ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹಾಗೂ ಎಚ್.ಡಿ ದೇವೇಗೌಡ ಅವರು ಅವರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾರನ್ನು ಭೇಟಿಯಾಗಿದ್ದರೆಂದು ಮಾಜಿ ಸಿಎಂ ಸಿದ್ದರಾಮಯ್ಯ ಮಾಡಿದ್ದ ಆರೋಪ ನಿಜ ಎಂದು ಬಿಜೆಪಿ ಮುಖಂಡ ಎಂ.ರುದ್ರೇಶ್‌ ಹೇಳಿದ್ದಾರೆ.

ರಾಮನಗರ : ಕಳೆದ ವಿಧಾನಸಭಾ ಸಾರ್ವತ್ರಿಕ ಚುನಾವಣೆ ಪೂರ್ವದಲ್ಲಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾರನ್ನು ಭೇಟಿಯಾಗಿದ್ದರೆಂದು ಮಾಜಿ ಸಿಎಂ ಸಿದ್ದರಾಮಯ್ಯ ಮಾಡಿದ್ದ ಆರೋಪ ನಿಜ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಎಂ.ರುದ್ರೇಶ್‌ ಹೇಳಿದ್ದಾರೆ.

ನಗರದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಕುಮಾರಸ್ವಾಮಿ ಮಾತ್ರವಲ್ಲದೆ ಮಾಜಿ ಪ್ರಧಾನಿ ದೇವೇಗೌಡರು ಸಹ ವಿಧಾನಸಭೆ ಚುನಾವಣಾ ಫಲಿತಾಂಶದ ನಂತರ ಬಿಜೆಪಿ ಮತ್ತು ಜೆಡಿಎಸ್‌ ಹೊಂದಾಣಿಕೆ ಕುರಿತು ಪ್ರಧಾನಿ ಮೋದಿ ಜತೆ ಚರ್ಚೆ ನಡೆಸಿದ್ದರು ಎಂದು ತಿಳಿಸಿದರು.

ಇದೇ ಕಾರಣದಿಂದ ಮೋದಿ, ಅಮಿತ್‌ ಶಾ, ಯಡಿಯೂರಪ್ಪ ಬಗ್ಗೆ ಮೃದುಧೋರಣೆ ತೋರಿದರು. ಸಿದ್ದರಾಮಯ್ಯರನ್ನು ಗುರಿಯಾಗಿಸಿರಿಕೊಂಡು ಚುನಾವಣೆ ಎದುರಿಸಿ, ಹಳೇ ಮೈಸೂರು ಭಾಗದಲ್ಲಿ ಬಿಜೆಪಿಯನ್ನು ಟೀಕೆ ಮಾಡದೆ ಓಲೈಸಿಕೊಂಡು ಹೆಚ್ಚಿನ ಸ್ಥಾನ ಜಯಿಸಿದರು. ಆದರೆ, ಚುನಾವಣೆ ಬಳಿಕ ಕೊಟ್ಟಮಾತು ಮುರಿದರು ಎಂದು ದೂರಿದರು.

ಇನ್ನೆರಡು ದಿನದಲ್ಲಿ ಅಭ್ಯರ್ಥಿ ಘೋಷಣೆ:

ರಾಮನಗರ ಕ್ಷೇತ್ರ ಉಪಚುನಾವಣೆಗೆ ಬಿಜೆಪಿ ಅಭ್ಯರ್ಥಿ ಯಾರೆಂಬುದನ್ನು ಇನ್ನೆರೆಡು ದಿನಗಳಲ್ಲಿ ಪಕ್ಷದ ವರಿಷ್ಠರು ಘೋಷಣೆ ಮಾಡಲಿದ್ದಾರೆ. ಸಿ.ಪಿ.ಯೋಗೇಶ್ವರ್‌ ಅಥವಾ ನನ್ನನ್ನು ಕಣಕ್ಕೆ ಇಳಿಯುವಂತೆ ವರಿಷ್ಠರು ಸೂಚಿಸಿದ್ದು, ಬುಧವಾರ ಅಥವಾ ಗುರುವಾರ ಅಭ್ಯರ್ಥಿ ಯಾರೆಂಬುದು ಸ್ಪಷ್ಟವಾಗಲಿದೆ ಎಂದರು.