ಬೆಂಗಳೂರು :  ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ವಿದೇಶ ಪ್ರವಾಸದಿಂದ ಹಿಂತಿರುಗಿದ ಮಾರನೇ ದಿನ ಡಿ.18ರಂದು ಬೆಳಗಾವಿಯ ಸುವರ್ಣಸೌಧದಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಆಯೋಜಿಸಲಾಗಿದೆ.  ಈ ಸಭೆಗೆ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರನ್ನು ಆಹ್ವಾನಿಸಲಾಗಿದೆ.

ಇತ್ತೀಚೆಗೆ ನಡೆದ ಸಮನ್ವಯ ಸಮಿತಿ ಸಭೆಯ ಮಾರನೇ ದಿನವೇ (ಡಿ.8) ಬೆಂಗಳೂರಿನಲ್ಲಿ ಮುಖ್ಯ ಮಂತ್ರಿಯವರ ಉಪಸ್ಥಿತಿಯಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ನಡೆಯಬೇಕು. ಆದರೆ, ಅತೃಪ್ತ ಕಾಂಗ್ರೆಸ್ ಶಾಸಕರ ಬೇಗುದಿ ನಿಯಂತ್ರಣ ಮೀರಿ ವ್ಯಕ್ತವಾಗಬಹುದು ಎಂಬ ಕಾರಣಕ್ಕೆ ಅದನ್ನು ಮುಂದೂಡಲಾಗುತ್ತಿತ್ತು. ಇದರ ಬೆನ್ನ ಹಿಂದೆಯೇ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ವಿದೇಶ ಪ್ರವಾಸವೂ ಆಯೋಜನೆಯಾದ ಹಿನ್ನೆಲೆಯಲ್ಲಿ ಶಾಸಕಾಂಗ ಪಕ್ಷದ ಸಭೆ ನಡೆಯುವುದೇ ಮತ್ತು ಅದರಲ್ಲಿ ಕುಮಾರಸ್ವಾಮಿ ಪಾಲ್ಗೊಳ್ಳುವರೇ ಎಂಬ ಅನುಮಾನಗಳು ಮೂಡಿದ್ದವು. 

ಇದೀಗ ಈ ಅನುಮಾನ ಪರಿಹಾರವಾಗಿದ್ದು, ಶಾಸಕಾಂಗ ಪಕ್ಷದ ಸಭೆ ನಿಗದಿಯಾಗಿದೆ. ಕಾಂಗ್ರೆಸ್ ಮೂಲಗಳ ಪ್ರಕಾರ ಕುಮಾರಸ್ವಾಮಿ ಅವರಿಗೆ ಅಧಿಕೃತವಾಗಿಯೇ ಸಭೆಗೆ ಬರುವಂತೆ ಆಹ್ವಾನ ನೀಡಲಾಗಿದೆ. ಕುಮಾರಸ್ವಾಮಿ ಸಭೆಗೆ ಬರುವ ನಿರೀಕ್ಷೆಯನ್ನು ಕಾಂಗ್ರೆಸ್ ಹೊಂದಿದೆ. ಈ ಬಗ್ಗೆ ಜೆಡಿಎಸ್ ಮೂಲಗಳನ್ನು ಪ್ರಶ್ನಿಸಿದರೆ, ಕಾಂಗ್ರೆಸ್ ಆಹ್ವಾನ ನೀಡಿದರೆ ಮುಖ್ಯಮಂತ್ರಿಗಳು ಪಾಲ್ಗೊಳ್ಳುವರು ಎಂದು ಹೇಳುತ್ತವೆ.

ಅತೃಪ್ತಿ ಸ್ಫೋಟ ಸಾಧ್ಯತೆ: ಕಾಂಗ್ರೆಸ್ ಶಾಸಕರ ಬಗ್ಗೆ ಈ ಸರ್ಕಾರದಲ್ಲಿ ತಾರತಮ್ಯ ತೋರಲಾಗುತ್ತಿದೆ.  ಕಾಂಗ್ರೆಸ್ ಶಾಸಕರು ಹೇಳಿದ ಕೆಲಸಗಳಿಗಿಂತ ಜೆಡಿಎಸ್ ನಾಯಕರ ಮಾತಿಗೆ ಮನ್ನಣೆ ನೀಡಲಾಗುತ್ತಿದೆ ಎಂದು ಕಾಂಗ್ರೆಸ್ ನಲ್ಲಿ ಅಸಮಾಧಾನವಿದೆ. 

ಇದೇ ವೇಳೆ ವರ್ಗಾವಣೆ ವಿಚಾರದಲ್ಲಿ ಮುಖ್ಯಮಂತ್ರಿ ಯವರ ಸಹೋದರರೂ ಆದ ಸಚಿವ ಎ.ಡಿ. ರೇವಣ್ಣ ಅವರ ಮೂಗು ತೂರಿಸುವಿಕೆ ಬಗ್ಗೆ ಶಾಸಕರು ಮಾತ್ರವಲ್ಲ ಕಾಂಗ್ರೆಸ್ ಸಚಿವರಿಗೂ ಅಸಮಾಧಾನವಿದೆ. ಇದನ್ನು ಹೋಗಲಾಡಿಸುವ ದೃಷ್ಟಿಯಿಂದಲೇ ಶಾಸಕಾಂಗ ಪಕ್ಷದ ಸಭೆ ಆಯೋಜಿಸಲಾಗಿದೆ. ಶಾಸಕಾಂಗ ಪಕ್ಷದ ಸಭೆ ಈ ಅಸಮಾಧಾನ ಕಡಿಮೆ ಮಾಡುವುದೇ ಅಥವಾ  ಆಕ್ರೋಶವನ್ನು ಹೊರಹಾಕಲು ಶಾಸಕರಿಗೆ ಅವಕಾಶ ನೀಡುವ ಮಟ್ಟಿಗೆ ಸೀಮಿತವಾಗುವುದೇ ಎಂಬುದನ್ನು ಕಾದು ನೋಡಬೇಕು.