24 ಗಂಟೆ ವಿವಿಧೆಡೆ ಮುಂದುವರಿಯಲಿದೆ ವರುಣನ ಆರ್ಭಟ

Heavy rain in parts of Kodagu district
Highlights

ಅವಿಭಜಿತ ದಕ್ಷಿಣ ಕನ್ನಡ ಮತ್ತು ಕೊಡಗಿನಲ್ಲಿ ಮುಂದಿನ 24 ಗಂಟೆಗಳಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಶಾಲಾ-ಕಾಲೇಜುಗಳಿಗೆ ಇಂದು ರಜೆ ಘೋಷಿಸಲಾಗಿದೆ.

ಬೆಂಗಳೂರು :  ಕರಾವಳಿ ಜಿಲ್ಲೆಗಳು ಸೇರಿದಂತೆ ರಾಜ್ಯದ ಹಲವೆಡೆ ಮತ್ತೆ ಭರ್ಜರಿ ಮಳೆಯಾಗಿದೆ. ಕೆಲವು ದಿನಗಳ ಬಿಡುವಿನ ನಂತರ ಮತ್ತೆ ಅಬ್ಬರಿಸಿದ ಮುಂಗಾರು ಮಳೆಗೆ ಕರಾವಳಿ ಜಿಲ್ಲೆಗಳ ತಗ್ಗುಪ್ರದೇಶಗಳಲ್ಲಿ ನೆರೆಯ ಆತಂಕ ಸೃಷ್ಟಿಸಿದೆ. ಅವಿಭಜಿತ ದಕ್ಷಿಣ ಕನ್ನಡ ಮತ್ತು ಕೊಡಗಿನಲ್ಲಿ ಮುಂದಿನ 24 ಗಂಟೆಗಳಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಶಾಲಾ-ಕಾಲೇಜುಗಳಿಗೆ ಇಂದು ರಜೆ ಘೋಷಿಸಲಾಗಿದೆ.

ಕೊಚ್ಚಿಹೋದ ತಾತ್ಕಾಲಿಕ ರಸ್ತೆ: ಉತ್ತರ ಕನ್ನಡ ಜಿಲ್ಲೆಯಲ್ಲಿ ಬೆಳಗ್ಗೆಯಿಂದ ಬಿರುಸಿನ ಮಳೆಯಾಗಿದ್ದು, ಭಟ್ಕಳ ತಾಲೂಕಿನ ಶಿರಾಲಿ ಗ್ರಾಪಂ ವ್ಯಾಪ್ತಿಯ ಪಳ್ಳಿಹೊಳೆ ಸೇತುವೆ ಕಾಮಗಾರಿ ಸಂಬಂಧ ನಿರ್ಮಿಸಿದ್ದ ತಾತ್ಕಾಲಿಕ ಸಂಪರ್ಕ ರಸ್ತೆ ನೀರಿನ ರಭಸಕ್ಕೆ ಕೊಚ್ಚಿ ಹೋಗಿದೆ. ಜಿಲ್ಲೆಯ ಕಾರವಾರ, ಭಟ್ಕಳ, ಹೊನ್ನಾವರ, ಕುಮಟಾ, ಅಂಕೋಲಾ, ಶಿರಸಿ, ಸಿದ್ದಾಪುರ, ಹಳಿಯಾಳ ಸೇರಿದಂತೆ ಬಹುತೇಕ ಕಡೆ ಉತ್ತಮ ಮಳೆಯಾಗಿದ್ದು, ನದಿ ತೊರೆಗಳೆಲ್ಲ ಉಕ್ಕಿ ಹರಿಯುತ್ತಿವೆ.

ಶಾಲಾ-ಕಾಲೇಜುಗಳಿಗೆ ರಜೆ:  ದ.ಕ. ಜಿಲ್ಲೆಯಲ್ಲಿ ಮುಂಜಾನೆ ಧಾರಾಕಾರ ಮಳೆ ಸುರಿದಿದ್ದು, ನೇತ್ರಾವತಿ ಮತ್ತು ಪುಣ್ಯ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದ ಬಳಿ ಕುಮಾರಧಾರಾ ನದಿ ನೀರಿನ ಮಟ್ಟದಲ್ಲಿ ಏರಿಕೆಯಾಗಿದೆ. ಸುಳ್ಯ ತಾಲೂಕಿನ ಪೆರುವಾಜೆಯ ಶ್ರೀ ಜಲದುರ್ಗಾದೇವಿ ದೇವಸ್ಥಾನಕ್ಕೆ ನೆರೆ ನೀರು ನುಗ್ಗಿದೆ. ಇನ್ನು ಉಡುಪಿಯಲ್ಲೂ ತಗ್ಗು ಪ್ರದೇಶಗಳು ಜಲಾವೃತಗೊಂಡು ನೆರೆಯ ಆತಂಕ ಸೃಷ್ಟಿಯಾಗಿದೆ.

ರಾಜರಕೋಟೆ ಜಲಾವೃತ:

ಕೊಡಗು ಜಿಲ್ಲೆಯಲ್ಲಿ ಧಾರಾಕಾರ ಮಳೆಗೆ ಕಾವೇರಿ ನದಿ ನೀರಿನ ಮಟ್ಟಏರಿಕೆಯಾಗಿದ್ದು, ಭಾಗಮಂಡಲದ ತ್ರಿವೇಣಿ ಸಂಗಮದ ನೀರು ರಸ್ತೆ ಬಳಿ ಬಂದಿದೆ. ಮಡಿಕೇರಿಯ ರಾಜರಕೋಟೆ ಆವರಣ ಮಳೆ ನೀರಿನಿಂದ ಜಲಾವೃತವಾಗಿದೆ. ದಕ್ಷಿಣ ಕನ್ನಡ, ಉಡುಪಿ ಮತ್ತು ಕೊಡಗಿನಲ್ಲಿ ಭಾರೀ ಮಳೆಯ ಮುನ್ಸೂಚನೆ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಜಿಲ್ಲಾಡಳಿತ ಶುಕ್ರವಾರದಿಂದಲೇ ಎರಡು ದಿನ ಶಾಲಾ, ಕಾಲೇಜುಗಳಿಗೆ ರಜೆ ಘೋಷಿಸಿತ್ತು.

ಕೊಚ್ಚಿ ಹೋದ ಸೇತುವೆ: ಬೀದರ್‌ ಜಿಲ್ಲೆಯ ಔರಾದ್‌ ತಾಲೂಕಿನಲ್ಲಿ ಗುರುವಾರ ರಾತ್ರಿಯಿಂದೀಚೆಗೆ ಮುಂದುವರಿದಿರುವ ವರುಣನ ಆರ್ಭಟದಿಂದ ಮಾಂಜ್ರಾ ನದಿ ತುಂಬಿ ಹರಿಯುತ್ತಿದೆ. ಮಾಂಜ್ರಾ ನದಿಗೆ ಹೊಂದಿಕೊಂಡಿರುವ ಸುಮಾರು 3ಸಾವಿರ ಜನಸಂಖ್ಯೆ ಹೊಂದಿರುವ ತಾಲೂಕಿನ ನಿಡೋದಾ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಸೇತುವೆ ಕೊಚ್ಚಿ ಹೋಗಿ ಗ್ರಾಮದ ಸಂಪರ್ಕ ಕಡಿತಗೊಂಡಿದೆ.

ಉಳಿದಂತೆ ಗದಗ, ಬಳ್ಳಾರಿ, ರಾಯಚೂರು, ಬಾಗಲಕೋಟೆ, ಕೊಪ್ಪಳ, ಶಿವಮೊಗ್ಗ, ಚಿಕ್ಕಮಗಳೂರಲ್ಲೂ ಉತ್ತಮ ಮಳೆಯಾಗಿದೆ. ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕಿನ ಹನುಮನಾಳದಲ್ಲಿ ಭಾರೀ ಮಳೆ ಸುರಿದಿದೆ. ಒಟ್ಟಾರೆ ಕರಾವಳಿ ಜಿಲ್ಲೆಗಳಾದ ಉಡುಪಿಯಲ್ಲಿ 63 ಮಿ.ಮೀ, ಉತ್ತರ ಕನ್ನಡದಲ್ಲಿ 80 ಮಿ.ಮೀ, ದಕ್ಷಿಣ ಕನ್ನಡದಲ್ಲಿ 40 ಮಿ.ಮೀ.ಗೂ ಹೆಚ್ಚು ಮಳೆ ಸುರಿದಿದೆ. ಶಿವಮೊಗ್ಗದಲ್ಲಿ 55 ಮಿ.ಮೀ, ಕೊಡಗಿನಲ್ಲಿ 53 ಮಿ.ಮೀ, ಚಿಕ್ಕಮಗಳೂರಿನಲ್ಲಿ 40 ಮಿ.ಮೀ. ಮಳೆ ದಾಖಲಾಗಿದೆ.

loader