ಬೆಂಗಳೂರು (ಅ.13): ಕಾವೇರಿ ಜಲಾನಯನ ಪ್ರದೇಶದಲ್ಲಿ ಬುಧವಾರ ರಾತ್ರಿ ಮತ್ತು ಗುರುವಾರಗಳಂದು ಉತ್ತಮ ಮಳೆ ಸುರಿದಿದ್ದು ಜಲವಿವಾದದಿಂದ ಕಂಗೆಟ್ಟಿದ್ದ ರೈತರು ಕೊಂಚ ನಿಟ್ಟುಸಿರು ಬಿಡುವಂತಾಗಿದೆ. ಮೈಸೂರು, ಮಂಡ್ಯ, ಚಾಮರಾಜನಗರ, ಕೊಡಗು ಜಿಲ್ಲೆಗಳ ಹಲವೆಡೆ ವರುಣ ತನ್ನ ಪ್ರತಾಪ ತೋರಿದ್ದು ಕೆಲವೆಡೆ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಬೆಳೆನಾಶವಾದ ಬಗ್ಗೆಯೂ ವರದಿಯಾಗಿದೆ.
ಬೆಂಗಳೂರು (ಅ.13): ಕಾವೇರಿ ಜಲಾನಯನ ಪ್ರದೇಶದಲ್ಲಿ ಬುಧವಾರ ರಾತ್ರಿ ಮತ್ತು ಗುರುವಾರಗಳಂದು ಉತ್ತಮ ಮಳೆ ಸುರಿದಿದ್ದು ಜಲವಿವಾದದಿಂದ ಕಂಗೆಟ್ಟಿದ್ದ ರೈತರು ಕೊಂಚ ನಿಟ್ಟುಸಿರು ಬಿಡುವಂತಾಗಿದೆ. ಮೈಸೂರು, ಮಂಡ್ಯ, ಚಾಮರಾಜನಗರ, ಕೊಡಗು ಜಿಲ್ಲೆಗಳ ಹಲವೆಡೆ ವರುಣ ತನ್ನ ಪ್ರತಾಪ ತೋರಿದ್ದು ಕೆಲವೆಡೆ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಬೆಳೆನಾಶವಾದ ಬಗ್ಗೆಯೂ ವರದಿಯಾಗಿದೆ.
ಹವಾಮಾನ ಇಲಾಖೆ ಮಾಹಿತಿಯಂತೆ ಅರಬ್ಬಿ ಸಮುದ್ರದಲ್ಲಿ ವಾಯು ಭಾರ ಕುಸಿತದ ಪರಿಣಾಮ ಮುಂದಿನ ನಾಲ್ಕು ದಿನಗಳ ಕಾಲ ಬೆಂಗಳೂರು, ಮಂಡ್ಯ ಮೈಸೂರು ಸೇರಿದಂತೆ ದಕ್ಷಿಣ ಕರ್ನಾಟಕದಲ್ಲಿ ಹಲವು ಜಿಲ್ಲೆಗಳಲ್ಲಿ ಸತತವಾಗಿ ಮಳೆ ಬೀಳುವ ಸಂಭವವಿದೆ.
ಮೈಸೂರು ಜಿಲ್ಲೆ ಪಿರಿಯಾಪಟ್ಟಣದಲ್ಲಿ ಗುರುವಾರ ಬೆಳಗ್ಗೆ ಎರಡು ಗಂಟೆಗಳ ಕಾಲ ಸುರಿದ ಭಾರಿ ಮಳೆಗೆ ಪಟ್ಟಣದಲ್ಲಿನ ಚರಂಡಿ ನೀರು ಅಂಗಡಿ, ಮುಂಗಟ್ಟುಗಳಿಗೆ ನುಗ್ಗಿದೆ.
ಪಟ್ಟಣದ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣ ಪಕ್ಕದ ಕಾಲುವೆಯ ಚರಂಡಿ ನೀರು ಮಳೆಯಿಂದಾಗಿ ತುಂಬಿ ಹರಿದಿದ್ದು, ಎದುರಿನ ಹೋಟೆಲ… ಹಾಗೂ ಬೇಕರಿಗೆ ನೀರು ನುಗ್ಗಿ ನಷ್ಟಸಂಭವಿಸಿದೆ.
ಮಂಡ್ಯ ಜಿಲ್ಲೆಯಾದ್ಯಂತ ಕಳೆದ ರಾತ್ರಿಯಿಂದ ಗುರುವಾರ ಬೆಳಿಗ್ಗೆ ತನಕ ಸುರಿದ ಭಾರಿ ಮಳೆ, ಬಿಸಿಲಿನ ತಾಪವನ್ನು ತಗ್ಗಿಸಿತಲ್ಲದೇ ಕೆæರೆ ಕಟ್ಟೆಗಳನ್ನು ತುಂಬಿಸುವ ಭರವಸೆ ನೀಡಿದೆ.
ಜಿಲ್ಲೆಯಲ್ಲಿ ಸರಾಸರಿ 27.30 ಮಿ.ಮೀ. ಮಳೆಯಾಗಿದೆ. ಮಳವಳ್ಳಿ ತಾಲೂಕಿನಲ್ಲಿ 86 ಮಿ.ಮೀ.ಗೂ ಹೆಚ್ಚು ಮಳೆಯಾಗಿದ್ದರೆ, ಶ್ರೀರಂಗಪಟ್ಟಣದಲ್ಲಿ ಅತಿ ಕಡಿಮೆ, ಅಂದರೆ ಕೇವಲ 6. 8 ಮಿ.ಮೀ. ಮಳೆಯಾಗಿದೆ. ಉಳಿದಂತೆ ಮಂಡ್ಯ ತಾಲೂಕಿನಲ್ಲಿ 20 ಮಿ.ಮೀ, ಮದ್ದೂರಲ್ಲಿ 22.24 ಮಿ.ಮೀ, ಕೆ.ಆರ್ .ಪೇಟೆಯಲ್ಲಿ 21.10 ಮಿ.ಮೀ, ಪಾಂಡವಪುರದಲ್ಲಿ 24.80 ಮಿ.ಮೀ, ನಾಗಮಂಗಲದಲ್ಲಿ 10.20 ಮಿ.ಮೀ. ಮಳೆಯಾಗಿದೆ. ಮಂಡ್ಯ ತಾಲೂಕಿನ ಮಾರಸಿಂಗನ ಹಳ್ಳಿ, ತಿಮ್ಮನಹೊಸೂರು ಸೇರಿದಂತೆ ಕೆಲವು ಗ್ರಾಮಗಳಲ್ಲಿ 25 ರಿಂದ 30 ಎಕರೆ ಕೃಷಿ ಭೂಮಿಯಲ್ಲಿ ಬೆಳೆಯಲಾಗಿದ್ದ ಬೆಳೆ ಕೂಡ ನಾಶ ವಾಗಿದೆ.
ಕೆರೆತುಂಬಿ ಗ್ರಾಮದೊಳಗೆ ಹರಿದ ನೀರು: ಚಾಮರಾಜನಗರ ಜಿಲ್ಲೆಯ ಹನೂರು ಕ್ಷೇತ್ರ ವ್ಯಾಪ್ತಿಯ ಲೊಕ್ಕನಹಳ್ಳಿ ಹಾಗೂ ಸುತ್ತಮುತ್ತಲಿನಲ್ಲಿ ಬುಧವಾರ ರಾತ್ರಿ ಸುರಿದ ಮಳೆಯಿಂದಾಗಿ ಮಳೆ ನೀರು ಕೆರೆಗೆ ತುಂಬಿದೆ. ಕೆರೆ ನೀರು ಗ್ರಾಮದೊಳಗೆ ನೀರು ಹರಿದುಬರುತ್ತಿದ್ದನ್ನು ಕಂಡು ಎಚ್ಚೆತ್ತ ಗ್ರಾಮಸ್ಥರು ಕೂಡಲೇ ಕೆರೆ ಹೊರಭಾಗದಿಂದ ರೈತರ ಜಮೀನಿಗೆ ಕೆರೆ ಕೊಡಿ ಒಡೆದು ನೀರು ಬಿಟ್ಟಿದ್ದರಿಂದ ಭಾರಿ ಅನಾಹುತ ತಪ್ಪಿದೆ.
ಕಾವೇರಿ ಉಗಮ ಜಿಲ್ಲೆಯಾದ ಕೊಡಗಿನಲ್ಲೂ ಉತ್ತಮ ಮಳೆಯಾಗಿದ್ದು ಕಳೆದ 20 ಗಂಟೆಯಲ್ಲಿ ಸರಾಸರಿ 2.12 ಮಿ.ಮೀ. ಸುರಿದಿದೆ. ಮಡಿಕೇರಿ ತಾಲೂಕಿನಲ್ಲಿ 6.35 ಮಿ.ಮೀ ಮಳೆಯಾಗಿದೆ.
