Asianet Suvarna News Asianet Suvarna News

ಹೆಣ್ಣು, ಗಂಡು ಸಾವಿಗೆ ಸಮಾನ ಪರಿಹಾರ, ತಾರತಮ್ಯ ಸಲ್ಲದು: ಹೈಕೋರ್ಟ್

ಹೆಣ್ಣುಮಗು, ಗಂಡುಮಗು ಸಾವಿಗೆ ಸಮಾನ ಪರಿಹಾರ| ಅಪಘಾತದಲ್ಲಿ ಮಕ್ಕಳು ಸಾವನ್ನಪ್ಪಿದರೆ ಪರಿಹಾರ ನೀಡುವಾಗ ತಾರತಮ್ಯ ಸಲ್ಲದು| ಹೆಣ್ಣುಮಗುವಿನ ಸಾವಿನ ಪ್ರಕರಣದಲ್ಲಿ ಮೇಲ್ಪಂಕ್ತಿ ಹಾಕಿಕೊಟ್ಟಹೈಕೋರ್ಟ್

High Court Up Holds The Equality Both For Male and females Get Equal Compensation
Author
Bangalore, First Published Aug 13, 2019, 11:22 AM IST

ವೆಂಕಟೇಶ್‌ ಕಲಿಪಿ

ಬೆಂಗಳೂರು[ಆ.13]: ಅಪಘಾತದಲ್ಲಿ ಉದ್ಯೋಗಿ ಸಾವನ್ನಪ್ಪಿದಾಗ ಆತನ ಆದಾಯ ಆಧರಿಸಿ ಪರಿಹಾರ ಮೊತ್ತ ನಿಗದಿಪಡಿಸಲು ಅವಕಾಶವಿದೆ. ಆದರೆ, ಮಕ್ಕಳು ಸಾವನ್ನಪ್ಪಿದ ಪ್ರಕರಣದಲ್ಲಿ ಇಂತಿಷ್ಟುಪರಿಹಾರ ಮೊತ್ತ ನೀಡಬೇಕೆಂದು ಹೇಳಲು ಯಾವುದೇ ಕಾನೂನುಗಳಿಲ್ಲ. ಮಕ್ಕಳು ಬೆಳೆದು ದೊಡ್ಡವರಾಗಿ ಎಷ್ಟುಆದಾಯ ಗಳಿಸುತ್ತಾರೆ ಎಂಬುದನ್ನು ಅಂದಾಜಿಸಿ ಪರಿಹಾರ ನಿಶ್ಚಯಿಸುವುದು ಕಷ್ಟ. ಇಂತಹ ಸಂದರ್ಭದಲ್ಲಿ 10 ವರ್ಷದ ಗಂಡು ಮಗುವೊಂದು ಸಾವನ್ನಪ್ಪಿದ ವೇಳೆ 5 ಲಕ್ಷ ರು. ಪರಿಹಾರ ನೀಡಿದ್ದ ಸುಪ್ರೀಂಕೋರ್ಟ್‌ನ ಆದೇಶವನ್ನೇ ಮಾನದಂಡವಾಗಿಸಿಕೊಂಡು ಅಪಘಾತದಲ್ಲಿ ಮೂರೂವರೆ ವರ್ಷದ ಹೆಣ್ಣು ಮಗುವನ್ನು ಕಳೆದುಕೊಂಡ ದಂಪತಿಗೆ 5 ಲಕ್ಷ ರು. ಪರಿಹಾರ ಕೊಡಲು ಹೈಕೋರ್ಟ್‌ ಆದೇಶಿಸಿದೆ.

ಆ ಮೂಲಕ ಸಾವನ್ನಪ್ಪಿದ ಮಗು ಹೆಣ್ಣಾಗಲಿ ಅಥವಾ ಗಂಡಾಗಲಿ ಪರಿಹಾರ ಮೊತ್ತ ಸಮಾನವಾಗಿರಬೇಕೆಂಬ ಮೇಲ್ಪಂಕ್ತಿಯನ್ನು ಹೈಕೋರ್ಟ್‌ ಹಾಕಿಕೊಟ್ಟಿದೆ.

ಮಂಡ್ಯ ಜಿಲ್ಲೆಯ ಮಂಜುನಾಥ್‌ ಹಾಗೂ ಪವಿತ್ರಾ ದಂಪತಿ ತಮ್ಮ ಮೂರೂವರೆ ವರ್ಷದ ಹೆಣ್ಣು ಮಗು ದಿವ್ಯಾಳೊಂದಿಗೆ 2012ರ ಜ.11ರಂದು ಕತ್ತೇರಿ ಗ್ರಾಮದಿಂದ ಚಿಕ್ಕಲ್ಲೂರ್‌ ದೇವಸ್ಥಾನಕ್ಕೆ ಟಾಟಾ ಏಸ್‌ ವಾಹನದಲ್ಲಿ ಪ್ರಯಾಣಿಸುತ್ತಿದ್ದರು. ಚಾಲಕನ ಅತಿವೇಗ ಹಾಗೂ ನಿರ್ಲಕ್ಷ್ಯದಿಂದ ಮೈಸೂರು-ಟಿ.ನರಸೀಪುರ ರಸ್ತೆಯಲ್ಲಿ ವಾಹನ ಪಲ್ಟಿಯಾದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ ದಿವ್ಯಾ, ಚಿಕಿತ್ಸೆ ಫಲಕಾರಿಯಾಗದೆ 2012ರ ಜ.14ರಂದು ಆಸ್ಪತ್ರೆಯಲ್ಲಿ ಅಸುನೀಗಿದ್ದಳು.

ಇದರಿಂದ ದಿವ್ಯಾ ತಂದೆ-ತಾಯಿಗೆ ವಾರ್ಷಿಕ ಶೇ.6ರಷ್ಟುಬಡ್ಡಿದರದಲ್ಲಿ 3,00,350 ರು. ಪರಿಹಾರ ನೀಡುವಂತೆ ವಾಹನ ಮಾಲಿಕರು ಹಾಗೂ ಆ ವಾಹನಕ್ಕೆ ವಿಮಾ ಸೌಲಭ್ಯ ಒದಗಿಸಿದ್ದ ಶ್ರೀರಾಮ್‌ ಜನರಲ್‌ ಇನ್ಷೂರೆನ್ಸ್‌ ಕಂಪನಿ ಲಿಮಿಟೆಡ್‌ಗೆ 2014ರ ಜೂನ್‌ 2ರಂದು ಹಿರಿಯ ಸಿವಿಲ್‌ ಮತ್ತು ಜೆಎಂಎಫ್‌ಸಿ ನ್ಯಾಯಾಧೀಶರು ಆದೇಶಿಸಿದ್ದರು. ಪರಿಹಾರ ಮೊತ್ತ ಹೆಚ್ಚಳಕ್ಕಾಗಿ ದಿವ್ಯಾ ಪೋಷಕರು ಹೈಕೊರ್ಟ್‌ ಮೆಟ್ಟಿಲೇರಿದ್ದರು.

5 ಲಕ್ಷ ರು. ಕೊಟ್ಟರೆ ನ್ಯಾಯ:

ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ.ಸೋಮಶೇಖರ್‌ ಅವರು, ಮಂಜುನಾಥ್‌ ಮತ್ತು ಪವಿತ್ರಾ ತಮ್ಮ ಬಾಳಿನ ಬೆಳಕಾಗಿದ್ದ ಮಗಳನ್ನು ಕಳೆದುಕೊಂಡಿದ್ದಾರೆ. ಮಗಳ ಪ್ರೀತಿ ಮತ್ತು ವಾತ್ಸಲ್ಯದಿಂದ ಅವರು ವಂಚಿತರಾಗಿದ್ದು, ಅದನ್ನು ಹಣದಲ್ಲಿ ಸರಿದೂಗಿಸಲಾಗದು. ಅಪಘಾತದಲ್ಲಿ 10 ವರ್ಷದ ಗಂಡು ಮಗು ಸಾವನ್ನಪ್ಪಿದ ಪ್ರಕರಣದಲ್ಲಿ ಮೃತನ ಆದಾಯ 30 ಸಾವಿರ ರು. ಎಂದು ಕಲ್ಪಿಸಿಕೊಂಡ ಸುಪ್ರೀಂಕೋರ್ಟ್‌, 5 ಲಕ್ಷ ರು. ಪರಿಹಾರ ಪ್ರಕಟಿಸಿತ್ತು. ಆ ಆದೇಶವು ದಿವ್ಯಾ ಪ್ರಕರಣದ ವಾಸ್ತವಾಂಶ ಹಾಗೂ ಸನ್ನಿವೇಶಕ್ಕೆ ಅನ್ವಯವಾಗಲಿದೆ. ದಿವ್ಯಾ ಪೋಷಕರಿಗೆ 5 ಲಕ್ಷ ರು. ಪರಿಹಾರ ನೀಡಿದರೆ ನ್ಯಾಯ ದೊರಕಿಸಿದಂತಾಗುತ್ತದೆ ಎಂದು ತೀರ್ಮಾನಿಸಿದರು.

ವರುಣನ ಅಬ್ಬರಕ್ಕೆ ಕರುನಾಡು ತತ್ತರ: ಮಳೆಗೆ ಸಂಬಂಧಿಸಿದ ಎಲ್ಲಾ ಸುದ್ದಿಗಳಿಗಾಗಿ ಕ್ಲಿಕ್ಕಿಸಿ

ನಂತರ ದಿವ್ಯಾ ಪೋಷಕರಿಗೆ ಅಪಘಾತ ನಡೆದ ದಿನದಿಂದ ಅರ್ಜಿ ಇತ್ಯರ್ಥವಾಗುವವರೆಗೂ ವಾರ್ಷಿಕ ಶೇ.6ರಷ್ಟುಬಡ್ಡಿ ದರದಲ್ಲಿ 5 ಲಕ್ಷ ರು. ಪರಿಹಾರ ನೀಡಬೇಕು. ಆ ಹಣವನ್ನು ಶ್ರೀರಾಮ್‌ ಜನರಲ್‌ ಇನ್ಷೂರೆನ್ಸ್‌ ಕಂಪನಿ ಲಿಮಿಟೆಡ್‌ ಸಂಪೂರ್ಣವಾಗಿ ಭರಿಸಬೇಕು ಮತ್ತು ಆರು ವಾರದಲ್ಲಿ ಠೇವಣಿ ಇಡಬೇಕು ಎಂದು ಆದೇಶಿಸಿತು.

ಮಕ್ಕಳ ಸಾವಿಗೆ ಪರಿಹಾರ ನಿಗದಿ ಕಷ್ಟ

ಅಪಘಾತದಲ್ಲಿ ಮೃತಪಟ್ಟಾಗ ದಿವ್ಯಾಗೆ ಮೂರೂವರೆ ವರ್ಷ. ಮಾನವ ಜೀವಿಯ ಪ್ರಾಣಹಾನಿಗೆ ನಷ್ಟಪರಿಹಾರ ನಿರ್ಧರಿಸುವುದು ಕಷ್ಟದ ವಿಷಯ. ಅದರಲ್ಲೂ ಮಗು ಸಾವನ್ನಪ್ಪಿದ ಸಂದರ್ಭದಲ್ಲಿ ಅದು ಇನ್ನೂ ಸಂಕೀರ್ಣ. ಅದಕ್ಕೆ ಕಾರಣ ಮಗುವಿನ ಭವಿಷ್ಯ ಅನಿಶ್ಚಿತವಾಗಿರುವುದು. ಸಾವನ್ನಪ್ಪಿದ ಮಗು ಹಣ ಸಂಪಾದಿಸದೇ ಇದ್ದರೂ ಆಕೆಯು ಮುಂದೆ ಸಂಪಾದನೆ ಮಾಡುವ ನಿರೀಕ್ಷೆ ಇರುತ್ತದೆ. ಮೃತಪಟ್ಟವರು ಹದಿಹರೆಯದವರಾದರೆ ಅವರು ಪಡೆಯುತ್ತಿದ್ದ ಆದಾಯ ಅಥವಾ ಭವಿಷ್ಯದಲ್ಲಿ ಹೆಚ್ಚಳವಾಗುವ ಆದಾಯ ಅಥವಾ ಅವರ ಭವಿಷ್ಯದ ವೃತ್ತಿಜೀವನದ ಪ್ರಗತಿಯ ಸಾಧ್ಯತೆ ಆಧರಿಸಿ ನಷ್ಟಪರಿಹಾರವನ್ನು ಅಂದಾಜಿಸಿ ನಿರ್ಧರಿಸಲು ಸಾಧ್ಯವಿದೆ. ಮಕ್ಕಳು ಮೃತಪಟ್ಟರೆ ಅವರ ಶಿಕ್ಷಣ, ವೃತ್ತಿಜೀನವದ ಸಾಧನೆ ಮತ್ತು ಜೀವನ ಪ್ರಗತಿಯ ಬಗ್ಗೆ ಸೂಕ್ತವಾಗಿ ಅಂದಾಜಿಸಲು ಸಾಧ್ಯವಿಲ್ಲ. ಗಣಿತದ ಆಧಾರದ ಮೇಲೆ ಸಮರ್ಥವಾಗಿ ಮಕ್ಕಳ ಆದಾಯ ಅಥವಾ ಪೋಷಕರ ಹಣಕಾಸು ನಷ್ಟಲೆಕ್ಕಮಾಡಲು ಸಾಧ್ಯವಿಲ್ಲ ಎಂದು ಹೈಕೋರ್ಟ್‌ ಅಭಿಪ್ರಾಯಪಟ್ಟಿದೆ.

Follow Us:
Download App:
  • android
  • ios