ರಾಜ್ಯದ ಅಧಿಕಾರದ ಚುಕ್ಕಾಣಿ ಹಿಡಿಯಲು ಬಿಜೆಪಿ ಆರಂಭಿಸಿರುವ ಪರಿವರ್ತನಾ ಯಾತ್ರೆ ಆರಂಭದಲ್ಲೇ ಮುಗ್ಗರಿಸಿರುವುದನ್ನು ಪಕ್ಷದ ವರಿಷ್ಠರು ಗಂಭೀರವಾಗಿ ಪರಿಗಣಿಸಿದ್ದು, ರಾಜ್ಯದ ಮುಖಂಡರಿಗೆ ಮಂಗಳೂರಿನಲ್ಲಿ ನಡೆದ ಕೋರ್ ಕಮಿಟಿ ಸಭೆಯಲ್ಲಿ ಕ್ಲಾಸ್ ತೆಗೆದುಕೊಂಡಿದ್ದಾರೆ.

ಮಂಗಳೂರು: ರಾಜ್ಯದ ಅಧಿಕಾರದ ಚುಕ್ಕಾಣಿ ಹಿಡಿಯಲು ಬಿಜೆಪಿ ಆರಂಭಿಸಿರುವ ಪರಿವರ್ತನಾ ಯಾತ್ರೆ ಆರಂಭದಲ್ಲೇ ಮುಗ್ಗರಿಸಿರುವುದನ್ನು ಪಕ್ಷದ ವರಿಷ್ಠರು ಗಂಭೀರವಾಗಿ ಪರಿಗಣಿಸಿದ್ದು, ರಾಜ್ಯದ ಮುಖಂಡರಿಗೆ ಮಂಗಳೂರಿನಲ್ಲಿ ನಡೆದ ಕೋರ್ ಕಮಿಟಿ ಸಭೆಯಲ್ಲಿ ಕ್ಲಾಸ್ ತೆಗೆದುಕೊಂಡಿದ್ದಾರೆ.

ನ.2ರಂದು ಬೆಂಗಳೂರಿನಲ್ಲಿ ಬಿಜೆಪಿಯ ಪರಿವರ್ತನಾ ಯಾತ್ರೆಯಲ್ಲಿ ಕಂಡುಬಂದ ಜನತೆಯ ನೀರಸ ಸ್ಪಂದನದಿಂದ ಸಿಟ್ಟಾದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ರಾಜ್ಯ ಮುಖಂಡರನ್ನು ಖಾರವಾಗಿಯೇ ಪ್ರಶ್ನಿಸಿದ್ದರು.

ಇದರ ಫಲವಾಗಿ ಮಂಗಳೂರಿನಲ್ಲಿ ನಡೆದ ಕೋರ್ ಕಮಿಟಿ ಸಭೆಯಲ್ಲಿ ರಾಜ್ಯದ ಬಿಜೆಪಿ ಚುನಾವಣಾ ಉಸ್ತುವಾರಿ ಪ್ರಕಾಶ್ ಜಾವಡೇಕರ್, ಪೀಯೂಷ್ ಗೋಯಲ್ ಹಾಗೂ ಮುರಳೀಧರ ರಾವ್ ಅವರು ರಾಜ್ಯ ಬಿಜೆಪಿ ಮುಖಂಡರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಬೆಂಗಳೂರು ಯಾತ್ರೆಯ ಹೊಣೆ ವಹಿಸಿಕೊಂಡಿದ್ದ ಆರ್.ಅಶೋಕ್ ಅವರನ್ನು ತರಾಟೆಗೆ ತೆಗೆದುಕೊಂಡ ಜಾವಡೇಕರ್, ಯಾತ್ರೆ ಆರಂಭದಲ್ಲೇ ಮುಗ್ಗರಿಸಿರುವುದು ಪಕ್ಷಕ್ಕೆ ಮುಜುಗರ ಉಂಟುಮಾಡಿದೆ.

ಇದು ರಾಜ್ಯದಲ್ಲಿ ಮಾತ್ರವಲ್ಲ ಕೇಂದ್ರ ಮಟ್ಟದಲ್ಲಿ ವಿಪಕ್ಷಗಳು ಬೊಟ್ಟು ಮಾಡಿ ಅಪಹಾಸ್ಯ ಮಾಡುವಂತೆ ಆಗಿದೆ. ಇದು ಪುನರಾವರ್ತನೆಯಾದರೆ ಪರಿಣಾಮ ನೆಟ್ಟಗಿರುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ ಎಂದು ತಿಳಿದು ಬಂದಿದೆ.

ಇದಕ್ಕೆ ಅಶೋಕ್ ಸಮಜಾಯಿಷಿ ನೀಡುವ ಗೋಜಿಗೆ ಹೋಗದೆ, ಸುಮ್ಮನಾಗಿದ್ದರು ಎಂದು ಹೇಳಲಾಗಿದೆ.