ನವದೆಹಲಿ: ಕರಾವಳಿ ಕರ್ನಾಟಕ ಸೇರಿದಂತೆ ದೇಶದ 16 ರಾಜ್ಯಗಳ ವಿವಿಧೆಡೆಗಳಲ್ಲಿ ಮುಂದಿನ ಎರಡು ದಿನಗಳಲ್ಲಿ ಭಾರಿ ಮಳೆಯಾಗುವ ನಿರೀಕ್ಷೆಯಿದೆ. ಈ ಹಿನ್ನೆಲೆಯಲ್ಲಿ ಮೀನುಗಾರರು ಸಮುದ್ರಕ್ಕಿಳಿಯದಂತೆ ಮುನ್ನೆಚ್ಚರಿಕೆ ನೀಡಲಾಗಿದೆ ಎಂದು ರಾಷ್ಟ್ರೀಯ ದುರಂತ ನಿರ್ವಹಣಾ ಪ್ರಾಧಿಕಾರ(ಎನ್‌ಡಿಎಂಎ) ಹೇಳಿಕೆಯಲ್ಲಿ ತಿಳಿಸಲಾಗಿದೆ.

ಕರಾವಳಿ ಕರ್ನಾಟಕ, ಕೇರಳ, ಆಂಧ್ರ ಪ್ರದೇಶ, ತಮಿಳುನಾಡು ಸೇರಿದಂತೆ ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಭೀಕರ ಮಳೆಯಾಗಲಿದೆ. ಉತ್ತರಾಖಂಡದಲ್ಲಿ ಸೋಮವಾರ ಭಾರಿ ಮಳೆ ಸುರಿಯಲಿದ್ದು, ಅಪಾಯದ ಮುನ್ನೆಚ್ಚರಿಕೆ ನೀಡಲಾಗಿದೆ. ಅರೇಬಿಯನ್‌ ಸಮುದ್ರದ ಪಶ್ಚಿಮ ಕೇಂದ್ರದಲ್ಲಿ ಸಮುದ್ರ ತುಂಬಾ ಪ್ರಕ್ಷುಬ್ಧವಾಗಿರಲಿದೆ.

ಹೀಗಾಗಿ ಮೀನುಗಾರರು ಸಮುದ್ರಕ್ಕಿಳಿಯುವುದು ಅಪಾಯ ಎನ್ನಲಾಗಿದೆ. ಉತ್ತರಾಖಂಡ, ಪಶ್ಚಿಮ ಬಂಗಾಳ, ಸಿಕ್ಕಿಂ, ಹಿಮಾಚಲ ಪ್ರದೇಶ, ಉತ್ತರ ಪ್ರದೇಶ, ಛತ್ತೀಸ್‌ಗಢ, ಬಿಹಾರ, ಜಾರ್ಖಂಡ್‌, ಒಡಿಶಾ, ಅರುಣಾಚಲ ಪ್ರದೇಶ, ಅಸ್ಸಾಂ, ಮೇಘಾಲಯ ತೀವ್ರ ಮಳೆಯಾಗಲಿರುವ ಇತರ ರಾಜ್ಯಗಳು.