ಕೋಲಾರ ಜಿಲ್ಲಾಸ್ಪತ್ರೆ ಮುಂದೆ ಹಸಿರು ಸೇನೆ ಸಂಘಟನೆಯ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಮಕ್ಕಳು ಸಾವನ್ನಪ್ಪಿದ್ದರೂ ಸ್ಥಳಕ್ಕೆ ಬಾರದ ಆರೋಗ್ಯ ಸಚಿವರ ಧೋರಣೆ ಖಂಡಿಸಿ ದಿಕ್ಕಾರ ಕೂಗಿದ ಪ್ರತಿಭಟನಾಕಾರರು, ರಮೇಶ್ ಕುಮಾರ್ ಭೂತಕ್ಕೆ ಮಕ್ಕಳ ಬೊಂಬೆಗಳನ್ನು ಕಟ್ಟಿ ಜಿಲ್ಲಾಸ್ಪತ್ರೆ ಮುಂದೆ ಧರಣೆ ನಡೆಸಿದ್ದಾರೆ.
ಕೋಲಾರ(ಆ. 23): ಕೋಲಾರದ ಜಿಲ್ಲಾಸ್ಪತ್ರೆಯಲ್ಲಿ ಮಕ್ಕಳ ಮಾರಣಹೋಮ ನಡೆಯುತ್ತಿದ್ದರೂ ಸಚಿವರು ಮಾತ್ರ ದಿವ್ಯ ದಿರ್ಲಕ್ಷ್ಯ ತೋರುತ್ತಿದ್ದಾರೆ. ನೇರ ಮಾತಿಗೆ ಹೆಸರಾಗಿರುವ ಆರೋಗ್ಯ ಸಚಿವ ರಮೇಶ್ ಕುಮಾರ್ ಅವರ ಮಾತೇ ಬೇರೆ, ಕೃತಿಯೇ ಬೇರೆ ಎಂಬ ಅನುಮಾನ ಮೂಡುತ್ತಿದೆ. ಆಸ್ಪತ್ರೆಯಿಂದ ಕೇವಲ 25 ಕಿಮೀ ದೂರದಲ್ಲಿರುವ ಶ್ರೀನಿವಾಸಪುರದಲ್ಲಿ ದೇವರಾಜ್ ಅರಸು ಜಯಂತ್ಯುತ್ಸವದಲ್ಲಿ ಪಾಲ್ಗೊಂಡಿದ್ದ ರಮೇಶ್ ಕುಮಾರ್ ಅವರು ಆಸ್ಪತ್ರೆಗೆ ಭೇಟಿ ಕೊಡಲು ಮನಸು ಮಾಡುತ್ತಿಲ್ಲ. ಆಸ್ಪತ್ರೆಯ ಸ್ಥಿತಿಗತಿ ವಿಚಾರಿಸುವಷ್ಟೂ ಅವರಿಗೆ ಪುರುಸೊತ್ತು ಇಲ್ಲವಾಗಿದೆ. ಕೋಲಾರ ಆಸ್ಪತ್ರೆಯ ದುರಂತದ ಬಗ್ಗೆ ಮುಖ್ಯಮಂತ್ರಿಗಳೇ ವರದಿ ಕೇಳಿದರೂ ಆರೋಗ್ಯ ಸಚಿವರು ಕ್ಯಾರೆ ಎನ್ನುತ್ತಿಲ್ಲ. ಸಚಿವ ರಮೇಶ್ ಕುಮಾರ್ ಉದ್ದೇಶಪೂರ್ವಕವಾಗಿ ಮೌನವಹಿಸುತ್ತಿದ್ದಾರೆಯೇ?
ಇದೇ ವೇಳೆ, ಕೋಲಾರ ಜಿಲ್ಲಾಸ್ಪತ್ರೆ ಮುಂದೆ ಹಸಿರು ಸೇನೆ ಸಂಘಟನೆಯ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಮಕ್ಕಳು ಸಾವನ್ನಪ್ಪಿದ್ದರೂ ಸ್ಥಳಕ್ಕೆ ಬಾರದ ಆರೋಗ್ಯ ಸಚಿವರ ಧೋರಣೆ ಖಂಡಿಸಿ ದಿಕ್ಕಾರ ಕೂಗಿದ ಪ್ರತಿಭಟನಾಕಾರರು, ರಮೇಶ್ ಕುಮಾರ್ ಭೂತಕ್ಕೆ ಮಕ್ಕಳ ಬೊಂಬೆಗಳನ್ನು ಕಟ್ಟಿ ಜಿಲ್ಲಾಸ್ಪತ್ರೆ ಮುಂದೆ ಧರಣೆ ನಡೆಸಿದ್ದಾರೆ.
