ಹೆಚ್.ಡಿ. ರೇವಣ್ಣಗೆ ಈ ಬಾರಿ ಎದುರಾಳಿ ಯಾರು ಗೊತ್ತಾ ? ಗೌಡರು ಇದೇ ಕ್ಷೇತ್ರದಲ್ಲಿ ದಾಖಲೆ ನಿರ್ಮಿಸಿದ್ದರು

news | Sunday, March 11th, 2018
Suvarna Web Desk
Highlights

 ಹಳ್ಳಿ ಮೈಸೂರಿನಲ್ಲಿ ಕುರುಬ ಮತ್ತು ವೀರಶೈವ ಮತದಾರರು ಅಧಿಕವಾಗಿದ್ದಾರೆ. ಬಹಳ ಹಿಂದಿನಿಂದಲೂ ಹೊಳೆನರಸೀಪುರದಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಎಂಬುದಕ್ಕಿಂತ ಹೆಚ್ಚಾಗಿ ಮಾಜಿ ಪ್ರಧಾನಿ ದೇವೇಗೌಡರ ಕುಟುಂಬ ವರ್ಸಸ್ ಕಾಂಗ್ರೆಸ್ ನಡುವೆ ಜಿದ್ದಾಜಿದ್ದಿ ನಡೆದುಕೊಂಡು ಬಂದಿದೆ.

ಹಾಸನ(ಮಾ.11): ಜೆಡಿಎಸ್‌ನ ತೆರೆಮರೆಯ ಹೈಕಮಾಂಡ್ ಎಂದು ಕರೆಸಿಕೊಳ್ಳುವ ಮಾಜಿ ಸಚಿವ ಎಚ್.ಡಿ. ರೇವಣ್ಣ ಈ ಬಾರಿಯೂ ಹಾಸನ ಜಿಲ್ಲೆ ಹೊಳೆನರಸೀಪುರ ಕ್ಷೇತ್ರದಿಂದಲೇ ಅಖಾಡಕ್ಕೆ ಇಳಿಯುತ್ತಿದ್ದಾರೆ. ಇದು ಅವರಿಗೆ ೬ನೇ ಚುನಾವಣೆ.

ನಾಲ್ಕು ಬಾರಿ ಗೆದ್ದು, ಒಂದು ಬಾರಿ ಪರಾಭವಗೊಂಡಿರುವ ರೇವಣ್ಣ ಸ್ಪರ್ಧೆಯಿಂದಾಗಿ ಈ ಕ್ಷೇತ್ರ ರಾಜ್ಯದ ಗಮನ ಸೆಳೆಯುತ್ತಿದೆ. 2008ರಲ್ಲಿ ಕ್ಷೇತ್ರ ಮರು ವಿಂಗಡಣೆಯಾದಾಗ ಹಾಸನ ತಾಲೂಕಿನ ಶಾಂತಿಗ್ರಾಮ, ದುದ್ದ ಹೋಬಳಿಗಳು ಹೊಳೆನರಸೀಪುರ ಕ್ಷೇತ್ರಕ್ಕೆ ಸೇರ್ಪಡೆ ಯಾಗಿ, ಈ ಕ್ಷೇತ್ರದಲ್ಲಿದ್ದ ಹಳ್ಳಿ ಮೈಸೂರು ಹೋಬಳಿ ಅರಕಲಗೂಡು ಕ್ಷೇತ್ರಕ್ಕೆ ಸೇರಿತು. ಇದರಿಂದ ಒಂದು ರೀತಿಯಲ್ಲಿ ರೇವಣ್ಣನವರಿಗೆ ರೊಟ್ಟಿ ಜಾರಿ ತುಪ್ಪಕ್ಕೆ ಬಿದ್ದಂತೆ ಆಯಿತು. ಏಕೆಂದರೆ, ಹೊಳೆನರಸೀಪುರಕ್ಕೆ ಸೇರ್ಪಡೆಯಾದ ಎರಡೂ ಹೋಬಳಿಗಳಲ್ಲೂ ಒಕ್ಕಲಿಗ ಮತದಾರರೇ ಹೆಚ್ಚು.

 ಹಳ್ಳಿ ಮೈಸೂರಿನಲ್ಲಿ ಕುರುಬ ಮತ್ತು ವೀರಶೈವ ಮತದಾರರು ಅಧಿಕವಾಗಿದ್ದಾರೆ. ಬಹಳ ಹಿಂದಿನಿಂದಲೂ ಹೊಳೆನರಸೀಪುರದಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಎಂಬುದಕ್ಕಿಂತ ಹೆಚ್ಚಾಗಿ ಮಾಜಿ ಪ್ರಧಾನಿ ದೇವೇಗೌಡರ ಕುಟುಂಬ ವರ್ಸಸ್ ಕಾಂಗ್ರೆಸ್ ನಡುವೆ ಜಿದ್ದಾಜಿದ್ದಿ ನಡೆದುಕೊಂಡು ಬಂದಿದೆ. ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಾಗೂರು ಮಂಜೇಗೌಡರಿಗೆ ಟಿಕೆಟ್ ಖಚಿತ ಎಂದು ಹೇಳಲಾಗುತ್ತಿದೆ. ಇದರ ನಡುವೆಯೇ ಮಾಜಿ ಸಚಿವ ದಿವಂಗತ ಜಿ.ಪುಟ್ಟಸ್ವಾಮಿಗೌಡ ಸೊಸೆ ಎಸ್.ಜಿ. ಅನುಪಮ ಅವರು ಮತ್ತೆ ಟಿಕೆಟ್ ಪಡೆಯಲು ಯತ್ನಿಸುತ್ತಿದ್ದಾರೆ. ಅವರಿಗೆ ಅವರ ಮಾವ ಜಿ. ಪುಟ್ಟಸ್ವಾಮಿಗೌಡರ ನಾಮಬಲವೇ ಶ್ರೀರಕ್ಷೆ.

2008 ಮತು 2013ರ ಚುನಾವಣೆಯಲ್ಲಿ ರೇವಣ್ಣನವರ ವಿರುದ್ಧ ಪರಾಜಿತರಾಗಿರುವ ಅನುಪಮ ಅವರಿಗೆ ಸದ್ಯದ ಪರಿಸ್ಥಿತಿಯಲ್ಲಿ ಟಿಕೆಟ್ ಸಿಗುವ ಸಾಧ್ಯತೆ ಕಡಿಮೆ ಎಂಬುದು ಕಾಂಗ್ರೆಸ್ ವಲಯದಲ್ಲೇ ಹರಿದಾಡುತ್ತಿರುವ ಮಾತು. ಹೆಚ್ಚೂಕಡಿಮೆ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಹುರಿಯಾಳಾಗಿ ಬಾಗೂರು ಮಂಜೇಗೌಡರೇ ಅಭ್ಯರ್ಥಿಯಾಗಿ ಪ್ರಬಲ ರೇವಣ್ಣನವರಿಗೆ ಪೈಪೋಟಿ ನೀಡುವ ಸಾಧ್ಯತೆಗಳು ಹೆಚ್ಚಿವೆ. ಸರ್ಕಾರಿ ನೌಕರರ ಸಂಘದ ಚುನಾವಣೆಯಲ್ಲಿ ಮಾತ್ರ ಸ್ಪರ್ಧಿಸಿ ಅನುಭವ ಹೊಂದಿರುವ ಮಂಜೇಗೌಡರು ಜನ ರಿಂದ ನಡೆಯುವ ಚುನಾವಣೆಯನ್ನು ಪ್ರಥಮ ಬಾರಿಗೆ ಯಾವ ರೀತಿ? ಹೇಗೆ? ಎದುರಿಸುತ್ತಾರೆ ಎಂಬುದರ ಮೇಲೆ ಬಲಾಬಲ ಪರೀಕ್ಷೆ ನಡೆಯಲಿದೆ. ನೈತಿಕತೆ ಮತ್ತು ಅಭಿವೃದ್ಧಿಯ ಮಾನದಂಡಗಳಿಗಿಂತ ಆರ್ಥಿಕ ಮಾನದಂಡವೇ ಚುನಾವಣೆಯಲ್ಲಿ ಹೆಚ್ಚು ಪ್ರಸ್ತುತವಾದರೇ ‘ಬಿಗ್ ಫೈಟ್’ ನಡೆಯುತ್ತದೆ ಎಂಬುದನ್ನು ತಳ್ಳಿ ಹಾಕುವಂತಿಲ್ಲ. ಹಲವಾರು ಚುನಾವಣೆಗಳನ್ನು ಎದುರಿಸಿರುವ ರೇವಣ್ಣ, ಚುನಾವಣೆಯ ಪಟ್ಟು, ವರಸೆಗಳನ್ನು ಕರಗತ ಮಾಡಿ ಕೊಂಡಿದ್ದಾರೆ. ರಾಜ್ಯದಲ್ಲಿ 10 ವರ್ಷಗಳಿಂದ ಜೆಡಿಎಸ್

ಅಧಿಕಾರದಲ್ಲಿ ಇಲ್ಲದಿದ್ದರೂ, ಕ್ಷೇತ್ರವನ್ನು ಅಭಿವೃದ್ಧಿ ದೃಷ್ಟಿಯಿಂದ ರೇವಣ್ಣ ಕಡೆಗಣಿಸಿಲ್ಲ. ಈ ಕ್ಷೇತ್ರ ಒಂದು ರೀತಿ ಜೆಡಿಎಸ್ ಭದ್ರಕೋಟೆಯಂತಿದೆ. ಈ ಚುನಾವಣೆಯಲ್ಲೂ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಪ್ರಚಾರಕ್ಕೆ ಇಳಿದು ತಮ್ಮ ಪುತ್ರನ ಗೆಲುವಿಗೆ ಸಹಕರಿಸಬಹುದು. ಪುತ್ರ ಪ್ರಜ್ವಲ್ ರೇವಣ್ಣ ಎಲ್ಲಿಯೂ ಸ್ಪರ್ಧಿಸದಿದ್ದರೇ ರೇವಣ್ಣನವರಿಗೆ ಪ್ರಚಾರದ ಭಾರ ಕೊಂಚ ತಗ್ಗುತ್ತದೆ.

ಹಿಂದೆ ನಡೆದ ಐದು ಚುನಾವಣೆಗಳಲ್ಲೂ ಮಾಜಿ ಸಚಿವ ದಿವಂಗತ ಜಿ. ಪುಟ್ಟಸ್ವಾಮಿಗೌಡ ಮತ್ತು ಅವರ ಸೊಸೆ ಅನುಪಮ ಅವರೇ ರೇವಣ್ಣನವರಿಗೆ ಎದುರಾಳಿಗಳಾಗಿದ್ದರು. ಈಗ ಕ್ಷೇತ್ರಕ್ಕೆ ಹೊಸ ಮುಖವಾದ, ಆರ್ಥಿಕವಾಗಿಯೂ ಪ್ರಬಲರಾಗಿರುವ ಬಾಗೂರು ಮಂಜೇಗೌಡರು ಎದುರಾಳಿ ಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಚುನಾವಣೆ ಬಿರುಸಿನಿಂದಲೇ ನಡೆಯುತ್ತದೆ ಎಂಬ ಚರ್ಚೆ ನಡೆಯುತ್ತಿದೆ. 2004, 2008, 2013ರ ಚುನಾವಣೆಗಳಲ್ಲಿ ಸತತವಾಗಿ ಚುನಾಯಿತರಾಗಿ ಹ್ಯಾಟ್ರಿಕ್ ಗೆಲುವು ಸಾಧಿಸಿದ್ದ ರೇವಣ್ಣನವರು, ಈ ಹಿಂದೆ 1994ರಲ್ಲಿ ಗೆದ್ದಿದ್ದರು. 1999ರಲ್ಲಿ ಸೋಲಿನ ಕಹಿಯನ್ನು ಅನುಭವಿಸಿದ್ದರು.

ಸತತ 6 ಸಲ ಜಯಭೇರಿ ಬಾರಿಸಿದ್ದ  ದೇವೇಗೌಡ

ರೇವಣ್ಣ ಅವರ ತಂದೆಯೂ ಆಗಿರುವ ಮಾಜಿ ಪ್ರಧಾನಿ,ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡರು 1962ರಿಂದ 1985ರವರೆಗೆ ಸತತ ಆರು ಬಾರಿ ಹೊಳೆನರಸೀಪುರ ಕ್ಷೇತ್ರದಿಂದ ಆರಿಸಿಬಂದಿದ್ದರು. 1985ರ ಚುನಾವಣೆಯಲ್ಲಿ ಅವರು ಪರಾಭವಗೊಂಡಿದ್ದರು. 1994ರಲ್ಲಿ ರಾಮನಗರದಿಂದ ದೇವೇಗೌಡ ಅವರು ಸ್ಪರ್ಧೆ ಮಾಡಿದ ಹಿನ್ನೆಲೆಯಲ್ಲಿ ಹೊಳೆನರಸೀಪುರದಿಂದ ರೇವಣ್ಣ ಕಣಕ್ಕಿಳಿದು, ಮೊದಲ ಪ್ರಯತ್ನದಲ್ಲೇ ಗೆದ್ದಿದ್ದರು. ಅಂದಿನಿಂದ ಈ ಕ್ಷೇತ್ರ ರೇವಣ್ಣ ಅವರ ಸ್ವಕ್ಷೇತ್ರವಾಗಿದೆ.

- ದಯಾಶಂಕರ ಮೈಲಿ

Comments 0
Add Comment

  Related Posts

  Actor Vajramuni relative Kidnap Story

  video | Thursday, April 12th, 2018

  CM Two Constituencies Story

  video | Thursday, April 12th, 2018

  EX MLA Honey trap Story

  video | Thursday, April 12th, 2018

  Actor Vajramuni relative Kidnap Story

  video | Thursday, April 12th, 2018
  Suvarna Web Desk