ಬೆಂಗಳೂರು, (ಮೇ.22): ರೋಷನ್ ಬೇಗ್ ಹೇಳಿದ್ದರಲ್ಲಿ ತಪ್ಪೇನಿದೆ. ಸಿದ್ದರಾಮಯ್ಯ ಒಬ್ಬ ದುರಂಹಕಾರಿ. ರೋಷನ್ ಬೇಗ್ ಹೇಳಿದ್ದು ನಿಜ. ಸತ್ಯವನ್ನು ಬಹಳ ದಿನ ಮುಚ್ಚಿಡಲು ಸಾಧ್ಯವಿಲ್ಲ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಅವರು ಕಾಂಗ್ರೆಸ್ ಶಾಸಕ ರೋಷನ್ ಬೇಗ್ ಪರ ಬ್ಯಾಟಿಂಗ್ ಮಾಡಿದ್ದಾರೆ.

ಇಂದು (ಬುಧವಾರ) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಚ್.ಡಿ.ಕುಮಾರಸ್ವಾಮಿ ನಾಳೆ (ಗುರುವಾರ) ಸಂಜೆಯವರೆಗೆ ಮಾತ್ರ ಮುಖ್ಯಮಂತ್ರಿಯಾಗಿರುತ್ತಾರೆ. ಗರಿಷ್ಠ ಎಂದರೆ ನಾಡಿದ್ದು (ಶುಕ್ರವಾರ) ಬೆಳಗ್ಗೆವರಗೆ ಮಾತ್ರ ಅವರು ಸಿಎಂ ಆಗಿರುತ್ತಾರೆ. ಅವರೇ ರಾಜೀನಾಮೆ ನೀಡಲಿದ್ದಾರೆ ಎಂದು ಭವಿಷ್ಯ ನುಡಿದರು.

ರೋಷನ್ ಬೇಗ್ ಅವರನ್ನು ಬಿಜೆಪಿಗೆ ಆಹ್ವಾನಿಸಿದ ಕೇಂದ್ರ ಸಚಿವ

ಶೇಕಡಾ ನೂರಕ್ಕೆ ನೂರರಷ್ಟು ಕುಮಾರಸ್ವಾಮಿ ಅಧಿಕಾರ ಕಳೆದುಕೊಳ್ಳುತ್ತಾರೆ. ಹೊಸ ಸರ್ಕಾರ ರಚನೆಗೆ ನಾವು ಸಿದ್ಧತೆಗಳನ್ನು ಮಾಡಿಕೊಳ್ಳಬೇಕಾಗಿದೆ ವಿಶ್ವಾಸ ವ್ಯಕ್ತಪಡಿಸಿದರು.

ರಾಜ್ಯ ಬಿಜೆಪಿ ಕಳೆದೊಂದು ವರ್ಷದಿಂದ ಮೈತ್ರಿ ಸರ್ಕಾರ ಇರುವುದಿಲ್ಲ ಅಂತಾನೇ ಹೇಳುತ್ತಾ ಬಂದಿದೆ. ಆದ್ರೆ ಅದು ಮಾತಾಗಿಯೇ ಉಳಿದಿವೆ. ಇದೀಗ ಬಿಜೆಪಿ ರಾಜ್ಯ ನಾಯಕರು ಲೋಕಸಭಾ ಫಲಿತಾಂಶದ ಮೇಲೆ ಅವಲಂಬಿತರಾಗಿದ್ದು, ರಿಸಲ್ಟ್ ಬಳಿಕ  ಬಿಜೆಪಿ ಸರ್ಕಾರ ರಚೆನೆ ಮಾಡಿಯೇ ಸಿದ್ಧ ಎಂದು ಘಂಟಾಘೋಷವಾಗಿ ಹೇಳುತ್ತಿದ್ದಾರೆ.

ಹಲವು ಬಾರಿ ಮೈತ್ರಿ ಸರ್ಕಾರವನ್ನು ಕೆಡುವಲು ಕಾಂಗ್ರೆಸ್ ಶಾಸಕರಿಂದಲೇ ಬಿಜೆಪಿ ನಾಯಕರು ಪ್ಲಾನ್ ರೂಪಿಸಿದ್ದರು. ಆದ್ರೆ ಆ ಪ್ಲಾನ್‌ಗಳೆಲ್ಲ ಉಲ್ಟಾಪಲ್ಟಾ ಆಗಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ.