ಬೀದರ್/ಕೊಪ್ಪಳ(ಅ.1): ರಾಜ್ಯದಲ್ಲಿ ವರುಣನ ಅಬ್ಬರ ಮತ್ತೆ ಶುರುವಾಗಿದೆ. ಕಳೆದ ರಾತ್ರಿ ಸುರಿದ ಭಾರೀ ಮಳೆಗೆ ಬೀದರ್ ಮತ್ತು ಕೊಪ್ಪಳ ತತ್ತರಿಸಿದೆ. ಕೊಂಚ ಬಿಡುವ ಕೊಟ್ಟಿದ ವರುಣ ಮತ್ತೆ ತನ್ನ ಆರ್ಭಟ ಮುಂದುವರೆಸಿದ್ದಾನೆ. ಕಳೆದ ರಾತ್ರಿ ಬೀದರ್‌ನಲ್ಲಿ ಧಾರಾಕಾರ ಮಳೆ ಸುರಿದಿದೆ. ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಸೇತುವೆಗಳು ಮುಳುಗಡೆಯಾಗಿದ್ದು, ರಸ್ತೆ ಸಂಪರ್ಕ ಕಡಿತಗೊಂಡಿದೆ. ಕೆರೆಕಟ್ಟೆಗಳು ತುಂಬಿ ತುಳುಕುತ್ತಿವೆ. ನಾಲ್ಕು ಕೆರೆಗಳು ಕೋಡಿ ಹರಿದಿದ್ದು, ಬೆಳೆ ಹಾನಿಯಾಗಿದೆ.

ಇತ್ತ ಕೊಪ್ಪಳದಲ್ಲೂ ಧಾರಾಕಾರ ಮಳೆಯಾಗಿದೆ. ನಗರದ ಬಹುತೇಕ ರಸ್ತೆಗಳು ಕೆರೆಯಂತಾಗಿವೆ. ಬಸ್ ನಿಲ್ದಾಣ, ಗಡಿಯಾರ ಕಂಬ ವೃತ್ತಗಳಲ್ಲಿ ವಾಣಿಜ್ಯ ಮಳಿಗೆಗಳಿಗೆ ನೀರು ನುಗ್ಗಿದ್ದರಿಂದ ವ್ಯಾಪಾರಿಗಳು, ವಾಹನ ಸವಾರರು ತೀವ್ರ ತೊಂದರೆ ಅನುಭವಿಸಿದರು. ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ದ ಪರಿಣಾಮ ಜನರು ರಾತ್ರಿಪೂರ್ತಿ ಜಾಗರಣೆ ಮಾಡಿದರು.

ಸಚಿವ ಬಸವರಾಜ ರಾಯರೆಡ್ಡಿ , ಶಾಸಕ ರಾಘವೇಂದ್ರ ಹಿಟ್ನಾಳ್ ಮಳೆ ಹಾನಿಗೊಳಾಗದ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ಈ ವೇಳೆ ಗಣೇಶ ನಗರದ ಪ್ರಾಥಮಿಕ ಶಾಲೆಯ ಬಳಿ ಒಳಚರಂಡಿ ಕಾಮಗಾರಿಯಲ್ಲಿ ಸಚಿವರ ಇನ್ನೋವಾ ಕಾರು ಸಿಕ್ಕಿಹಾಕಿಕೊಂಡಿತು. ಆಗ ಚಾಲಕ ಅದೇಷ್ಟೇ ಪ್ರಯತ್ನ ಮಾಡಿದರೂ ಸಹ ಕಾರು ಮೇಲಕ್ಕೆ ಬರಲಿಲ್ಲ. ಆಗ ಅನಿವಾರ್ಯವಾಗಿ ಸಚಿವ ಬಸವರಾಜ ರಾಯರೆಡ್ಡಿ ಬೇರೊಂದು ಕಾರಿನಲ್ಲಿ ತೆರಳಬೇಕಾಯಿತು. ಬಳಿಕ ಜೆಸಿಬಿ ಮೂಲಕ ಸಚಿವರನ್ನು ಕಾರನ್ನು ಮೇಲೆತ್ತಲಾಯಿತು. ಇಷ್ಟೆಲ್ಲಾ ಅವಾಂತರಗಳಿಗೆ ರಾಜಕಾಲುವೆ ಒತ್ತುವರಿಯೇ ಕಾರಣ ಅಂತಾ ಸಚಿವರು ಹೇಳಿದರು.