ಪಶ್ಚಿಮ ಘಟ್ಟ ಸಾಲಿನಲ್ಲಿ ಭಾರೀ ಪ್ರಮಾಣದಲ್ಲಿ ಮಳೆ ಸುರಿಯುತ್ತಿದೆ. ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಜನಜೀವನ ಅಸ್ತವ್ಯಸ್ತವಾಗಿದೆ. ಅಲ್ಲದೇ ಹಲವು ನದಿಗಳಲ್ಲಿ ನೀರಿನ ಮಟ್ಟ ಹೆಚ್ಚಳವಾಗಿ ಉಕ್ಕಿ ಹರಿಯುತ್ತಿವೆ.

ಬೆಂಗಳೂರು : ಪಶ್ಚಿಮ ಘಟ್ಟಪ್ರದೇಶದಲ್ಲಿ ಭರ್ಜರಿ ಮಳೆ ಸತತ 2ನೇ ದಿನವೂ ಮುಂದುವರೆದಿದೆ. ಇದರ ಪರಿಣಾಮ ಅನೇಕ ನದಿಗಳು ಮತ್ತೆ ಉಕ್ಕೇರಿದ್ದು, ಅಲ್ಲಲ್ಲಿ ಪ್ರವಾಹದ ಸ್ಥಿತಿ ನಿರ್ಮಾಣವಾಗಿದೆ. ನ ಉಳ್ಳಾಲದಲ್ಲಿ ಯುವಕನೊಬ್ಬ ಮೀನಿಗೆ ಗಾಳಹಾಕಲು ಹೋಗಿ ನೀರು ಪಾಲಾಗಿದ್ದಾನೆ.

ಭಾರಿ ಮಳೆ ಬಿದ್ದಿರುವ ಪರಿಣಾಮ ನೇತ್ರಾವತಿ, ಕುಮಾರಧಾರಾ ನದಿಗಳು ಅಪಾಯದ ಮಟ್ಟವನ್ನು ಮೀರಿ ಹರಿಯುತ್ತಿವೆ. ಮಂಗಳೂರಿಗುಡ್ಡ ಕುಸಿತದಿಂದಾಗಿ ಬೆಂಗಳೂರು-ಮಂಗಳೂರು ರೈಲು ಸಂಚಾರವೂ ಸ್ಥಗಿತವಾಗಿದೆ. ಆದರೆ, ರಾಜ್ಯದ ಉಳಿದೆಡೆ ಮಳೆಯ ಪ್ರಮಾಣ ಕುಗ್ಗಿದೆ.

ಬೆಂ.-ಮಂ. ರಸ್ತೆ ಸಂಚಾರಕ್ಕೆ 7 ತಾಸು ತಡೆ:

ದಕ್ಷಿಣ ಕನ್ನಡದಲ್ಲಿ ಮಳೆ ಇಲ್ಲದಿದ್ದರೂ ಪಶ್ಚಿಮಘಟ್ಟದಲ್ಲಿ ಭಾರೀ ಮಳೆ ಬಿದ್ದಿರುವುದರಿಂದ ನೇತ್ರಾವತಿ, ಕುಮಾರಧಾರಾ ನದಿಗಳು ಅಪಾಯಕಾರಿ ಮಟ್ಟದಲ್ಲಿ ಹರಿಯುತ್ತಿವೆ. ಉದನೆ ಎಂಬಲ್ಲಿ ಮಂಗಳೂರು- ಬೆಂಗಳೂರು ರಸ್ತೆಯಲ್ಲಿ ಸುಮಾರು ಏಳು ತಾಸು ವಾಹನ ಸಂಚಾರಕ್ಕೆ ತಡೆ ಉಂಟಾಗಿತ್ತು. ನೀರಿನ ಪ್ರಮಾಣ ಕುಗ್ಗಿದ ಮೇಲೆ ವಾಹನಗಳು ಸಂಚರಿಸಿವೆ. ಗಾಳ ಹಾಕಿ ಮೀನು ಹಿಡಿಯಲೆಂದು ತೆರಳಿದ್ದ ಉಳ್ಳಾಲ ಸಮಿಪದ ಇನೋಳಿ ಪಾನೇಲ ನಿವಾಸಿ ಹರೀಶ್‌ ನಾಯಕ್‌ (30) ನೇತ್ರಾವತಿ ನದಿಯಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಇವರ ಮೃತದೇಹ ನೀರಿನಲ್ಲಿ ಮುಳುಗಿದ ಸ್ಥಳದಿಂದ ಸ್ಪಲ್ಪ ದೂರದಲ್ಲಿ ಪತ್ತೆಯಾಗಿದೆ.

ರಸ್ತೆ ಮಾರ್ಗ ಬದಲಿಗೆ ಡಿಸಿ ಆದೇಶ:

ಮಡಿ​ಕೇರಿ ಹೊರ​ವ​ಲ​ಯದ ರಾಜಾ​ಸೀ​ಟಿನ ಕೆಳ​ಭಾ​ಗ​ದಲ್ಲಿ ರಾ.ಹೆ. 275ರಲ್ಲಿ ಎರಡು ಕಡೆ ಭೂಕು​ಸಿ​ತ​ವಾ​ಗಿ​ರುವ ಹಿನ್ನೆಲೆಯಲ್ಲಿ ಮಡಿಕೇರಿ-ಮಂಗಳೂರು ಮಾರ್ಗ​ದಲ್ಲಿ ಭಾರೀ ವಾಹ​ನ​ಗಳ ಸಂಚಾರವನ್ನು ನಿಷೇ​ಧಿ​ಸಿ ಕೊಡಗು ಡಿಸಿ ಆದೇಶ ಹೊರ​ಡಿ​ಸಿ​ದ್ದಾರೆ. ಮಡಿಕೇರಿ- ಸಂಪಾಜೆ ನಡುವೆ ಸಂಚರಿಸುವ ಎಲ್ಲಾ ವಾಹನಗಳು ರಾ.ಹೆ. 275ರ ಮಡಿಕೇರಿ ಜಿ.ಟಿ.ವೃತ್ತದಿಂದ ವಿರಾಜಪೇಟೆ ರಸ್ತೆಯ ಮೇಕೇರಿ ಮೂಲಕ ಬದಲಿ ಮಾರ್ಗ ಬಳಸಿ ತಾಳತ್‌ಮನೆ ಮಾರ್ಗವಾಗಿ ಆಗಮಿಸಲು ಮತ್ತು ತೆರಳಲು ಸೂಚಿ​ಸಿ​ದ್ದಾ​ರೆ.

ಕಾವೇರಿ ನದಿಯಲ್ಲಿ ಪ್ರವಾಹ ಮುನ್ನೆಚ್ಚರಿಕೆ

ಕೊಡಗಿನಲ್ಲಿ ಧಾರಾಕಾರ ಮಳೆ ಆಗಿರುವ ಹಿನ್ನೆಲೆಯಲ್ಲಿ ಕೆಆರ್‌ಎಸ್‌ ಅಣೆಕಟ್ಟೆಗೆ ಒಳ ಹರಿವಿನ ಪ್ರಮಾಣ ಹೆಚ್ಚಳವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ವಹಿಸಿ ಗುರುವಾರ ಜಲಾಶಯದಿಂದ 43 ಸಾವಿರಕ್ಕೂ ಅಧಿಕ ಕ್ಯುಸೆಕ್‌ ನೀರನ್ನು ಬಿಡಲಾಗಿದೆ. ನದಿ ಪಾತ್ರದ ಜನರು ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಮನವಿ ಮಾಡಿದ್ದಾರೆ. ರಂಗನತಿಟ್ಟು ಪಕ್ಷಿಧಾಮದಲ್ಲಿ ಮತ್ತೆ ಬೋಟಿಂಗ್‌ ಸ್ಥಗಿತಗೊಳಿಸಲಾಗಿದೆ. ಕಬಿನಿ ಜಲಾಶಯದಿಂದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ 71 ಸಾವಿರ ಕ್ಯುಸೆಕ್‌ ನೀರು ಬಿಡುಗಡೆ ಮಾಡಲಾಗಿದೆ ಎಂದು ಜಲಾಶಯದ ಇಇ ಜಗದೀಶ್‌ ಹೇಳಿದ್ದಾರೆ.

ಆಲಮಟ್ಟಿಡ್ಯಾಂಗೆ 12ರಂದು ಸಿಎಂ ಬಾಗಿನ:

ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಆ.12 ರಂದು ಆಲಮಟ್ಟಿಜಲಾಶಯಕ್ಕೆ ಬಾಗಿನ ಅರ್ಪಿಸಲಿದ್ದಾರೆ. ಆ.12 ರಂದು ಮಧ್ಯಾಹ್ನ 2ಕ್ಕೆ ಹುಬ್ಬಳ್ಳಿಯಿಂದ ಹೆಲಿಕಾಪ್ಟರ್‌ ಮೂಲಕ ಪ್ರಯಾಣ ಬೆಳೆಸಿ ಮಧ್ಯಾಹ್ನ 3ಕ್ಕೆ ಆಲಮಟ್ಟಿಜಲಾಶಯ ಹೆಲಿಪ್ಯಾಡ್‌ಗೆ ಆಗಮಿಸುವರು. ಬಳಿಕ ಬಾಗಿನ ಅರ್ಪಿಸಲಿದ್ದಾರೆ