ರಾಜ್ಯಾದ್ಯಂತ ಭರಣಿ ಮಳೆ ಆರ್ಭಟ ಮುಂದುವರಿದಿದೆ. ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ಕೊಪ್ಪಳ, ಗದಗ ಹುಬ್ಬಳ್ಳಿ ಧಾರವಾಡದಲ್ಲಿ ಬಿರುಗಾಳಿ ಸಹಿತ ಮಳೆಯಾಗಿದ್ದು, ರೈತರ ಮುಖದಲ್ಲಿ ಸಂತಸ ಮೂಡಿಸಿದೆ. ಮತ್ತೊಂದೆಡೆ ಅಪಾರ ಹಾನಿ ಸಂಭವಿಸಿದೆ.
ಬೆಂಗಳೂರು(ಮೇ.15): ರಾಜ್ಯಾದ್ಯಂತ ಭರಣಿ ಮಳೆ ಆರ್ಭಟ ಮುಂದುವರಿದಿದೆ. ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ಕೊಪ್ಪಳ, ಗದಗ ಹುಬ್ಬಳ್ಳಿ ಧಾರವಾಡದಲ್ಲಿ ಬಿರುಗಾಳಿ ಸಹಿತ ಮಳೆಯಾಗಿದ್ದು, ರೈತರ ಮುಖದಲ್ಲಿ ಸಂತಸ ಮೂಡಿಸಿದೆ. ಮತ್ತೊಂದೆಡೆ ಅಪಾರ ಹಾನಿ ಸಂಭವಿಸಿದೆ.
ಮುಂಗಾರು ಶುರುವಾಗುತ್ತಿದ್ದಂತೆ ರೈತರ ಮೊಗದಲ್ಲಿ ಸಂತಸ ಮೂಡಿದೆ. ಕೃಷಿ ಕಾರ್ಯಗಳು ಗರಿಗೆದರುತ್ತಿವೆ. ರಾಜಧಾನಿ ಬೆಂಗಳೂರು, ಆನೇಕಲ್ ಸೇರಿದಂತೆ ಬಹುತೇಕ ಕಡೆ ಭಾರೀ ಮಳೆಯಾಗಿದೆ. ದುರಂತವೆಂದರೆ ವರುಣನ ಅರ್ಭಟಕ್ಕೆ ಗೋಡೆ ಕುಸಿದು ಜಾನ್ಸನ್ ಮಾರ್ಕೆಟ್ ಬಳಿ ಓರ್ವ ಆಟೋ ಚಾಲಕ ಕರೀಂ ಸಾವಿಗೀಡಾಗಿದ್ದಾನೆ. ಇದೇ ವೇಳೆ ಮತ್ತೊಬ್ಬ ನೀಲಸಂದ್ರದ ಬಾಲಕ ಜುಮಾನ್ ರಜಾ ಗಂಭೀರ ಗಾಯವಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಟ್ಯಾನರಿ ರೋಡ್'ನಲ್ಲಿ ಸಿಡಿಲಿಗೆ ತೆಂಗಿನ ಮರದಲ್ಲಿ ಬೆಂಕಿ ಕಾಣಿಸಿಕೊಂಡಿತು.
ಗದಗದಲ್ಲೂ ವರುಣನ ಅಬ್ಬರ ಜೋರಾಗಿತ್ತು. ಸಿಡಿಲು ಬಡಿದು 50 ವರ್ಷದ ಫಕೀರವ್ವ ಮೃತಪಟ್ಟಿದ್ದಾಳೆ. ನಗರದ ವಡ್ಡರಗೇರಿ ಬಡಾವಣೆಯಲ್ಲಿ ವರುಣನ ಅಬ್ಬರ ಸೂತಕಛಾಯೆ ತಂದೊಡ್ಡಿದೆ. ಜತೆಗ ಮುಳಗುಂದದ ತಗ್ಗು ಪ್ರದೇಶದಲ್ಲಿ ನೀರು ನುಗ್ಗಿ ಜನರು ಪರದಾಡಿದರು.
ಇತ್ತ ಕೊಪ್ಪಳದಲ್ಲಿ ಮೂರು ಎತ್ತುಗಳು ಸಿಡಿಲಿಗೆ ಬಲಿಯಾಗಿವೆ. ಯಲಬುರ್ಗಾ ತಾಲೂಕಿನ ನೆಲಜೇರಿ ಗ್ರಾಮದಲ್ಲಿ ಫಕೀರಮ್ಮ ಎನ್ನುವರಿಗೆ ಸೇರಿದ ಎತ್ತುಗಳು ಸಿಡಿಲಿಗೆ ತುತ್ತಾಗಿವೆ. ಜತೆಗೆ ಕೊಡದಾಳ ಗ್ರಾಮದಲ್ಲಿ 20ಕ್ಕೂ ಹೆಚ್ಚು ಮನೆಗಳ ಶೀಟ್ ಗಳು ಹಾರಿಹೋಗಿದ್ದು, 10ಕ್ಕೂ ಹೆಚ್ಚು ಮರಗಳು ಧರೆಗುರುಳಿವೆ. ಅಪಾರ ಪ್ರಮಾಣದ ಜೋಳದ ಬೆಳೆ ಹಾನಿಯಾಗಿದೆ.
ಇನ್ನೂ ಹುಬ್ಬಳ್ಳಿ, ಧಾರವಾಡದಲ್ಲೂ ಬಿರುಗಾಳಿ ಸಹಿತ ಧಾರಕಾರ ಮಳೆಗೆ ಮರಗಳು ಮನೆಗಳ ಮೇಲೆ ಉರುಳಿ ಜನರು ಪರದಾಡುವಂತಾಯ್ತು. ಧಾರವಾಡದಲ್ಲಿ ಮಳೆಗೆ ಶಾಲೆಯ ಮೇಲ್ಚಾವಣಿ ಕುಸಿದಿದೆ. ಒಟ್ಟಿನಲ್ಲಿ ಮುಂಗಾರು ಚುರುಕಗೊಂಡಿರುವುದರಿಂದ ರೈತರ ಮೊಗದಲ್ಲಿ ಸಂತಸ ಮೂಡಿದ್ದು, ಕೃಷಿ ಚಟುವಟಿಕೆಗಳು ಗರಿಗೆದರಿವೆ.
