ನವದೆಹಲಿ[ಮೇ.31]: ಲೋಕಸಭಾ ಚುನಾವಣಾ ಫಲಿತಾಂಶದ ಬಳಿಕ ಮೇ. 30ರಂದು ರಾಷ್ಟ್ರಪತಿ ಭವನದ ಎದುರು ಆಯೋಜಿಸಿದ್ದ ಪ್ರಮಾಣ ವಚನ ಕಾರ್ಯಕ್ರಮದಲ್ಲಿ ದೇಶ ವಿದೇಶದ ರಾಜಕೀಯ ನಾಯಕರು ಸೇರಿದಂತೆ ಬಾಲಿವುಡ್ ನಾಯಕರೂ ಪಾಲ್ಗೊಂಡಿದ್ದರು. ಶಾಹಿದ್ ಕಪೂರ್, ಮೀರಾ ಕಪೂರ್, ಕಂಗನಾ ರನೌತ್ಸೇರಿದಂತೆ ಸಿನಿಮಾ ಕ್ಷೇತ್ರದ ಪ್ರಸಿದ್ಧ ಗಾಯಕಿ ಆಶಾ ಭೋಂಸ್ಲೆ ಕೂಡಾ ಶಾಮೀಲಾಗಿದ್ದರು. 

ಕಾರ್ಯಕ್ರಮ ಮುಕ್ತಾಯಗೊಂಡ ಆಗಮಿಸಿದ್ದ ಅತಿಥಿಗಳೊಂದಿಗೆ ಸೆಲ್ಫೀ ತೆಗೆದುಕೊಳ್ಳಲು ಆಗಮಿಸಿದ್ದ ಗಣ್ಯರು ಓಡಾಡಲಾರಂಭಿಸಿದ್ದಾರೆ, ಈ ವೇಳೆ ಭಾರೀ ರಶ್ ನಿರ್ಮಾಣವಾಗಿದೆ. ಈ ಕಾರ್ಯಕ್ರಮದಲ್ಲಿ ಸುಮಾರು 8 ಸಾವಿರ ಮಂದಿ ಭಾಗಿಯಾಗಿದ್ದರು ಎಂಬುವುದು ಗಮನಾರ್ಹ. ಹೀಗಿರುವಾಗ ಈ ರಶ್ ನಡುವೆ ಗಾಯಕಿ ಆಶಾ ಭೋಂಸ್ಲೆ ಗಾಬರಿಗೊಳಗಾಗಿದ್ದಾರೆ. ಆದರೆ ಅದೇ ಸಂದರ್ಭದಲ್ಲಿ ಆಶಾ ಭೋಂಸ್ಲೆ ಸಹಾಯಕ್ಕೆ ಸಚಿವೆ ಸ್ಮೃತಿ ಇರಾನಿ ಧಾವಿಸಿದ್ದಾರೆ ಹಾಗೂ ಅವರನ್ನು ಸುರಕ್ಷಿತವಾಗಿ ಮನೆ ತಲುಪುವಂತೆ ನೋಡಿಕೊಂಡಿದ್ದಾರೆ.

ಸುರಕ್ಷಿತವಾಗಿ ಮನೆ ಸೇರಿದ ಆಶಾ ಭೋಂಸ್ಲೆ ಈ ಕುರಿತಾಗಿ ಟ್ವೀಟ್ ಮಾಡಿದ್ದು, 'ಪ್ರಧಾನ ಮಂತ್ರಿಯ ಪ್ರಮಾಣ ವಚನದ ಬಳಿಕ ಜನಜಂಗುಳಿಯ ನಡುವೆ ನಾನು ಕಳೆದು ಹೋಗಿದ್ದೆ. ಯಾರೂ ನನ್ನ ಸಹಾಯಕ್ಕೆ ಬರಲಿಲ್ಲ. ಆದರೆ ಸ್ಮೃತಿ ಇರಾನಿ ನನ್ನ ಸಹಾಯಕ್ಕೆ ಧಾವಿಸಿ, ನಾನು ಸುರಕ್ಷಿತವಾಗಿ ಮನೆಗೆ ತಲುಪಿದ್ದೇನಾ ಎಂಬುವುದನ್ನು ಖಾತ್ರಿಪಡಿಸಿಕೊಂಡಿದ್ದಾರೆ' ಎಂದಿದ್ದಾರೆ.