ಬೆಂಗಳೂರು: ಸ್ಥಳೀಯ ಭಾಷೆಗಳಲ್ಲಿ ಗ್ರಾಹಕರ ಜೊತೆ ವ್ಯವಹಾರ ನಡೆಸಬೇಕೆಂಬ ಸತತ ಮನವಿ, ಹೋರಾಟ, ಪ್ರತಿಭಟನೆಗಳಿಗೆ ಕ್ಯಾರೇ ಎನ್ನದ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಒಂದಾದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಈಗ ಹಿಂದಿ ಭಾಷೆಯಲ್ಲಿ ಸಂದೇಶ ಕಳಿಸುವ ಮೂಲಕ ಹಿಂದಿ ಹೇರಿಕೆ ಮಾಡಲು ಹೊರಟಿದೆ.

ಖಾತೆಗಳಲ್ಲಿರುವ ಹಣ ಕ್ರೆಡಿಟ್ ಅಥವಾ ಡೆಬಿಟ್ ಆದ ನಂತರ ಇಲ್ಲಿಯವರೆಗೆ ಇಂಗ್ಲಿಷ್‌ನಲ್ಲಿ ಬರುತ್ತಿದ್ದ ಸಂದೇಶದ ಭಾಷೆಯನ್ನು ಬದಲಾಯಿಸಿ ಹಿಂದಿಯಲ್ಲಿ ಸಂದೇಶ ಕಳುಹಿಸುವ ಹೊಸ ಪದ್ಧತಿ ಆರಂಭಿಸಲಾಗಿದೆ. ಇಂಗ್ಲಿಷ್’ನಲ್ಲಿ ಬರುತ್ತಿದ್ದ ಸಂದೇಶಗಳನ್ನು ಹಿಂದಿಯಲ್ಲಿ ಕಳುಹಿಸುತ್ತಿರುವುದು ಕನ್ನಡಿಗರನ್ನು ತಬ್ಬಿಬ್ಬು ಮಾಡಿದೆ.

ಇಂಗ್ಲಿಷ್‌ನಲ್ಲಿ ಸಂದೇಶ ಬಂದರೆ ಒಂದು ಹಂತಕ್ಕೆ ತಿಳಿದುಕೊಳ್ಳಲು ಸಹಕಾರಿಯಾಗುತ್ತೆ. ಅದೇ ಹಿಂದಿಯಲ್ಲಿ ಕಳುಹಿಸಿದರೆ ಭಾಷೆ ತಿಳಿಯದಿರುವುದರಿಂದ ತಮ್ಮ ಖಾತೆಗಳಲ್ಲಿನ ವ್ಯವಹಾರ ಏನಾಗುತ್ತಿದೆ ಎಂಬುದನ್ನು ತಿಳಿಯುವುದೇ ದೊಡ್ಡ ಸವಾಲಾಗಿದೆ.

ತಮಗೆ ಸಂದೇಶ ಬಂದಿರುವ ಕುರಿತು ಮಾತನಾಡಿದ ಬ್ಯಾಂಕ್ ಗ್ರಾಹಕ ಕಾಂತರಾಜ್ ಎಂಬುವರು, ಮಂಡ್ಯದಲ್ಲಿರುವ ಭಾರತೀಯ ಸ್ಟೇಟ್ ಬ್ಯಾಂಕ್‌ನಲ್ಲಿ ಖಾತೆ ಹೊಂದಿದ್ದೇನೆ. ಮೈಸೂರು ಬ್ಯಾಂಕ್, ಸ್ಟೇಟ್ ಬ್ಯಾಂಕ್‌ನೊಂದಿಗೆ ವಿಲೀನವಾದ ಬಳಿಕ ಪ್ರತಿ ಬಾರಿ ಎಟಿಎಂನಲ್ಲಿ ಹಣ ವಿತ್‌ಡ್ರಾ ಮಾಡಿದ ವೇಳೆ ಹಿಂದಿಯಲ್ಲಿಯೇ ಸಂದೇಶ ಬರುತ್ತಿದೆ. ನನಗೆ ಹಿಂದಿ ಓದಲು ಮತ್ತು ಬರೆಯಲು

ಬರುವುದಿಲ್ಲ. ಇದೀಗ ಹಿಂದಿಯಲ್ಲಿನ ಸಂದೇಶದಲ್ಲಿ ಸಂಖ್ಯೆಯನ್ನು ಹೊರತುಪಡಿಸಿ ಏನೇನೂ ತಿಳಿಯುತ್ತಿಲ್ಲ ಎಂದು ಅಳಲು ತೋಡಿಕೊಂಡರು.