ಮುಂದಿನ ವರ್ಷ ಲೋಕಸಭೆಗೆ ನಡೆಯಲಿರುವ ಸಾರ್ವತ್ರಿಕ ಚುನಾವಣೆಯಲ್ಲಿ ಶಿವರಾಮೇಗೌಡರಿಗೆ ಟಿಕೆಟ್‌ ಕೊಡುವ ಯಾವುದೇ ಸಾಧ್ಯತೆ ಇಲ್ಲ ಎಂಬುದನ್ನು ಸ್ವತಃ ಲೋಕೋಪಯೋಗಿ ಸಚಿವ ಎಚ್‌.ಡಿ.ರೇವಣ್ಣ ಅವರೇ ಪರೋಕ್ಷವಾಗಿ ತಿಳಿಸಿದ್ದಾರೆ.

ಮಂಡ್ಯ/ಕೆ.ಆರ್‌.ಪೇಟೆ : ಮಂಡ್ಯ ಲೋಕಸಭೆ ಉಪ ಚುನಾವಣೆಯಲ್ಲಿ ಜೆಡಿಎಸ್‌ ಅಭ್ಯರ್ಥಿ ಶಿವರಾಮೇಗೌಡರಿಗೆ ಕೇವಲ ನಾಲ್ಕೂವರೆ ತಿಂಗಳಿಗಷ್ಟೇ ಟಿಕೆಟ್‌ ನೀಡಲಾಗಿದೆ. ಮುಂದಿನ ವರ್ಷ ಲೋಕಸಭೆಗೆ ನಡೆಯಲಿರುವ ಸಾರ್ವತ್ರಿಕ ಚುನಾವಣೆಯಲ್ಲಿ ಶಿವರಾಮೇಗೌಡರಿಗೆ ಟಿಕೆಟ್‌ ಕೊಡುವ ಯಾವುದೇ ಸಾಧ್ಯತೆ ಇಲ್ಲ ಎಂಬುದನ್ನು ಸ್ವತಃ ಲೋಕೋಪಯೋಗಿ ಸಚಿವ ಎಚ್‌.ಡಿ.ರೇವಣ್ಣ ಅವರೇ ಪರೋಕ್ಷವಾಗಿ ತಿಳಿಸಿದ್ದಾರೆ.

ಕೆ.ಆರ್‌.ಪೇಟೆಯಲ್ಲಿ ಶನಿವಾರ ಜೆಡಿಎಸ್‌-ಕಾಂಗ್ರೆಸ್‌ ಮೈತ್ರಿ ಅಭ್ಯರ್ಥಿ ಶಿವರಾಮೇಗೌಡರ ಪರ ಚುನಾವಣಾ ಪ್ರಚಾರ ಮಾಡಿದ ರೇವಣ್ಣ ಈ ವಿಚಾರ ಸ್ಪಷ್ಟಪಡಿಸಿದ್ದಾರೆ.

ಶಿವರಾಮೇಗೌಡರನ್ನು ಕಂಡರೆ ನನಗೆ ತುಂಬಾ ಹೆದರಿಕೆ. ಶಿವರಾಮೇಗೌಡರು ನಾಗಮಂಗಲದಿಂದ ಬಂದು ಬೆಂಗಳೂರನ್ನೇ ಆವರಿಸಿದ್ದಾರೆ. ಸಂಸದ ಆದ ಮೇಲೆ ಉತ್ತರ ಪ್ರದೇಶವನ್ನೇ ಆವರಿಸುವುದರಲ್ಲಿ ಯಾವುದೇ ಅನುಮಾನ ಇಲ್ಲ ಎಂದು ಹೇಳಿದರು.

ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರ ಆಶೀರ್ವಾದ ಶಿವರಾಮೇಗೌಡರ ಮೇಲೆ ಜಾಸ್ತಿಯೇ ಇದೆ. ಹೀಗಾಗಿ ಕೇವಲ ನಾಲ್ಕೂವರೆ ತಿಂಗಳ ಅವಧಿಗೆ ಎಂದು ಶಿವರಾಮೇಗೌಡರಿಗೆ ಈಗ ಟಿಕೆಟ್‌ ಕೊಡಲಾಗಿದೆ. ಇದು ದೇವೇಗೌಡರೇ ಮಾಡಿದ ತೀರ್ಮಾನ ಎಂದರು. ಈ ಮೂಲಕ ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಶಿವರಾಮೇಗೌಡರಿಗೆ ಟಿಕೆಚ್‌ ಇಲ್ಲ ಎಂಬುದನ್ನು ರೇವಣ್ಣ ಪರೋಕ್ಷವಾಗಿ ಪ್ರಚಾರ ವೇದಿಕೆಯಲ್ಲೇ ಸ್ಪಷ್ಟಪಡಿಸಿದರು.