‘‘ನೀವು ಅಲ್ಲಿಗೆ ಹೋಗಿದ್ದೀರಿ, ನೀವೂ ಏನನ್ನೂ ವರದಿ ಸಲ್ಲಿಸಿಲ್ಲ. ನಿಮಗೆ ಎಲ್ಲ ಗೊತ್ತಿದೆ, ಆದರೆ ನೀವು ಏನೊಂದೂ ವಿವರ ನೀಡಿಲ್ಲ, ಕಾರಣ ನಿಮಗೇ ಚೆನ್ನಾಗಿ ಗೊತ್ತಿರಬಹುದು. ನೀವು ಸುಮ್ಮನಿದ್ದೀರಿ'' ಎಂದು ನ್ಯಾಯಮೂರ್ತಿ​ಗಳು ತಿಳಿಸಿದರು.

ಚೆನ್ನೈ: ತಮಿಳುನಾಡು ಮಾಜಿ ಸಿಎಂ ಜಯಲಲಿತಾ ನಿಧನಕ್ಕೆ ಸಂಬಂಧಿಸಿ ಮದ್ರಾಸ್‌ ಹೈಕೋರ್ಟ್‌ ಶಂಕೆ ವ್ಯಕ್ತಪಡಿ​ಸಿದ್ದು, ಅವರ ಮೃತದೇಹವನ್ನು ಯಾಕೆ ಹೊರತೆಗೆ​ಯಬಾರದು ಎಂದು ಪ್ರಶ್ನಿಸಿದೆ. ‘‘ಜಯಲ​ಲಿತಾ ನಿಧ​ನದ ಬಗ್ಗೆ ಮಾಧ್ಯಮಗಳೂ ಶಂಕೆ ವ್ಯಕ್ತಪಡಿಸಿವೆ, ಈ ಬಗ್ಗೆ ವೈಯಕ್ತಿಕವಾಗಿ ನನಗೂ ಸಂದೇಹಗಳಿವೆ,'' ಎಂದು ನ್ಯಾ. ಎಸ್‌ ವೈದ್ಯನಾಥನ್‌ ಹೇಳಿದ್ದಾರೆ. ಜಯಾ ಸಾವು ಶಂಕಾಸ್ಪದ​ವಾಗಿದ್ದು, ಈ ಬಗ್ಗೆ ತನಿಖೆಯಾಗಬೇಕೆಂದು ಆಗ್ರಹಿಸಿ ಎಐಎಡಿಎಂಕೆ ಕಾರ್ಯಕರ್ತ ಪಿಎ ಜೋಸೆಫ್‌ ಎಂಬ​ವರು ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿ ನ್ಯಾ. ವೈದ್ಯನಾಥನ್‌ ಅವರ​ನ್ನೊಳಗೊಂಡ ನ್ಯಾಯಪೀಠ ಈ ವಿಷಯ ತಿಳಿಸಿದೆ. ‘‘ಅವರು ಆಸ್ಪತ್ರೆಯಲ್ಲಿದ್ದಾಗ, ಸರಿಯಾಗಿ ಆಹಾರ ಸೇವಿಸುತ್ತಿದ್ದಾರೆ ಎಂದು ಮೊದ​ಲಿಗೆ ಹೇಳಲಾಗಿತ್ತು. ಕನಿಷ್ಠಪಕ್ಷ ಅವರು ನಿಧನರಾದ ಬಳಿಕವಾದರೂ ಸತ್ಯಾಂಶ ಹೊರಬೀಳಲಿ'' ಎಂದು ಕೋರ್ಟ್‌ ತಿಳಿಸಿದೆ. ಅಲ್ಲದೆ ಜಯಾ ಆರೋಗ್ಯಕ್ಕೆ ಸಂಬಂಧಿಸಿದ ಸಂಪೂರ್ಣ ವಿವರ ನೀಡುವಂತೆ ಕೋರ್ಟ್‌ ಸರ್ಕಾ​ರಕ್ಕೆ ಸೂಚಿಸಿದೆ.

ಅರ್ಜಿ ಪರ ಹಿರಿಯ ನ್ಯಾಯವಾದಿ ಕೆಎಂ ವಿಜ​ಯನ್‌ ವಾದಿಸಿದರೆ, ಸರ್ಕಾರದ ಪರ​ವಾಗಿ ವಾದಿಸಿದ ಅಡ್ವೊಕೇಟ್‌ ಜನರಲ್‌ ಮು​ತ್ತು ಕುಮಾರಸ್ವಾಮಿ, ಸಾವಿನಲ್ಲಿ ಯಾ​ವು​ದೇ ನಿಗೂಢತೆಯಿಲ್ಲ ಎಂದು ಪ್ರತಿಪಾದಿ​ಸಿದರು. ‘‘ಏನು ನಡೆಯಿತು ಎಂಬುದು ಸಾರ್ವಜನಿಕರಿಗೆ ತಿಳಿಯಬೇಕು. ಸಂಬಂಧಿಕ​ರನ್ನೂ ನೋಡಲು ಬಿಟ್ಟಿರಲಿಲ್ಲ, ಇದೀಗ ಕೋರ್ಟ್‌'ಗೂ ಬಂದಿಲ್ಲ. ನನಗೂ ವೈಯಕ್ತಿ​ಕವಾಗಿ ಸಂದೇಹ ಬಂದಲ್ಲಿ, ಮೃತದೇಹ ಹೊರತೆಗೆಯುವಂತೆ ನಾನು ಆದೇಶಿಸಬಹು​ದು. ಅವರು ಜೀವಂತವಾಗಿ​ದ್ದಾಗ ನೀವು ಏನನ್ನೂ ತಿಳಿಸಿರಲಿಲ್ಲ'' ಎಂದು ನ್ಯಾ. ವೈದ್ಯನಾಥನ್‌ ಹೇಳಿದರು. ಕೇಂದ್ರದ ಪರ ನ್ಯಾಯವಾದಿ ಜೆ ಮದನಗೋಪಾಲ ರಾವ್‌ರನ್ನು ಪ್ರಶ್ನಿಸಿದ ನ್ಯಾಯಮೂರ್ತಿ​ಗಳು, ‘‘ನೀವು ಅಲ್ಲಿಗೆ ಹೋಗಿದ್ದೀರಿ, ನೀವೂ ಏನನ್ನೂ ವರದಿ ಸಲ್ಲಿಸಿಲ್ಲ. ನಿಮಗೆ ಎಲ್ಲ ಗೊತ್ತಿದೆ, ಆದರೆ ನೀವು ಏನೊಂದೂ ವಿವರ ನೀಡಿಲ್ಲ, ಕಾರಣ ನಿಮಗೇ ಚೆನ್ನಾಗಿ ಗೊತ್ತಿರಬಹುದು. ನೀವು ಸುಮ್ಮನಿದ್ದೀರಿ'' ಎಂದು ತಿಳಿಸಿದರು. 

ಮುಚ್ಚಿಡುವಂಥದ್ದೇನೂ ಇಲ್ಲ: ಈ ಬಗ್ಗೆ ಪ್ರತಿಕ್ರಿಯಿಸಿರುವ ಜಯಾ ಆಪ್ತೆ ಶಶಿಕಲಾ ನಟರಾಜನ್‌, ಈ ವಿಷಯದಲ್ಲಿ ಮುಚ್ಚಿಡು​ವಂಥ​​ದ್ದೇನೂ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ‘‘75 ದಿನಗಳವರೆಗೆ ನಾವು ಯಾಕೆ ಸುಳ್ಳು ಹೇಳಬೇಕಿತ್ತು? ಹೃದಯಾಘಾತ ಆಗುವು​ದಕ್ಕೂ ಮುನ್ನಾ ಅದು ನಮಗೆ ತಿಳಿಸಿ ಆಗುತ್ತ​ದೆಯೇ? ನ್ಯಾಯಾಧೀಶರು ಕಾರ್ಯಕರ್ತರ ಭಾವನೆಗಳನ್ನು ಗೌರವಿಸಬೇಕು. ಇದು ನಮ್ಮ ಭಾವನೆಗೆ ಧಕ್ಕೆಯುಂಟು ಮಾಡಿದೆ, ಆದರೆ ಇದಕ್ಕೆ ಉತ್ತರಿಸಲು ನಾವು ಸಿದ್ಧರಿ​ದ್ದೇವೆ'' ಎಂದು ಪಕ್ಷದ ವಕ್ತಾರೆ ಸಿಆರ್‌ ಸರಸ್ವತಿ ಹೇಳಿದ್ದಾರೆ.

ಎಚ್'ಸಿಪಿ ನಿರಾಕರಣೆ:
ಎಐಎಡಿಎಂಕೆ ಕಾರ್ಯಕರ್ತರಿಂದ ಹಲ್ಲೆಗೊಳಗಾಗಿದ್ದರೆನ್ನಲಾದ ರಾಜ್ಯಸಭಾ ಸದಸ್ಯೆ ಶಶಿಕಲಾ ಪುಷ್ಪಾರ ಪತಿ ಲಿಂಗೇಶ್ವರ ತಿಲಕನ್‌ ಅವರನ್ನು ಹಾಜರು ಪಡಿಸುವಂತೆ ಪೊಲೀಸರಿಗೆ ನಿರ್ದೇಶಿಸಲು ಸಲ್ಲಿಸ​ಲಾಗಿದ್ದ ಹೇಬಿಯಸ್‌ ಕಾರ್ಪಸ್‌ ಅರ್ಜಿ(ಎಚ್‌ಸಿಪಿ)ಯನ್ನು ಮದ್ರಾಸ್‌ ಹೈಕೋರ್ಟ್‌ ತಳ್ಳಿ ಹಾಕಿದೆ. ತಿಲಕನ್‌ ಅವರನ್ನು ಬೆಳಗ್ಗೆ 9:30ಕ್ಕೇ ಜಾಮೀನಿನಲ್ಲಿ ಬಿಡುಗಡೆ ಮಾಡಲಾಗಿದೆ ಎಂದು ಸರ್ಕಾರಿ ವಕೀಲ ರಾಜರತ್ನಂ ನ್ಯಾಯಪೀಠಕ್ಕೆ ತಿಳಿಸಿದರು. ತಿಲಕನ್‌ ಅವರನ್ನು ಜಾಮೀನು ಮೇಲೆ ಬಿಡುಗಡೆಗೊಳಿಸಿದ ಬಳಿಕ, ಹೇಬಿಯಸ್‌ ಕಾರ್ಪಸ್‌ ಅರ್ಜಿಯ ಪ್ರಶ್ನೆ ಎಲ್ಲಿಂದ ಬಂತು ಎಂದು ನ್ಯಾಯಪೀಠ ಪ್ರಶ್ನಿಸಿತು. 

ಪಿಟಿಐ ವರದಿ
epaper.kannadaprabha.in