ಬೆಂಗಳೂರು :  ಕಳೆದ ನಾಲ್ಕು ದಿನಗಳಿಂದ ಸುರಿಯುತ್ತಿದ್ದ ಮಳೆ ಬುಧವಾರ ಕೂಡಾ ಮುಂದುವರೆದಿದ್ದು, ಮುಂದಿನ ಎರಡು ದಿನಗಳ ಕಾಲ ನಗರದಲ್ಲಿ ಭಾರಿ ಮಳೆ ಉಂಟಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಬುಧವಾರದ ಮಳೆಗೆ ನಗರದ ಹಲವೆಡೆ ಮರಗಳು ಧರೆಗುರಳಿದ್ದು, ವಿವಿಧ ಬಡಾವಣೆಗಳಲ್ಲಿ ಮನೆಗಳಿಗೆ ನೀರು ನುಗ್ಗಿ ನಿವಾಸಿಗಳಿಗೆ ತೊಂದರೆ ಉಂಟಾಯಿತು. ಧಾರಾಕಾರವಾಗಿ ಸುರಿದ ಮಳೆಯಿಂದಾಗಿ ತಗ್ಗು ಪ್ರದೇಶಗಳಲ್ಲಿನ ಮನೆಗಳಿಗೆ ನೀರು ನುಗ್ಗಿದ ಪರಿಣಾಮ ಜನ ಪರದಾಡಿದರು. ಪ್ರಮುಖ ರಸ್ತೆಗಳಲ್ಲಿ ನೀರು ನಿಂತ ಪರಿಣಾಮ ವಾಹನ ಸವಾರರು ಪರದಾಡಿದರು.

ಬುಧವಾರ ಸಂಜೆ ಜೋರಾದ ಗಾಳಿಯೊಂದಿಗೆ ಸುರಿದ ಮಳೆಯ ಆರ್ಭಟದಿಂದಾಗಿ ನಗರದ ಕೋರಮಂಗಲದಲ್ಲಿ ಬೃಹತ್‌ ಮರವೊಂದು ಧರೆಗುಳಿದು ಸಾರ್ವಜನಿಕರಿಗೆ ತೀವ್ರ ತೊಂದರೆಯುಂಟಾಗಿದೆ. ಅಲ್ಲದೆ, ಬಿಟಿಎಂ ಬಡಾವಣೆಯ ಬಿಳೇಕಹಳ್ಳಿ, ಬಿಟಿಎಂ ಮುಖ್ಯರಸ್ತೆ, ಕೋಡಿಚಿಕ್ಕನಹಳ್ಳಿ ಸೇರಿದಂತೆ ಪ್ರಮುಖ ಬಡಾವಣೆಗಳಲ್ಲಿ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ಜತೆಗೆ ನಗರದ ಪ್ರಮುಖ ಅಂಡರ್‌ಪಾಸ್‌ಗಳು ಹಾಗೂ ರಸ್ತೆಗಳಲ್ಲಿ ನೀರು ನಿಂತು ಸಮಸ್ಯೆ ಉಂಟಾಯಿತು.

ಪ್ರಮುಖವಾಗಿ ಓಕಳಿಪುರ ಅಂಡರ್‌ಪಾಸ್‌, ಚಾಲುಕ್ಯ ರಸ್ತೆ, ಹೆಬ್ಬಾಳ ಮೇಲ್ಸೇತುವೆ ಕೆಳಗೆ, ಟಿನ್‌ಫ್ಯಾಕ್ಟರಿ ಸೇರಿದಂತೆ ಹಲವು ಭಾಗಗಳಲ್ಲಿ ರಸ್ತೆಗಳಲ್ಲಿ ನೀರು ನಿಂತಿದ್ದರಿಂದ ವಾಹನ ದಟ್ಟಣೆ ಉಂಟಾಗಿತ್ತು. ಇನ್ನು ಕೋರಮಂಗಲ, ಎಚ್‌ಆರ್‌ಬಿಆರ್‌ ಬಡಾವಣೆ, ಬೇಗೂರು, ಬೊಮ್ಮನಹಳ್ಳಿ, ಮಹದೇವಪುರ ಸೇರಿದಂತೆ ಹಲವೆಡೆ 5ಕ್ಕೂ ಹೆಚ್ಚು ಮರ ಹಾಗೂ ಮರದ ಕೊಂಬೆಗಳು ಉರುಳಿದ್ದು, ಯಾವುದೇ ರೀತಿಯ ಅನಾಹುತಗಳು ಸಂಭವಿಸಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕಳೆದ ನಾಲ್ಕು ದಿನಗಳಿಂದ ಸತತವಾಗಿ ಮಳೆ ಸುರಿಯುತ್ತಿದೆ. ಕಳೆದ ಎರಡು ದಿನಗಳಿಗೆ ಹೋಲಿಸಿದ್ದಲ್ಲಿ ಬುಧವಾರ ಸುರಿದ ಮಳೆ ಪ್ರಮಾಣ ಕಡಿಮೆಯಿದೆ. ಆದರೂ, ಸತತ ಮಳೆಯಿಂದ ತೇವಾಂಶ ಹೆಚ್ಚಾಗಿ ಕಡಿಮೆ ಮಳೆಗೂ ರಸ್ತೆಗಳಲ್ಲಿ ನೀರು ನಿಲ್ಲುವಂತಾಗಿದೆ. ಜೊತೆಗೆ ತಗ್ಗು ಪ್ರದೇಶಗಳಲ್ಲಿನ ಮನೆಗಳಿಗೆ ನೀರು ನುಗ್ಗುವಂತಾಗಿದೆ.

ಮಳೆ ಪ್ರಮಾಣ:  ಕೋನೇನ ಅಗ್ರಹಾರ 36 ಮಿ.ಮೀ, ಕೆ.ಆರ್‌.ಪುರ 29, ಅಂಜನಾಪುರ 28.5, ಕೋಣನಕುಂಟೆ 27.5, ಬಿಟಿಎಂ ಬಡಾವಣೆ 25.5, ಬಿಳೇಕಳ್ಳಿ 23, ಅರಕೆರೆ 17 ಮತ್ತು ಬೆಂಗಳೂರು ಉತ್ತರ ಚಿಕ್ಕಜಾಲ 14.5 ಮಿಲಿ ಮೀಟರ್‌ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಎರಡು ದಿನ ಭಾರೀ ಮಳೆ 

ಬೆಂಗಳೂರಿನಲ್ಲಿ ಮುಂದಿನ ಎರಡು ದಿನಗಳ ಕಾಲ ಭಾರೀ ಮಳೆ ಸುರಿಯುವ ಮನ್ಸೂಚನೆಯಿದ್ದು, ತಗ್ಗು ಪ್ರದೇಶಗಳಲ್ಲಿನ ಜನ ಮುಂಜಾಗ್ರತೆ ವಹಿಸುವಂತೆ ಮುಖ್ಯಮಂತ್ರಿ ಕುಮಾರಸ್ವಾಮಿ ತಿಳಿಸಿದ್ದಾರೆ. ಅಲ್ಲದೆ, ಮಳೆಯಿಂದ ಸಾರ್ವಜನಿಕರಿಗೆ ತೊಂದರೆಯಾಗದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಬಿಬಿಎಂಪಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.