ಇಲ್ಲಿನ ರಾಯಚೂರು ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ಇದೇ ಡಿ.2,3  ಮತ್ತು 4 ರಂದು ಜರುಗಲಿರುವ 82 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡದ ಕಂಪು, ಸಾಹಿತ್ಯ, ಸಂಸ್ಕೃತಿಯ ಪರಿಮಳ ಹರಿಸಲು ತಂತ್ರಾಂಶ, ಯಂತ್ರೋಪಕರಣಗಳ ಎತೃಚ್ಛ ಬಳಕೆ, ನೋಟು ರದ್ದತಿನ ಹೊಡೆತಕ್ಕೆ ಸಿಲುಕದಂತೆ ಸಮಸ್ಯೆ ಪರಿಹಾರಕ್ಕೆ ಮಾರ್ಗೋಪಾಯಗಳನ್ನು ಕಂಡುಕೊಳ್ಳಲಾಗಿದೆ.

ರಾಮಕೃಷ್ಣ ದಾಸರಿ

ರಾಯಚೂರು (ನ.26): ಇಲ್ಲಿನ ರಾಯಚೂರು ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ಇದೇ ಡಿ.2,3 ಮತ್ತು 4 ರಂದು ಜರುಗಲಿರುವ 82 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡದ ಕಂಪು, ಸಾಹಿತ್ಯ, ಸಂಸ್ಕೃತಿಯ ಪರಿಮಳ ಹರಿಸಲು ತಂತ್ರಾಂಶ, ಯಂತ್ರೋಪಕರಣಗಳ ಎತೃಚ್ಛ ಬಳಕೆ, ನೋಟು ರದ್ದತಿನ ಹೊಡೆತಕ್ಕೆ ಸಿಲುಕದಂತೆ ಸಮಸ್ಯೆ ಪರಿಹಾರಕ್ಕೆ ಮಾರ್ಗೋಪಾಯಗಳನ್ನು ಕಂಡುಕೊಳ್ಳಲಾಗಿದೆ.

ಮೂರು ದಿನಗಳ ಅಕ್ಷರ ಜಾತ್ರೆಗೆ ಹೈಟೆಕ್ ಟಚ್ ನೀಡುವುದರ ಮೂಲಕ ನುಡಿ ಹಬ್ಬದ ಸಂಭ್ರಮಕ್ಕೆ ಅತ್ಯಾಧುನಿಕ ಯಂತ್ರಜ್ಞಾನದ ಸೊಗಡಿನ ಮಿಲನಕ್ಕೆ ಜಿಲ್ಲಾಡಳಿತ ಮುಂದಾಗಿದೆ.

ಏನೇನು ವಿಶೇಷತೆ:

ಕೃಷಿ ವಿವಿ ಆವರಣದಲ್ಲಿ ನಿರ್ಮಾಣವಾಗುತ್ತಿರುವ ಬೃಹತ್ ವೇದಿಕೆ ಮತ್ತು ಮಳಿಗೆಗಳನ್ನು ಜಪಾನ್ ತಂತ್ರಜ್ಞಾನದಿಂದ ಇದೇ ಮೊದಲ ಬಾರಿಗೆ ಬಳಸಲಾಗುತ್ತಿದೆ. ಸಾಹಿತ್ಯ ಸಮ್ಮೇಳನದ ವಸತಿ, ಊಟ, ಪ್ರತಿನಿಧಿಗಳ ನೋಂದಣಿ, ಜಿಲ್ಲೆಯ ಮಾಹಿತಿ ಸೇರಿದಂತೆ ಸಮಗ್ರ ಮಾಹಿತಿ ಒಳಗೊಂಡಿರುವ ವೆಬ್ ಸೈಟ್‌ಸಹ ಸಿದ್ಧಗೊಂಡಿದ್ದು ಅದರ ಜೊತೆಗೆ ಫೆಸ್‌ಬುಕ್ ಖಾತೆ, ವಾಟ್ಸ್‌ಆಪ್, ಮೆಸೆಜ್‌ಗಳ ಮೂಲಕ ಸಂದೇಶ ಕಾಲ ಕಾಲಕ್ಕೆ ರವಾನಿಸಲಾಗುತ್ತಿದೆ. ಕೃಷಿ ವಿವಿ ಆವರಣದಲ್ಲಿ ಪ್ರಧಾನ, ಸಮನಾಂತರ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ವೇದಿಕೆ ಸೇರಿದಂತೆ ಆಯ್ದ ಪ್ರದೇಶಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸುತ್ತಿದ್ದು, ಸಮ್ಮೇಳನಾಧ್ಯಕ್ಷರ ಮೆರವಣಿಗೆಯಲ್ಲಿ ಡ್ರೋಣ್ ಕ್ಯಾಮೆರಾದ ಅಗತ್ಯತೆ ಬಿದ್ದಲ್ಲಿ ಅದನ್ನು ಬಳಸಲಾಗುತ್ತಿದೆ. ಅಧಿಕ ಸ್ಪೀಡ್‌ನ ಅಂತರ್ಜಾಲ ಸಂಪರ್ಕ, ಸುಮಾರು ೬೦೦ ಕ್ಕು ಹೆಚ್ಚಿನ ಮೊಬೈಲ್ ಶೌಚಾಲಯ ಸಿದ್ಧವಾಗುತ್ತಿವೆ. ಮೂರು ದಿನಗಳ ಊಟದ ವ್ಯವಸ್ಥೆಯಲ್ಲಿ ಜನರ ಸಂಖ್ಯೆ ಜಾಸ್ತಿಯಾದಲ್ಲಿ ಮಿನಿ ಟ್ರ್ಯಾಕ್ಟರ್‌ಗಳ ಮೂಲಕ ಮೊಬೈಲ್ ಊಟಕ್ಕು ಸಿದ್ಧತೆ ಮಾಡಿಕೊಳ್ಳಾಗುತ್ತಿದೆ.

ವಾಕಿಟಾಕ್‌ನಿಂದ ಕೆಲಸ ಸಲೀಸು:
ಸಮ್ಮೇಳನದ ಸಿದ್ಧತೆಯಲ್ಲಿರುವ ವಿವಿಧ ಉಪ ಸಮಿತಿಗಳಲ್ಲಿ ಸಂವಹನ, ಸಂಪರ್ಕ. ಸಮನ್ವಯತೆ ಕೊರತೆ ಎದುರಾಗದಂತೆ ಮೇಲುಸ್ತುವಾರಿ ಅಧಿಕಾರಿಗಳಿಗೆ ವಾಕಿಟಾಕಿ ನೀಡಿ ಕಟ್ಟದ ಕೆಲಸವನ್ನು ಸಲೀಸಾಗಿ ಮಾಡಲಾಗುತ್ತಿದೆ. ಡಿಸಿ ಕಚೇರಿಯಲ್ಲಿರುವ ಕಂಟ್ರೋಲ್ ರೂಮ್‌ನಿಂದ ಸಂದೇಶ ರವಾನಿಸಿ ಅಗತ್ಯ ಕೆಲಸ ಮಾಡಲಾಗುತ್ತಿದೆ.

ನೋಟಿನ ಸಮಸ್ಯೆಗೆ ಪರಿಹಾರ:
ದೇಶಾದ್ಯಂತ ನೋಟು ರದ್ದತಿ ಎಬ್ಬಿಸಿರುವ ಗೊಂದಲದಲ್ಲಿ ಸಮ್ಮೇಳನ ನಡೆಸುತ್ತಿರುವುದರಿಂದ ಈ ಸಮಸ್ಯೆ ಎದುರಾಗದಂತೆ ಮುನ್ನೆಚ್ಚರಿಕೆ ವಹಿಸಲಾಗಿದ್ದು, ಎಸ್‌ಬಿಐ ಜೊತೆ ಮಾತುಕತೆ ನಡೆಸಿದ ಜಿಲ್ಲಾಡಳಿತ ವಿವಿ ಆವರಣದಲ್ಲಿರುವ ಎಟಿಎಂಗೆ ನಿರಂತರ ಹಣ ಜಮ ಮಾಡುವುದು, ಡಿಜಿಟಲ್ ಮನಿ ಟ್ರಾಸೆಕ್ಷನ್, ಮೈಕ್ರೋ ಎಟಿಎಂಗಳ ಸ್ಥಾಪನೆ, ಮಳಿಗೆಗಳಲ್ಲಿ ಸ್ವಯಿಪ್ ಯಂತ್ರ ಅಳವಡಿಸಿ ಸಮ್ಮೇಳನಕ್ಕೆ ಬರುವ ಲಕ್ಷಾಂತರ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಲಾಗಿದೆ.
ಈ ರೀತಿಯಾಗಿ ಕನ್ನಡ ಪರಂಪರತೆ, ಸಂಸ್ಕೃತಿ, ಸಾಹಿತ್ಯ, ಕಲಾ ವೈಭೋಗದ ಮೂರು ದಿನಗಳ ಅಕ್ಷರ ಜಾತ್ರೆಯಲ್ಲಿ ಅತ್ಯಾಧುನಿಕ ತಂತ್ರಜ್ಞಾನ, ತಂತ್ರಾಂಶಗಳು ಮತ್ತು ಯಂತ್ರಗಳ ಬಳಕೆಯು ಸಮ್ಮೇಳನಕ್ಕೆ ಇನ್ನಷ್ಟು ಸಂಭ್ರಮ ತರುವಂತಹ ನಿಟ್ಟಿನಲ್ಲಿ ಕಾರ್ಯೋನ್ಮೂಕವಾಗಿವೆ.

ಆಧುನಿಕಯುಗಕ್ಕೆ ತಕ್ಕಂತೆ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ತಂತ್ರಜ್ಞಾನ ಬಳಸಿಕೊಂಡು ಸಿದ್ಧತೆ ಕಾರ್ಯಗಳಲ್ಲಿ ತೊಡಗಿದ್ದು, ಸಿಸಿ ಕ್ಯಾಮೆರಾ ಅಳವಡಿಕೆ, ಡಿಜಿಟಲ್ ಹಣ ವ್ಯವಹಾರ, ವಾಕಿಟಾಕಿ, ವೆಬ್‌ಪೇಜ್ ನಿರ್ವಹಣೆಯಿಂದಾಗಿ ಕೆಲಸಗಳು ಸುಲಭವಾಗಿ ನಡೆಯುತ್ತಿವೆ.
ಗೋವಿಂದ ರೆಡ್ಡಿ ಎಡಿಸಿ ರಾಯಚೂರು