ತುಗ್ಯುಗೆರವ್ (ಫಿಲಿಪ್ಪೀನ್ಸ್): ಈ ವರ್ಷದಲ್ಲೇ ಅತ್ಯಂತ ಪ್ರಬಲ ಸ್ವರೂಪದ್ದು ಎನ್ನಲಾದ ಚಂಡಮಾರುತವೊಂದು ಶನಿವಾರ ಫಿಲಿಪ್ಪೀನ್ಸ್ ಮೇಲೆ ಅಪ್ಪಳಿಸಿದ್ದು, ಅನಾಹುತ ಸೃಷ್ಟಿಸಿದೆ. ಮಂಗ್‌ಖೂಟ್ ಹೆಸರಿನ ಈ ಚಂಡಮಾರುತ ದೇಶದ ಈಶಾನ್ಯ ಭಾಗವಾದ ಕ್ಯಾಗಾನ್ ಪ್ರಾಂತ್ಯದ ಮೇಲೆ ಅಪ್ಪಳಿಸಿ 15 ಜನರನ್ನು ಬಲಿ ಪಡೆದಿದೆ. 

ಗಂಟೆಗೆ 170  ಕಿ.ಮೀ.ನಿಂದ 260 ಕಿ.ಮೀ ವೇಗದಲ್ಲಿ ಅಪ್ಪಳಿಸುವ ಸಾಮರ್ಥ್ಯ ಹೊಂದಿರುವ ಈ ಚಂಡಮಾರುತ ದೇಶದ ಉತ್ತರ ಭಾಗದ 10 ಪ್ರಾಂತ್ಯಗಳ 50 ಲಕ್ಷ ಜನರನ್ನು ಆತಂಕದ ಮಡುವಿಗೆ ತಳ್ಳಿದೆ. ಚಂಡಮಾರುತವು ಭಾರೀ ಗಾಳಿಯೊಂದಿಗೆ ಮಳೆ ಸುರಿಸುತ್ತಿದ್ದು, ಜನ ಜೀವನವನ್ನು ಅಸ್ತವ್ಯಸ್ತಗೊಳಿಸಿದೆ. ಚಂಡಮಾರುತ ಅಬ್ಬರಕ್ಕೆ ಸಾವಿ ರಾರು ಮರಗಳು ನೆಲಕ್ಕೆ ಉರುಳಿದ್ದು ರಸ್ತೆ ಸಂಚಾರವನ್ನು ದುಸ್ಸಾಧ್ಯಗೊಳಿಸಿದೆ. 

ಮತ್ತೊಂದೆಡೆ ಹಲವು ಕಡೆ  ವಿಮಾನ ಸಂಚಾರವನ್ನು ರದ್ದುಗೊಳಿಸ ಲಾಗಿದೆ. ಜೊತೆಗೆ ಭಾರೀ ಪ್ರಮಾಣದಲ್ಲಿ ಆಸ್ತಿಪಾಸ್ತಿಗೂ ಹಾನಿ ಉಂಟಾ ಗಿದೆ. ಫಿಲಿಪ್ಪೀನ್ಸ್ ವಿಶ್ವದಲ್ಲೇ ಅತಿಹೆಚ್ಚು ಚಂಡಮಾರು ತಕ್ಕೆ ತುತ್ತಾಗುವ ಕುಖ್ಯಾತಿ ಹೊಂದಿದ್ದು, ಪ್ರತಿ ವರ್ಷ ಕನಿಷ್ಠ 20 ಚಂಡಮಾರುತಗಳು ದೇಶದ ಮೇಲೆ ಅಪ್ಪಳಿಸುತ್ತವೆ. ಈ ವರ್ಷ ದೇಶದ ಮೇಲೆ ಅಪ್ಪಳಿಸುತ್ತಿರುವ 15ನೇ ಚಂಡಮಾರುತ ಇದಾಗಿದೆ. 

ಫಿಲಿಪ್ಪೀನ್ಸ್ ಬಳಿಕ ಮಂಗ್ ಖೂಟ್ ಚಂಡಮಾರುತವು ಚೀನಾ ಮತ್ತು ಹಾಂಗ್ ಕಾಂಗ್ ಮೇಲೂ ದಾಳಿ ನಡೆ ಸುವ ಮುನ್ನೆಚ್ಚರಿಕೆ ನೀಡ ಲಾಗಿದೆ. ಹೀಗಾಗಿ ಉಭಯ ದೇಶಗಳಲ್ಲೂ ಕಟ್ಟೆಚ್ಚರ ವಹಿಸಲಾಗಿದೆ. ಒಂದು ವೇಳೆ ಚಂಡಮಾರುತ ಇದೇ ವೇಗದಲ್ಲಿ ಮುಂದುವರಿದರೆ ಚೀನಾ, ಹಾಂಗಾಂಗ್ ಸೇರಿದಂತೆ ಏಷ್ಯಾ ದೇಶಗಳಿಗೆ 8.50 ಲಕ್ಷ ಕೋಟಿ ರು . ಹಾನಿ ಉಂಟುಮಾಡಲಿದೆ ಎಂದು ಅಂದಾಜಿಸಲಾಗಿದೆ.