ಕನ್ನಡಪರ ಸಂಘಟನೆಗಳ ಹೋರಾಟ ಮತ್ತು ರಾಜ್ಯ ಸರ್ಕಾರದ ಸ್ಪಷ್ಟ ಸೂಚನೆಗೆ ಕೊನೆಗೂ ಮಣಿದಿರುವ ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್) ‘ನಮ್ಮ ಮೆಟ್ರೋ’ ನಿಲ್ದಾಣಗಳಲ್ಲಿನ ಹಿಂದಿ ನಾಮಫಲಕಗಳನ್ನು ತೆರವುಗೊಳಿಸುವ ಕಾರ್ಯಕ್ಕೆ ಕೈ ಹಾಕಿದೆ.
ಬೆಂಗಳೂರು (ಆ.04): ಕನ್ನಡಪರ ಸಂಘಟನೆಗಳ ಹೋರಾಟ ಮತ್ತು ರಾಜ್ಯ ಸರ್ಕಾರದ ಸ್ಪಷ್ಟ ಸೂಚನೆಗೆ ಕೊನೆಗೂ ಮಣಿದಿರುವ ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್ಸಿಎಲ್) ‘ನಮ್ಮ ಮೆಟ್ರೋ’ ನಿಲ್ದಾಣಗಳಲ್ಲಿನ ಹಿಂದಿ ನಾಮಫಲಕಗಳನ್ನು ತೆರವುಗೊಳಿಸುವ ಕಾರ್ಯಕ್ಕೆ ಕೈ ಹಾಕಿದೆ.
ಆರಂಭಿಕ ಹಂತವಾಗಿ ಮೆಜೆಸ್ಟಿಕ್, ಕೆ.ಆರ್.ಮಾರುಕಟ್ಟೆ, ಚಿಕ್ಕಪೇಟೆ ಮೆಟ್ರೋ ನಿಲ್ದಾಣಗಳಲ್ಲಿನ ಹಿಂದಿ ನಾಮಫಲಕಗಳನ್ನು ತೆರವು ಮಾಡಿರುವ ಬಿಎಂಆರ್ಸಿಎಲ್ ಅಧಿಕಾರಿಗಳು, ಉಳಿದೆಲ್ಲಾ ನಿಲ್ದಾಣಗಳಲ್ಲೂ ಕೂಡ ಹಂತ ಹಂತವಾಗಿ ಹಿಂದಿ ನಾಮಫಲಕಗಳನ್ನು ತೆರವು ಮಾಡಲು ನಿರ್ಧರಿಸಿದ್ದಾರೆ. ಇದರೊಂದಿಗೆ ಮುಂದಿನ ಕೆಲ ದಿನಗಳಲ್ಲಿ ನಮ್ಮ ಮೆಟ್ರೋದ ಎಲ್ಲಾ ನಿಲ್ದಾಣಗಳಲ್ಲೂ ಹಿಂದಿ ಮರೆಯಾಗಲಿದ್ದು, ‘ಮೆಟ್ರೋದಲ್ಲಿ ಹಿಂದಿ ಹೇರಿಕೆ’ ವಿರುದ್ಧ ಕನ್ನಡಿಗರು ನಡೆಸಿದ ಹೋರಾಟಕ್ಕೆ ಜಯ ದೊರೆತಂತಾಗಲಿದೆ. ಮೆಜೆಸ್ಟಿಕ್, ಚಿಕ್ಕಪೇಟೆ ಮತ್ತು ಕೆ.ಆರ್.ಮಾರುಕಟ್ಟೆ ಮೆಟ್ರೋ ನಿಲ್ದಾಣಗಳಲ್ಲಿ ತ್ರಿಭಾಷೆಯಲ್ಲಿ ಮಾಹಿತಿ ಇರುವ ನಾಮಫಲಕಗಳನ್ನು ತೆರವು ಮಾಡಲಾಗಿದೆ. ಅವುಗಳಿಗೆ ಪ್ರತಿಯಾಗಿ ಕನ್ನಡ ಮತ್ತು ಇಂಗ್ಲಿಷ್ನಲ್ಲಿ ಮಾಹಿತಿ ಇರುವ ಪರ್ಯಾಯ ಫಲಕಗಳನ್ನು ಅಳವಡಿಸಲು ಸಿದ್ಧತೆ ನಡೆಯುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಹಿಂದಿ ನಾಮಫಲಕ ತೆರವು ವಿಚಾರವಾಗಿ ಬಿಎಂಆರ್ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್ ಸಿಂಗ್ ಖರೋಲಾ ಅವರು ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ. ಆದರೆ, ಮಾಹಿತಿ ಪ್ರಕಾರ, ಉತ್ತರ ದಕ್ಷಿಣ ಕಾರಿಡಾರ್ನ ಮೆಜೆಸ್ಟಿಕ್ನಿಂದ ಯಲಚೇನಹಳ್ಳಿ ನಡುವೆ ಬರುವ ೩ ಸುರಂಗ ನಿಲ್ದಾಣ ಸೇರಿದಂತೆ 11 ನಿಲ್ದಾಣಗಳಲ್ಲಿದ್ದ ಹಿಂದಿ ಫಲಕಗಳನ್ನು ತೆರವುಗೊಳಿಸಲು ಆಯಾ ನಿಲ್ದಾಣಗಳ ನಿಯಂತ್ರಕರಿಗೆ ಸೂಚಿಸಲಾಗಿದೆ. ಅದರಂತೆ ಹಿಂದಿ ನಾಮಫಲಕ ತೆರವು ಕಾರ್ಯ ಆರಂಭವಾಗಿದ್ದು, ಗುರುವಾರ ಮೆಜೆಸ್ಟಿಕ್ನ ಚಿಕ್ಕಲಾಲ್ಬಾಗ್ ಭಾಗದ ದ್ವಾರ, ಚಿಕ್ಕಪೇಟೆ ಮತ್ತು ಕೆ.ಆರ್.ಮಾರುಕಟ್ಟೆ ಸೇರಿದಂತೆ ಇನ್ನೂ ಕೆಲ ನಿಲ್ದಾಣಗಳಲ್ಲಿ ಹಿಂದಿ ನಾಮಫಲಕ ತೆರವುಗೊಳಿಸಿ ಕನ್ನಡ ಮತ್ತು ಇಂಗ್ಲಿಷ್ ಭಾಷಾ ನಾಮಫಲಕಗಳನ್ನು ಮಾತ್ರ ಉಳಿಸಿಕೊಂಡಿದೆ. ಇನ್ನು ಕೆಲವೆಡೆ ಒಂದೇ ಫಲಕದಲ್ಲಿದ್ದ ಮೂರೂ ಭಾಷೆಯ ಮಾಹಿತಿಯಲ್ಲಿ ಹಿಂದಿ ಭಾಷೆಯಲ್ಲಿರುವ ಮಾಹಿತಿ ಮೇಲೆ ಸ್ಟಿಕ್ಕರ್ ಅಂಟಿಸಿರುವುದು ಕಂಡುಬಂದಿದೆ.
ನಮ್ಮ ಮೆಟ್ರೋದಲ್ಲಿ ಹಿಂದಿ ಹೇರಿಕೆ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ ಸೇರಿದಂತೆ ಹಲವು ಕನ್ನಡಪರ ಸಂಘಟನೆಗಳು ನಿರಂತರ ಹೋರಾಟ ನಡೆಸಿದ್ದವು. ಇದರ ಜತೆಗೆ ರಾಜ್ಯ ಸರ್ಕಾರ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮೂಲಕ ಮೆಟ್ರೋ ನಿಲ್ದಾಣಗಳಲ್ಲಿ ಹಿಂದಿ ನಾಮಫಲಕ ಅಳವಡಿಕೆ ಪ್ರಶ್ನಿಸಿ ಬಿಎಂಆರ್ಸಿಎಲ್ಗೆ ಎರಡು ಬಾರಿ ನೋಟಿಸ್ ಜಾರಿ ಮಾಡಿತ್ತು. ನೋಟಿಸ್ಗೆ ತತ್ತರಿಸಿದ್ದ ಮೆಟ್ರೋ ಅಧಿಕಾರಿಗಳು ಬೇರೆ ಬೇರೆ ರಾಜ್ಯಗಳ ಮೆಟ್ರೋದಲ್ಲಿ ಹಿಂದಿ ಬಳಕೆ ಇರುವುದಾಗಿ ನೀಡಿದ್ದ ಸಮರ್ಥನೆ ಸಹಿಸದ ಪ್ರಾಧಿಕಾರ ಬೇರೆ ರಾಜ್ಯಗಳದ್ದು ನಮಗೆ ಬೇಡ, ಕರ್ನಾಟಕದಲ್ಲಿ ದ್ವಿಭಾಷಾ ಸೂತ್ರ ಅಳವಡಿಸಿಕೊಂಡಿದ್ದು, ಕನ್ನಡ ಮತ್ತು ಇಂಗ್ಲಿಷ್ ಬಿಟ್ಟು ಹಿಂದಿ ನಾಮಫಲಕ ತೆರವು ಮಾಡುವಂತೆ ಸೂಚನೆ ನೀಡಿತ್ತು.
ಇದರ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡ ಕೇಂದ್ರ ನಗರಾಭಿವೃದ್ಧಿ ಇಲಾಖೆಗೆ ಪತ್ರ ಬರೆದು ರಾಜ್ಯದಲ್ಲಿ ದ್ವಿಭಾಷಾ ಸೂತ್ರ ಅಳವಡಿಸಿಕೊಳ್ಳಲಾಗಿದ್ದು, ಅದರಂತೆ ನಮ್ಮ ಮೆಟ್ರೋಗೂ ಇದೇ ನೀತಿ ಅನ್ವಯಿಸುತ್ತದೆ. ಹಾಗಾಗಿ ಬೆಂಗಳೂರಿನ ಮೆಟ್ರೋ ನಿಲ್ದಾಣಗಳಲ್ಲಿ ಹಿಂದಿ ಬಳಕೆ ಮಾಡದಂತೆ ಪತ್ರ ಬರೆದಿದ್ದರು. ಹಿಂದೆಯೇ ಬಿಎಂಆರ್ಸಿಎಲ್ಗೂ ಪತ್ರ ಬರೆದು ಮೆಟ್ರೋ ನಿಲ್ದಾಣಗಳಲ್ಲಿ ಅಳವಡಿಸಿರುವ ಹಿಂದಿ ನಾಮಫಲಕಗಳನ್ನು ತೆರವುಗೊಳಿಸಿ, ಎಲ್ಲಡೆ ಕನ್ನಡ ಮತ್ತು ಇಂಗ್ಲಿಷ್ ನಾಮಫಲಕಗಳು ಮಾತ್ರ ಇರುವಂತೆ ಮರುವಿನ್ಯಾಸಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು.
