Asianet Suvarna News Asianet Suvarna News

ಬೆಂಗಳೂರಿನಲ್ಲಿ ಭಾರೀ ಮಳೆ

ಬೆಂಗಳೂರಿನಲ್ಲಿ ಕಳೆದ ಎರಡು ದಿನಗಳಿಂದ ಭಾರೀ ಪ್ರಮಾಣದಲ್ಲಿ ಮಳೆ ಸುರಿಯುತ್ತಿದ್ದು ಜನಜೀವನ ಅಸ್ತವ್ಯಸ್ತವಾಗಿದೆ. ಇದರಿಂದ ನಾಗರಿಕರು  ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. 

Heavy Rain In Bangalore
Author
Bengaluru, First Published Sep 16, 2018, 7:35 AM IST

ಬೆಂಗಳೂರು : ನಗರದಲ್ಲಿ ಶನಿವಾರ ಸಂಜೆ ಸುರಿದ ಭಾರಿ ಮಳೆಗೆ ವಿವಿಧ ಬಡಾವಣೆಯಲ್ಲಿ ಸುಮಾರು ನಾಲ್ಕಕ್ಕೂ ಅಧಿಕ ಮರಗಳು ಧರೆಗುರುಳಿದ್ದು, ಎಚ್‌ಎಸ್ ಆರ್ ಲೇಔಟ್, ಕಿನೊ ಚಿತ್ರಮಂದಿರ, ಮೈಸೂರು ರಸ್ತೆ ಸಿಲ್ವರ್ ಜುಬಲಿ ಪಾರ್ಕ್ ಬಳಿ ಸೇರಿದಂತೆ ಹಲವೆಡೆ ಮಳೆ ನೀರು ರಸ್ತೆಯಲ್ಲಿ ನಿಂತಿದ್ದರಿಂದ ಸುಗಮ ವಾಹನ ಸಂಚಾರಕ್ಕೆ ಅಡ್ಡಿಯಾಯಿತು.

ಶನಿವಾರ ಸಂಜೆ ಸುರಿದ ಮಳೆಯಿಂದ ಏಕಾಏಕಿ ರಸ್ತೆಗಳು ಜಲಾವೃತಗೊಂಡು ಸಂಚಾರ ದಟ್ಟಣೆಯಿಂದ ವಾಹನ ಸವಾರರು ಪರದಾಡಿದರು. ಕುಮಾರಸ್ವಾಮಿ ಲೇಔಟ್, ಚಾಮರಾಜಪೇಟೆಯ ಉಮಾ ಚಿತ್ರಮಂದಿರ ಬಳಿ, ರಾಜರಾಜೇಶ್ವರಿ ನಗರ, ಮಲ್ಲೇಶ್ವರಂ ಸೇರಿದಂತೆ ನಾಲ್ಕೈದು ಕಡೆ ಮರ ಹಾಗೂ ಕೊಂಬೆಗಳು ನೆಲಕ್ಕುರುಳಿವೆ. ಜೆ.ಸಿ.ರಸ್ತೆಯ ಭಾರತ್ ಜಂಕ್ಷನ್ ಹಾಗೂ ಕಾಮಾಕ್ಯಚಿತ್ರಮಂದಿರದ ಬಳಿ ಕಾಲುವೆ ನೀರು ತುಂಬಿ ರಸ್ತೆಗೆ ಹರಿದಿದ್ದರಿಂದ ವಾಹನ ಸವಾರರು ತೀವ್ರ ತೊಂದರೆ ಅನುಭವಿಸಬೇಕಾಯಿತು.

ಸುಬೇದಾರ್ ರಸ್ತೆಯ ಕಿನೊ ಚಿತ್ರಮಂದಿರ ಬಳಿ ಮಳೆಯಿಂದ ಸಂಚಾರಿ ದಟ್ಟಣೆ ಉಂಟಾಯಿತು. ಅನಂದ್ ರಾವ್ ವೃತ್ತದ ರೇಸ್‌ಕೋರ್ಸ್ ಬಳಿ ರಸ್ತೆಯಲ್ಲಿ ನೀರು ನಿಂತುಕೊಂಡಿತ್ತು. ಅನೇಕ ಕಡೆ ರಸ್ತೆಯಲ್ಲಿರುವ ಮ್ಯಾನ್ ಹೋಲ್‌ಗಳು ಉಕ್ಕಿ ಹರಿದ ಪರಿಣಾಮ ಜನ ಮೂಗು ಮುಚ್ಚಿಕೊಂಡು ಹೋಗುವ ಪರಿಸ್ಥಿತಿ ಉಂಟಾಯಿತು. ಚಾಲುಕ್ಯ ವೃತ್ತ, ಓಕಳೀಪುರ ಸೇರಿದಂತೆ ಹಲವು ಕಡೆ ರಸ್ತೆ, ಅಂಡರ್‌ಪಾಸ್‌ಗಳಲ್ಲಿ ನೀರು ನಿಂತು ಸಾರ್ವಜನಿಕರು ತೀವ್ರ ತೊಂದರೆ ಅನುಭವಿ ಸಬೇಕಾಯಿತು. 

ಕೆಲವೆಡೆ ವಿದ್ಯುತ್ ವ್ಯತ್ಯಯ ಉಂಟಾಯಿತು. ಎಚ್‌ಎಸ್‌ಆರ್ ಲೇಔಟ್‌ನ 6 ಹಂತದಲ್ಲಿ ರಾಜಕಾಲುವೆ ಕಾಮಗಾರಿ ಮಾಡಲಾಗುತ್ತಿತ್ತು. ಇದರಿಂದ ಮಳೆ ನೀರು ರಸ್ತೆಯಲ್ಲಿ ತುಂಬಿಕೊಂಡಿದೆ. ನಗರ ಬೇರೆ ಕಡೆಯಲ್ಲಿ ಯಾವುದೇ ತೊಂದರೆ ಉಂಟಾಗದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ ಎಂದು ಬಿಬಿಎಂಪಿ ಬೃಹತ್ ನೀರುಗಾಲುವೆ ಅಧಿಕಾರಿಗಳು ತಿಳಿಸಿದ್ದಾರೆ.

Follow Us:
Download App:
  • android
  • ios