ಬೆಂಗಳೂರು (ಮಾ. 08):  ನಾಗರಹೊಳೆ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಮುತ್ತುಗೋಡು ಆನೆ ಶಿಬಿರದ ಬಳಿ ಹಾದುಹೋಗುವ ರಾಜ್ಯ ಹೆದ್ದಾರಿ ಸಂಖ್ಯೆ 90ರ 11 ಕಿ.ಮೀ. ಉದ್ದದ ರಸ್ತೆಯಲ್ಲಿ (ಮೈಸೂರು- ವಿರಾಜಪೇಟೆ ರಸ್ತೆ) ಮುಂದಿನ 10 ದಿನಗಳಲ್ಲಿ ಪ್ರತಿ 500 ಮೀಟರ್‌ಗೆ ಹಂಪ್‌ ನಿರ್ಮಿಸುವಂತೆ ಹೈಕೋರ್ಟ್‌ ಲೋಕೋಪಯೋಗಿ ಇಲಾಖೆಗೆ ನಿರ್ದೇಶಿಸಿ ಮಧ್ಯಂತರ ಆದೇಶ ನೀಡಿದೆ.

ಈ ರಸ್ತೆಯಲ್ಲಿ ರಾತ್ರಿ ವೇಳೆ ವಾಹನ ಸಂಚಾರವನ್ನು ನಿಷೇಧಿಸಲು ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿ ನಗರದ ನಿವಾಸಿಗಳಾದ ಎಚ್‌.ಸಿ. ಪ್ರಕಾಶ್‌ ಮತ್ತು ಎ.ಎಂ.ಮಹೇಶ್‌ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಲ್‌.ನಾರಾಯಣಸ್ವಾಮಿ ಮತ್ತು ನ್ಯಾಯಮೂರ್ತಿ ಪಿ.ಎಸ್‌.ದಿನೇಶ್‌ ಕುಮಾರ್‌ ಅವರಿದ್ದ ವಿಭಾಗೀಯ ನ್ಯಾಯಪೀಠವು ಈ ಆದೇಶ ನೀಡಿದೆ.

ನಾಗರಹೊಳೆ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಮುತ್ತುಗೋಡು ಆನೆ ಶಿಬಿರದ ಬಳಿ ರಾಜ್ಯ ಹೆದ್ದಾರಿ ಸಂಖ್ಯೆ 90ರ 11 ಕಿ.ಮೀ ಉದ್ದದ ರಸ್ತೆ ಹಾದು ಹೋಗುತ್ತದೆ. ಈ ರಸ್ತೆಯಲ್ಲಿ ರಾತ್ರಿ ವೇಳೆಯೂ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ. ಆದರೆ, 2018ರ ಅ.8ರಂದು ಬಸ್‌ವೊಂದು ಡಿಕ್ಕಿ ಹೊಡೆದ ಪರಿಣಾಮ ‘ರಂಗ’ ಎಂಬ ಆನೆ ಸಾವನ್ನಪ್ಪಿತ್ತು. ಪದೇ ಪದೇ ಈ ರಸ್ತೆಯಲ್ಲಿ ಅಪಘಾತಗಳು ಸಂಭವಿಸಿ ವನ್ಯಜೀವಿಗಳು ಸಾವನ್ನಪ್ಪುತ್ತಿದೆ. ಆದರೆ, ಈ ಘಟನೆಗಳನ್ನು ತಪ್ಪಿಸಲು ಅಧಿಕಾರಿಗಳು ಪ್ರಯತ್ನಿಸುತ್ತಿಲ್ಲ ಎಂದು ಅರ್ಜಿಯಲ್ಲಿ ದೂರಲಾಗಿತ್ತು.

ವನ್ಯ ಜೀವಿಗಳ ಸರಂಕ್ಷಣೆಯ ದೃಷ್ಟಿಯಿಂದ ನಾಗರಹೊಳೆ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಮುತ್ತುಗೋಡು ಆನೆ ಶಿಬಿರದ ಬಳಿ ಹಾದುಹೋಗುವ ರಾಜ್ಯ ಹೆದ್ದಾರಿ ಸಂಖ್ಯೆ-90ರ 11 ಕಿ.ಮೀ ಉದ್ದದ ರಸ್ತೆಯಲ್ಲಿ (ಮೈಸೂರು-ವಿರಾಜಪೇಟೆ ರಸ್ತೆ) ಸಂಜೆ 6ರಿಂದ ಬೆಳಗ್ಗೆ 6ರವರೆಗೆ ವಾಹನ ಸಂಚಾರ ನಿಷೇಧ ಮಾಡಬೇಕು. ರಾಜ್ಯ ಹೆದ್ದಾರಿಗಳಲ್ಲಿ ಆನೆಗಳ ಸಾವು ಸಂಭವಿಸುವುದನ್ನು ತಡೆಯಲು ವಿಫಲರಾಗಿರುವ ಅಧಿಕಾರಿಗಳನ್ನು ಗುರುತಿಸಲು ತುರ್ತು ವಿಚಾರಣೆಯೊಂದು ನಡೆಸಬೇಕು. ಆನೆಗಳ ಸಂರಕ್ಷಣೆ ಹಿನ್ನೆಲೆಯಲ್ಲಿ ಈ 11 ಕಿ.ಮೀ ಉದ್ದದ ರಸ್ತೆಗೆ ಪರ್ಯಾಯ ರಸ್ತೆ ನಿರ್ಮಾಣ ಮಾಡಬೇಕು. ಈ ಸಂಬಂಧ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಅರ್ಜಿದಾರರು ಕೋರಿದ್ದಾರೆ.