ಒಂದು ರಾಷ್ಟ್ರ, ಒಂದು ಕಾನೂನು, ಒಂದು ಧರ್ಮ ಮಾಡಲು ಅಧಿಕಾರ ಕೊಟ್ಟವರು ಯಾರು? ಡಾ.ಬಿ.ಆರ್.ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಹೀಗೇ ಹೇಳಿದ್ದಾರೆಯೇ?

ಬೆಂಗಳೂರು(ಜು.29): ಒಂದೇ ರಾಷ್ಟ್ರ, ಒಂದು ಕಾನೂನು, ಒಂದು ಧರ್ಮ ಮಾಡಲು ಮತ್ತು ಗೋಹತ್ಯೆ ನಿಷೇಧ ಮೂಲಕ ಆಹಾರ ಪದ್ಧತಿ ಪ್ರಶ್ನಿಸಲು ಅಧಿಕಾರ ಕೊಟ್ಟವರು ಯಾರು? ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಪರೋಕ್ಷವಾಗಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಪ್ರಶ್ನಿಸಿದ್ದಾರೆ.

ಗಾಂಧಿನಗರ ವಿಧಾನಸಭಾಕ್ಷೇತ್ರದಲ್ಲಿ ಶನಿವಾರ ನಡೆದ ಜೆಡಿಎಸ್ ಕಾರ್ಯಕರ್ತರ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಸಂವಿಧಾನದಲ್ಲಿ ಎಲ್ಲಾ ಧರ್ಮಗಳಿಗೂ ಸಮಾನ ಅವಕಾಶ ನೀಡಲಾಗಿದೆ. ಹೀಗಿರುವಾಗ ಒಂದು ರಾಷ್ಟ್ರ, ಒಂದು ಕಾನೂನು, ಒಂದು ಧರ್ಮ ಮಾಡಲು ಅಧಿಕಾರ ಕೊಟ್ಟವರು ಯಾರು? ಡಾ.ಬಿ.ಆರ್.ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಹೀಗೇ ಹೇಳಿದ್ದಾರೆಯೇ? ಸಂವಿಧಾನ ಪ್ರಕಾರ ಪ್ರತಿಜ್ಞೆ ಸ್ವೀಕರಿಸಿದ ಪ್ರಧಾನಿಗಳು ಈ ರೀತಿ ನಡೆದುಕೊಳ್ಳಲು ಸಾಧ್ಯವೇ ? ಎಂದು ತರಾಟೆಗೆ ತೆಗೆದುಕೊಂಡರು.

ಬಿಹಾರ ರಾಜಕೀಯ-ಅಸಮಾಧಾನ

ಬಿಹಾರದಲ್ಲಿ ನಡೆದ ರಾಜಕೀಯ ಬೆಳವಣಿಗೆ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ದೇವೇಗೌಡರು, ಚುನಾವಣೆ ವೇಳೆ ಆರ್‌ಜೆಡಿಯ ಲಾಲೂ ಪ್ರಸಾದ್ ಯಾದವ್ ಅವರನ್ನು ನಿತೀಶ್ ಕುಮಾರ್ ತಬ್ಬಿಕೊಂಡಿದ್ದರು. ಜೆಡಿಯು-ಆರ್‌ಜೆಡಿ ಸಮ್ಮಿಶ್ರ ಸರ್ಕಾರ ರಚನೆ ಮಾಡಲಾಗಿತ್ತು. ಆದರೆ, ರಾಜಕೀಯ ಬೆಳವಣಿಗೆಯಲ್ಲಿ ೧೫ ಗಂಟೆಯೊಳಗೆ ಜೆಡಿಯು-ಬಿಜೆಪಿ ಸರ್ಕಾರ ರಚನೆ ಮಾಡಿರುವುದು ಕುತಂತ್ರವಲ್ಲವೇ ಎಂದು ಖಾರವಾಗಿ ಪ್ರಶ್ನಿಸಿದರು. ಏಕಾಏಕಿ ಬಿಜೆಪಿ ಕಡೆ ಒಲವು ವ್ಯಕ್ತಪಡಿಸಿರುವುದು ಆಶ್ಚರ್ಯದ ಸಂಗತಿಯಾಗಿದೆ ಎಂದು ನಿತೀಶ್ ಕುಮಾರ್ ನಡೆಯ ಬಗ್ಗೆ ಬೇಸರ ವ್ಯಕ್ತಪಡಿಸಿದರು.

ರಾಜ್ಯದ ಹಿತರಕ್ಷಣೆ ಕಾಪಾಡಲು ಪ್ರಬಲವಾದ ಪ್ರಾದೇಶಿಕ ಪಕ್ಷ ಅಗತ್ಯ ಇದೆ. ಹೀಗಾಗಿ ಮುಂದಿನ ಚುನಾವಣೆಯಲ್ಲಿ ಜೆಡಿಎಸ್‌ಗೆ ಬೆಂಬಲ ನೀಡಬೇಕು. ಜೆಡಿಎಸ್‌ನ್ನು ಅಧಿಕಾರಕ್ಕೆ ತರಲು ಕಾರ್ಯಕರ್ತರು ಹಗಲಿರುಳು ಶ್ರಮಿಸಬೇಕು ಎಂದು ಕರೆಕೊಟ್ಟರು.

ಗಾಂಧಿನಗರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ವಿ.ನಾರಾಯಣಸ್ವಾಮಿ ಅವರು ಚುನಾವಣಾ ಕಣಕ್ಕೆ ಇಳಿಯಲಿದ್ದಾರೆ ಎಂದು ದೇವೇಗೌಡರು ಇದೇ ಸಂದರ್ಭದಲ್ಲಿ ಘೋಷಿಸಿದರು.

(ಕನ್ನಡಪ್ರಭ ವಾರ್ತೆ)