ಬೆಂಗಳೂರು :  ಮುಖ್ಯಮಂತ್ರಿಯಾಗಿ ಎರಡನೇ ವರ್ಷಕ್ಕೆ ಕಾಲಿಟ್ಟಿರುವ ಎಚ್‌.ಡಿ.ಕುಮಾರಸ್ವಾಮಿ ಅವರು ತಮ್ಮ ಕಾರ್ಯವೈಖರಿ ಬದಲಿಸಿಕೊಳ್ಳುತ್ತಿದ್ದು, ಸಾಕಷ್ಟು ಟೀಕೆಗೊಳಗಾಗಿದ್ದ ತಾಜ್‌ ವೆಸ್ಟೆಂಡ್‌ ಹೋಟೆಲ್‌ ವಾಸವನ್ನು ಹಂತ ಹಂತವಾಗಿ ಕಡಿಮೆಗೊಳಿಸಿ ತಮ್ಮ ಜೆ.ಪಿ.ನಗರದ ನಿವಾಸದಲ್ಲೇ ಹೆಚ್ಚು ವಾಸ್ತವ್ಯ ಹೂಡಲು ಮುಂದಾಗಿದ್ದಾರೆ.

ಈಗಾಗಲೇ ಕಳೆದ ಹಲವು ದಿನಗಳಿಂದ ಜೆ.ಪಿ.ನಗರದ ಖಾಸಗಿ ನಿವಾಸದಲ್ಲೇ ವಾಸ್ತವ್ಯ ನಡೆಸುತ್ತಿರುವ ಕುಮಾರಸ್ವಾಮಿ ಅವರು ಬೆಳಗಿನ ವಾಕಿಂಗ್‌ಗಾಗಿ ತಾಜ್‌ ವೆಸ್ಟೆಂಡ್‌ ಹೋಟೆಲ್‌ಗೆ ಆಗಮಿಸುತ್ತಿದ್ದರು. ಮುಂದಿನ ದಿನಗಳಲ್ಲಿ ಅದನ್ನೂ ನಿಲ್ಲಿಸುವ ಸಾಧ್ಯತೆಯಿದೆ ಎಂದು ತಿಳಿದು ಬಂದಿದೆ.

ಬೆಂಗಳೂರಿನ ದುಬಾರಿ ಹೋಟೆಲ್‌ಗಳಲ್ಲಿ ಒಂದಾಗಿರುವ ತಾಜ್‌ ವೆಸ್ಟೆಂಡ್‌ನಲ್ಲಿ ಕಾಯಂ ಕೊಠಡಿಗಳನ್ನು ಹೊಂದಿರುವ ಕುಮಾರಸ್ವಾಮಿ ಅವರ ಬಗ್ಗೆ ಪ್ರತಿಪಕ್ಷ ಬಿಜೆಪಿ ಸಾಕಷ್ಟುಟೀಕೆ ಟಿಪ್ಪಣಿ ಮಾಡಿತ್ತು. ಗೃಹ ಕಚೇರಿ ‘ಕೃಷ್ಣಾ’ ಇರುವಾಗ ಹೋಟೆಲ್‌ ವಾಸ ಯಾಕೆ ಎಂದು ವ್ಯಂಗ್ಯವಾಗಿ ಪ್ರಶ್ನಿಸಿತ್ತು.

ವಾಸ್ತು ಕಾರಣಕ್ಕಾಗಿ ಮುಖ್ಯಮಂತ್ರಿಗಳಿಗಾಗಿಯೇ ಇರುವ ‘ಅನುಗ್ರಹ’ ನಿವಾಸವನ್ನು ನಿರಾಕರಿಸಿದ ಕುಮಾರಸ್ವಾಮಿ ಅವರು ಜೆ.ಪಿ.ನಗರದ ಖಾಸಗಿ ನಿವಾಸದಿಂದ ಪದೇ ಪದೇ ಓಡಾಡುವುದು ಸಂಚಾರ ದಟ್ಟಣೆಗೆ ಕಾರಣವಾಗುತ್ತದೆ ಎಂಬ ಕಾರಣಕ್ಕಾಗಿ ಹೋಟೆಲ್‌ನಲ್ಲಿ ಕೊಠಡಿ ಪಡೆದುಕೊಂಡಿದ್ದರು ಎಂದು ಜೆಡಿಎಸ್‌ ಮೂಲಗಳು ಹೇಳುತ್ತವೆ. ಹೀಗಾಗಿ ಹೋಟೆಲ್‌ನಲ್ಲೇ ವಿಶ್ರಾಂತಿಯನ್ನೂ ಪಡೆದುಕೊಳ್ಳುತ್ತಿದ್ದರು.