ಬೆಂಗಳೂರು (ಸೆ. 07): ಮಹಾರಾಷ್ಟ್ರದ ಕೊಂಕಣ ಪ್ರದೇಶದಲ್ಲಿ ಅವ್ಯಾಹತವಾಗಿ ಸುರಿಯುತ್ತಿರುವ ಪರಿಣಾಮ ಕೋಯ್ನಾ ಸೇರಿದಂತೆ ವಿವಿಧ ಜಲಾಶಗಯಳಿಂದ 1 ಲಕ್ಷಕ್ಕೂ ಅಧಿಕ ನೀರನ್ನು ಕೃಷ್ಣಾನದಿಗೆ ಹರಿಸುತ್ತಿರುವುದರಿಂದ ಉತ್ತರ ಕರ್ನಾಟಕದಲ್ಲಿ ಪ್ರವಾಹ ಭೀತಿ ಮತ್ತಷ್ಟು ಹೆಚ್ಚಾಗಿದೆ.

ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯ ಆರು ಕೆಳಹಂತದ ಸೇತುವೆಗಳು ಈಗಾಲಲೇ ಜಲಾವೃತವಾಗಿದ್ದು, ಅಥಣಿಯ 25ಕ್ಕೂ ಅಧಿಕ ಗ್ರಾಮಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಇದೇವೇಳೆ ಗುರುವಾರ ರಾತ್ರಿ ನಾರಾಯಣಪುರ ಜಲಾಶಯದಿಂದ 1.83 ಕ್ಯುಸೆಕ್‌ ನೀರನ್ನು ಕೃಷ್ಣಾ ನದಿಗೆ ಹರಿಬಿಟ್ಟಿರುವುದರಿಂದ ಯಾದಗಿರಿ ಜಿಲ್ಲೆಯ ಕೃಷ್ಣಾ ತೀರದ ಗ್ರಾಮಗಳಲ್ಲೂ ಹೈ ಅಲರ್ಟ್‌ ಘೋಷಿಸಲಾಗಿದೆ.

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನಲ್ಲಿ ದೂಧಗಂಗಾ, ವೇದಗಂಗಾ ಹಾಗೂ ಕೃಷ್ಣಾ ನದಿಗಳು ಅಪಾಯದ ಮಟ್ಟದಲ್ಲಿ ಹರಿಯುತ್ತಿದ್ದು ಕೆಳಹಂತದ 6 ಸೇತುವೆಗಳು ಜಲಾವೃತಗೊಂಡಿವೆ. ಇಲ್ಲೆಲ್ಲಾ ರಸ್ತೆ ಸಂಪರ್ಕ ಕಡಿತವಾಗಿದ್ದು, ಪರ್ಯಾಯ ಮಾರ್ಗಗಳ ಮೂಲಕ ಸಂಚಾರ ವ್ಯವಸ್ಥೆ ಜಾರಿಯಲ್ಲಿದೆ.

ಜಮಖಂಡಿ ತಾಲೂಕಿನ ಒಂದು ರಸ್ತೆ ಸಂಚಾರ ಬಂದ್‌ ಆಗಿದೆ. ಐದು ಗ್ರಾಮಗಳ ಬಳಿ ನೀರು ನುಗ್ಗಿದೆ. ಘಟಪ್ರಭಾ ನದಿಗೆ ಅಪಾರ ಪ್ರಮಾಣದಲ್ಲಿ ನೀರು ಬಂದ ಕಾರಣ ಮಹಾಲಿಂಗಪುರ ಸಮೀಪದ ನಂದಗಾಂವ-ಢವಳೇಶ್ವರ ಬ್ರೀಜ್‌ ಮುಳುಗಡೆಯಾಗಿದ್ದು, ಇದರಿಂದ ಸಂಚಾರ ಸ್ಥಗಿತಗೊಂಡಿದೆ.

ಸಂಪರ್ಕ ಕಡಿತ: ಉಕ್ಕಿ ಹರಿಯುತ್ತಿರುವ ಕೃಷ್ಣಾ ನದಿಯಿಂದಾಗಿ, ಕಲಬುರಗಿ-ಯಾದಗಿರಿ-ರಾಯಚೂರು ಜಿಲ್ಲೆಗಳ ಸಂಪರ್ಕ ರಸ್ತೆಯ ಕೊಳ್ಳೂರು(ಎಂ) ಸೇತುವೆಗೆ ಮತ್ತೆ ಮುಳಗಡೆ ಭೀತಿ ಎದುರಾಗಿದೆ. ಈ ಮಧ್ಯೆ ಸುರಪುರದ ಕಕ್ಕೇರಾ ಸಮೀಪದ ನೀಲಕಂಠರಾಯನ ಗಡ್ಡೆ ಹೊರ ಜಗತ್ತಿನಿಂದ ಮತ್ತೆ ಸಂಪರ್ಕ ಕಡಿತಗೊಂಡಿದೆ.

ಆದರೆ ಆಹಾರಧಾನ್ಯಗಳು ಸೇರಿದಂತೆ ಅಗತ್ಯ ವಸ್ತುಗಳ ಖರೀದಿಗಾಗಿ ಗಡ್ಡೆ ಜನರು ಪ್ರವಾಹದ ರಭಸದಲ್ಲಿ ಈ ಹಿಂದಿನಂತೆ ಈಜು ಗುಂಬಳಕಾಯಿ ಕಟ್ಟಿಕೊಂಡು, ಕಕ್ಕೇರಾ ಪಟ್ಟಣಕ್ಕೆ ಆಗಮಿಸಿ, ವಾಪಸ್ಸಾಗಿದ್ದಾರೆ. ಹೊಸ ಸೇತುವೆವರೆಗೆ ನಡೆದುಕೊಂಡು ಬಂದು, ಈಜಾಡಿ ಐದಾರು ಜನರು ಗ್ರಾಮಕ್ಕೆ ಮರಳಿದ್ದಾರೆ.

ಹಂಪಿ ಮುಳುಗಡೆ ಭೀತಿ: ಮಲೆನಾಡು ಪ್ರದೇಶ ಮತ್ತು ಮಹಾರಾಷ್ಟ್ರದಲ್ಲಿ ಭಾರೀ ಮಳೆ ಸುರಿಯುತ್ತಿರುವುದರಿಂದ ಗೇರಸೊಪ್ಪ, ಮಲಪ್ರಭಾ ಮತ್ತು ತುಂಗಭದ್ರಾ ಜಲಾಶಯಗಳಿಂದ ಹೆಚ್ಚುವರಿ ನೀರನ್ನು ನದಿಗೆ ಬಿಟ್ಟಿರುವ ಹಿನ್ನೆಲೆಯಲ್ಲಿ ಈ ನದಿಪಾತ್ರಗಳಲ್ಲಿ ಪ್ರವಾಹದ ಭೀತಿ ಎದುರಾಗಿದೆ.

ತುಂಗಭದ್ರಾ ಜಲಾಶಯದಿಂದ 70 ಸಾವಿರ ಕ್ಯುಸೆಕ್‌ ನೀರನ್ನು ನದಿಗೆ ಬಿಟ್ಟಿರುವುದರಿಂದ ಹಂಪಿಯ ಐತಿಹಾಸಿಕ ಸ್ಮಾರಕಗಳಿಗೆ ಮುಳುಗಡೆ ಭೀತಿ ಎದುರಾಗಿದ್ದು ಹಂಪಿ- ಆನೆಗೊಂದಿ ಮಾರ್ಗದ ಬೋಟ್‌ ಸಂಚಾರವನ್ನು ರದ್ದುಪಡಿಸಲಾಗಿದೆ. ನದಿ ತೀರದಲ್ಲಿ ಬರುವ ಸಾಲುಮಂಟಪ ಬಹುತೇಕ ಮುಳುಗಡೆಯಾಗಿದೆ. ಯಂತ್ರೋದ್ಧಾರಕ ದೇವಸ್ಥಾನಕ್ಕೆ ಹೋಗುವ ರಸ್ತೆ ಮಾರ್ಗ ನೀರಿನಿಂದ ಜಲಾವೃತ್ತಗೊಂಡಿದ್ದು, ರಸ್ತೆ ಬಂದ್‌ ಆಗಿದೆ. ಕಾಲುಸೇತುವೆ ಹಾಗೂ ಪುರಂದರ ಮಂಟಪ ಮುಳುಗಡೆಯಾಗಿದೆ.