'​ನಿಂದ ಬಳಲಿತು. ಅಹ್ಮದಾಬಾದ್'​​ನಲ್ಲಿ 4ನೇ ಏಕದಿನ ಪಂದ್ಯ ಆಡಬೇಕಿತ್ತು. ಆದರೆ ಅಲ್ಲಿ ಪರಿಸ್ಥಿತಿ ತೀರ ಹದಗೆಟ್ಟ ಕಾರಣ, ಇಂಗ್ಲೆಂಡ್​ ತಂಡದ ಆಟಗಾರರಿಗೂ ಸೂಕ್ತ ಭದ್ರತೆ ನೀಡುವುದು ಭಾರತ ಸರ್ಕಾರಕ್ಕೆ ಕಷ್ಟವಾಗಿತ್ತು. ಹಾಗಾಗಿ ಪಂದ್ಯವನ್ನು ಬೆಂಗಳೂರಿಗೆ ಸ್ಥಳಾಂತರಿಸಲಾಯ್ತು.

2008ರಲ್ಲಿ ಭಯೋತ್ಪಾದಕರ ದಾಳಿ:
2008ರಲ್ಲಿ ಇಂಗ್ಲೆಂಡ್​ ತಂಡ ಎರಡು ಟೆಸ್ಟ್ ಮತ್ತು 7 ಏಕದಿನ ಪಂದ್ಯಗಳ ಸರಣಿಯಾಡಲು ಭಾರತಕ್ಕೆ ಆಗಮಿಸಿತ್ತು. ನವೆಂಬರ್ 9ರಿಂದ ಡಿಸೆಂಬರ್​ 23ರ ತನಕ ಭಾರತ ಪ್ರವಾಸ ಕೈಗೊಂಡಿತ್ತು. ನವೆಂಬರ್​ 26ರಂದು ಮುಂಬೈನಲ್ಲಿ ಭೀಕರ ಭಯೋತ್ಪಾದಕ ದಾಳಿ ನಡೆಯಿತು. ಆ ವೇಳೆ ಭಾರತ-ಇಂಗ್ಲೆಂಡ್​ ತಂಡ ಕಟಕ್'​ನಲ್ಲಿ ಏಕದಿನ ಪಂದ್ಯವಾಡುತ್ತಿದ್ದವು. ಇದಾದ ಮೇಲೆ ಅಹ್ಮದಾಬಾದ್​​ ಮತ್ತು ಮುಂಬೈನಲ್ಲಿ ಎರಡು ಟೆಸ್ಟ್​ ಆಡಬೇಕಿತ್ತು. ಪರಿಸ್ಥಿತಿ ತುಂಬಾ ಸೂಕ್ಷ್ಮವಾಗಿದ್ದರಿಂದ ಆ ಟೆಸ್ಟ್​'ಗಳು ಚೆನ್ನೈ ಮತ್ತು ಮೊಹಾಲಿಗೆ ಸ್ಥಳಾಂತರಿಸಲಾಯ್ತು.

2012ರಲ್ಲಿ ಅಜ್ಮಲ್​'ಗೆ ಗಲ್ಲು ಶಿಕ್ಷೆ:
2012ರ ಅಕ್ಟೋಬರ್​ 27ರಿಂದ 2013 ಜನವರಿ 27ರ ತನಕ ಇಂಗ್ಲೆಂಡ್​ ತಂಡ ಭಾರತ ಪ್ರವಾಸ ಕೈಗೊಂಡಿತ್ತು. ಈ ವೇಳೆ 2008ರ ಭಯೋತ್ಪಾದಕ ದಾಳಿಯಲ್ಲಿ ಸೆರೆ ಸಿಕ್ಕಿದ್ದ ಉಗ್ರ ಅಜ್ಮಲ್ ಕಸಬ್'​​ಗೆ ನವೆಂಬರ್​ 21ರಂದು ಗಲ್ಲು ಶಿಕ್ಷೆ ನೀಡಲಾಯ್ತು. ಕಸಬ್​ ಪರ ವಿರೋಧ ವಾದವಿವಾದ ನಡುವೆಯೇ ಗಲ್ಲು ಶಿಕ್ಷೆ ನೀಡುವ ಮೂಲಕ ಭಾರತದ ಕರಾಳ ಅಧ್ಯಾಯಕ್ಕೆ ಕಾರಣವಾಗಿದ್ದ ಉಗ್ರನ ಕಥೆ ಮುಗಿದಿತ್ತು. ಆ ಸಮಯದಲ್ಲೂ ಸ್ವಲ್ಪ ಆತಂಕದ ವಾತಾವರಣವಿದ್ರೂ ಸರಾಗವಾಗಿ ಸರಣಿ ಮುಗಿಯಿತು.

2016ರ ಪ್ರವಾಸದಲ್ಲಿ ಜಯಲಲಿತಾ ನಿಧನ ಮತ್ತು ಚಂಡಮಾರುತ:
75 ದಿನಗಳಿಂದ ಆನಾರೋಗ್ಯದಿಂದ ಬಳಲುತ್ತಿದ್ದ ಜಯಲಲಿತಾ, ಡಿ.5ರಂದು ನಿಧನರಾದರು. ಹಾಗಾಗಿ ಅಲ್ಲಿ ನಡೆಯಬೇಕಿದ್ದ ರಣಜಿ ಪಂದ್ಯಗಳು ಸ್ಥಳಾಂತರವಾದವು. ಚೆನ್ನೈ ಸೇರಿದಂತೆ ಪೂರ್ವ ಕರಾವಳಿ ಭಾಗದಲ್ಲಿ ವಾರ್ಧ ಚಂಡಮಾರುತ ಅಬ್ಬರಿಸುತ್ತಿದೆ. 10ಕ್ಕೂ ಹೆಚ್ಚು ಜನರು ಬಲಿಯಾಗಿದ್ದಾರೆ. ಡಿಸೆಂಬರ್​ 16ರಿಂದ ಚೆನ್ನೈನಲ್ಲಿ ನಡೆಯುವ ಭಾರತ-ಇಂಗ್ಲೆಂಡ್​ 5ನೇ ಟೆಸ್ಟ್ ನಡೆಯಬೇಕಿದೆ. ಆ ಪಂದ್ಯಕ್ಕೆ ಅಮ್ಮನ ಸಾವು ಮತ್ತು ಚಂಡಮಾರುತದ ಕರಿನೆರಳು ಬೀಳುವ ಸಾಧ್ಯತೆ ಇದೆ.

ಭಯ ಹುಟ್ಟಿಸುವ ಇಂಗ್ಲೆಂಡ್​ ಪ್ರವಾಸ:
ಇಂಗ್ಲೆಂಡ್​ ತಂಡ ಭಾರತ ಪ್ರವಾಸ ಕೈಗೊಂಡರೆ ಸಾಕು ಒಂದು ರೀತಿಯ ಭಯ ಶುರುವಾಗುತ್ತದೆ. ಇಂಗ್ಲೆಂಡ್​ ತಂಡದ ವೇಳೆ ಭಾರತದಲ್ಲಿ ಏನೇನು ಅನಾಹುತವಾಗಿವೆಯೆಂಬುದು ಆಂಗ್ಲ ಆಟಗಾರರ ಪ್ರವಾಸದ ಇತಿಹಾಸ ತಿಳಿದವರಿಗೆ ಗೊತ್ತು. ಹಲವರಿಗೆ ಇದು ಕಾಕತಾಳಿಯವೆನಿಸಿದ್ರೂ ಇಂಗ್ಲೆಂಡ್​ ಪ್ರವಾಸವಂತೂ ಎಂದು ಮರೆಯಲಾಗದ ಒಂದು ಅನುಭವ.

- ರವಿ ಎಸ್., ಸ್ಪೋರ್ಟ್ಸ್ ಬ್ಯೂರೋ, ಸುವರ್ಣನ್ಯೂಸ್