ಇಂಧನ ಇಲಾಖೆಯಲ್ಲಿ ನಡೆದಿರುವ ಅವ್ಯವಹಾರದಿಂದ ರಾಜ್ಯದ ಬೊಕ್ಕಸಕ್ಕೆ ಉಂಟಾದ ನಷ್ಟ, ಅಂತಹ ಅಕ್ರಮಗಳಿಗೆ ಜವಾಬ್ದಾರರು ಯಾರು ಎಂಬ ಅಂಶಗಳ ಬಗ್ಗೆ ಸಮಗ್ರ ತನಿಖೆ ನಡೆಸಿ ಸೂಕ್ತ ಶಿಫಾರಸುಗಳೊಂದಿಗೆ ವರದಿಯನ್ನು ಸಲ್ಲಿಸಲು 2014ರ ಸೆ.9ರಂದು ಸದನ ಸಮಿತಿ ರಚಿಸಲಾಗಿತ್ತು.
ಎರಡು ವರ್ಷಗಳು ಕಳೆದರೂ ಸಮಿತಿಯ ಸದಸ್ಯರಿಗೆ ಯಾವುದೇ ಮಾಹಿತಿ ದೊರೆತಿಲ್ಲ. ಅಲ್ಲದೇ, ವಿಧಾನಮಂಡಲದ ಸದನ ಸಮಿತಿಯ ಕಾರ್ಯದರ್ಶಿಗಳು ಕರಡು ವರದಿ ತಯಾರು ಮಾಡಿ ಅಧ್ಯಕ್ಷರಿಗೆ ನೀಡಿ ವರ್ಷವಾದರೂ ಸಮಿತಿ ವರದಿಯನ್ನು ಸಲ್ಲಿಸಿಲ್ಲ ಎಂದು ಪತ್ರದಲ್ಲಿ ಆರೋಪಿಸಿದ್ದಾರೆ. ಸದನ ಸಮಿತಿಯ ಅಧ್ಯಕ್ಷರು ಇಲಾಖೆಯ ಸಚಿವರೇ ಆಗಿರುವುದು ಸಮಿತಿಯ ನಿಯಮಕ್ಕೆ ವಿರುದ್ಧವಾಗಿದೆ. ಭ್ರಷ್ಟಾಚಾರ ಅವರ ಅವಧಿಯಲ್ಲಿಯೂ ಆಗಿರುವುದರಿಂದ ಅಧ್ಯಕ್ಷರಾಗುವುದು ನಿಯಮ ಬಾಹಿರವಾಗಿರುತ್ತದೆ. ಸರ್ಕಾರ ತನ್ನ ಅಕ್ರಮಗಳು ಬಹಿರಂಗ ಗೊಳ್ಳದಂತೆ ಸಂರಕ್ಷಿಸುವ ನಿಟ್ಟಿನಲ್ಲಿ ಇಲಾಖೆ ಸಚಿವರನ್ನೇ ಸದನ ಸಮಿತಿಯ ಅಧ್ಯಕ್ಷರನ್ನಾಗಿ ನೇಮಕ ಮಾಡಿರಬಹುದೆಂಬ ಅಭಿಪ್ರಾಯ ಸಾರ್ವಜನಿಕರಲ್ಲಿ ಮೂಡುತ್ತಿದೆ. ಸದನ ಸಮಿತಿ ತನಿಖೆ ಪ್ರಾರಂಭಿಸುವ ಮುನ್ನವೇ ಏನೂ ಆಗಿಲ್ಲವೆಂಬ ಸಚಿವರ ಅಭಿಪ್ರಾಯ ಸದನ ಸಮಿತಿ ರಚನೆ ಮಾಡಿದ ಸದನಕ್ಕೆ ಮತ್ತು ರಾಜ್ಯದ ಜನತೆಗೆ ಮಾಡಿದ ಅವಮಾನ ಎಂದಿದ್ದಾರೆ.
