ಹಣ ಅಕ್ರಮ ವರ್ಗಾವಣೆ ದಂಧೆ ಮತ್ತು ನೋಟು ಬದಲಾವಣೆ ಮೂಲಕ ಕೋಟ್ಯಂತರ ರು. ಸಂಗ್ರಹಿಸಿದ ಆರೋಪದಡಿಯಲ್ಲಿ ಮಾಜಿ ಕಾರ್ಪೊರೇಟರ್ ವಿ.ನಾಗರಾಜ್ ಹಾಗೂ ಅವರ ಪುತ್ರರ ವಿರುದ್ಧ ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿರುವ ಏಳು ಪ್ರಕರಣಗಳ ತನಿಖೆಯನ್ನು ಸಿಬಿಐಗೆ ವಹಿಸುವಂತೆ ರಾಜ್ಯ ಸರ್ಕಾರಕ್ಕೆ ಆದೇಶಿಸಲು ಹೈಕೋರ್ಟ್ ನಿರಾಕರಿಸಿದೆ.

ಬೆಂಗಳೂರು (ಜು.21): ಹಣ ಅಕ್ರಮ ವರ್ಗಾವಣೆ ದಂಧೆ ಮತ್ತು ನೋಟು ಬದಲಾವಣೆ ಮೂಲಕ ಕೋಟ್ಯಂತರ ರು. ಸಂಗ್ರಹಿಸಿದ ಆರೋಪದಡಿಯಲ್ಲಿ ಮಾಜಿ ಕಾರ್ಪೊರೇಟರ್ ವಿ.ನಾಗರಾಜ್ ಹಾಗೂ ಅವರ ಪುತ್ರರ ವಿರುದ್ಧ ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿರುವ ಏಳು ಪ್ರಕರಣಗಳ ತನಿಖೆಯನ್ನು ಸಿಬಿಐಗೆ ವಹಿಸುವಂತೆ ರಾಜ್ಯ ಸರ್ಕಾರಕ್ಕೆ ಆದೇಶಿಸಲು ಹೈಕೋರ್ಟ್ ನಿರಾಕರಿಸಿದೆ.
ತನ್ನ ವಿರುದ್ಧ ದಾಖಲಿಸಿರುವ ಪ್ರಕರಣಗಳನ್ನು ಸಿಬಿಐ ತನಿಖೆಗೆ ವಹಿಸಲು ರಾಜ್ಯ ಸರ್ಕಾರಕ್ಕೆ ಆದೇಶಿಸುವಂತೆ ಕೋರಿ ವಿ.ನಾಗರಾಜ್ ಮತ್ತವರ ಪುತ್ರರಾದ ಎನ್.ಗಾಂಧಿ ಹಾಗೂ ಎನ್.ಶಾಸ್ತ್ರಿ ಸಲ್ಲಿಸಿದ್ದ ಅರ್ಜಿಗಳನ್ನು ವಜಾಗೊಳಿಸಿದ ನ್ಯಾಯಮೂರ್ತಿ ಅರವಿಂದ್ ಕುಮಾರ್ ಅವರಿದ್ದ ಏಕಸದಸ್ಯ ಪೀಠ, ಅರ್ಜಿದಾರರ ವಿರುದ್ಧ ಪ್ರಕರಣಗಳು ಗಂಭೀರ ಸ್ವರೂಪದಿಂದ ಕೂಡಿದೆ. ಈಗಾಗಲೇ ರಾಜ್ಯದ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ಹಂತದಲ್ಲೇ ಸಿಬಿಐ ತನಿಖೆ ವರ್ಗಾಯಿಸುವುದು ಸೂಕ್ತವಲ್ಲ ಎಂದು ಅಭಿಪ್ರಾಯಪಟ್ಟರು. ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ಎನ್.ರವೀಂದ್ರನಾಥ್ ಕಾಮತ್ ವಾದ ಮಂಡಿಸಿ, ಅರ್ಜಿದಾರರ ವಿರುದ್ಧ ಪೊಲೀಸರು ಪ್ರತ್ಯೇಕ ದೂರು ದಾಖಲಿಸಿದ್ದಾರೆ. ಅಕ್ರಮವಾಗಿ ನೋಟು ಬದಲಾವಣೆ ಮೂಲಕ ಕೋಟ್ಯಂತರ ರು. ಸಂಗ್ರಹಿಸಿದ ಆರೋಪ ಮಾಡಲಾಗಿದೆ. ಅರ್ಜಿದಾರ ವಿ.ನಾಗರಾಜ್ ರಾಜಕಾರಣಿಯಾಗಿದ್ದು, ದುರುದ್ದೇಶದಿಂದಲೇ ಪೊಲೀಸರು ಸುಳ್ಳು ದೂರು ದಾಖಲಿಸಿದ್ದಾರೆ. ಆದ್ದರಿಂದ ರಾಜ್ಯದ ಪೊಲೀಸರಿಂದ ನಿಷ್ಪಕ್ಷಪಾತ ತನಿಖೆ ನಡೆಯುವ ವಿಶ್ವಾಸ ಇಲ್ಲವಾಗಿದ್ದು, ತನಿಖೆಯನ್ನು ಸಿಬಿಐಗೆ ವಹಿಸಲು ಸರ್ಕಾರಕ್ಕೆ ಆದೇಶಿಸುವಂತೆ ಕೋರಿದರು.
ಈ ವಾದವನ್ನು ತೀವ್ರವಾಗಿ ಆಕ್ಷೇಪಿಸಿದ ಸರ್ಕಾರಿ ಅಭಿಯೋಜಕ ರಾಚಯ್ಯ, ಅರ್ಜಿದಾರರ ವಿರುದ್ಧ ಪ್ರಕರಣಗಳ ತನಿಖೆ ನಡೆಸಲು ರಾಜ್ಯ ಪೊಲೀಸರು ಸಮರ್ಥರಾಗಿದ್ದಾರೆ. ಈಗಾಗಲೇ ತನಿಖೆ ಬಹುತೇಕ ಪೂರ್ಣಗೊಂಡಿದೆ. ಈ ಹಂತದಲ್ಲಿ ತನಿಖೆಯನ್ನು ಸಿಬಿಐಗೆ ವಹಿಸಿದರೆ ರಾಜ್ಯ ಪೊಲೀಸರನ್ನು ಅವಮಾನಿಸಿದಂತಾಗುತ್ತದೆ ಹಾಗೂ ರಾಜ್ಯ ಪೊಲೀಸರ ನೈತಿಕ ಸ್ಥೈರ್ಯದ ಮೇಲೂ ದುಷ್ಪರಿಣಾಮ ಬೀರುತ್ತದೆ. ಹೀಗಾಗಿ, ಅರ್ಜಿದಾರರ ವಿರುದ್ಧ ಪ್ರಕರಣಗಳನ್ನು ಸಿಬಿಐ ತನಿಖೆ ವಹಿಸಲು ಸರ್ಕಾರಕ್ಕೆ ಆದೇಶಿಸಬಾರದು ಹಾಗೂ ಅರ್ಜಿ ವಜಾಗೊಳಿಸಬೇಕು ಎಂದು ಮನವಿ ಮಾಡಿದರು. ಸರ್ಕಾರಿ ವಕೀಲರ ವಾದ ಮಾನ್ಯ ಮಾಡಿದ ನ್ಯಾಯಪೀಠ ನಾಗರಾಜ್ ಮತ್ತವರ ಪುತ್ರರ ಅರ್ಜಿಗಳನ್ನು ವಜಾಗೊಳಿಸಿತು.