ಚಾಮುಂಡೇಶ್ವರಿಯಲ್ಲಿ ಹಣದ ಹೊಳೆ ಸಿದ್ಧವಾಗಿದೆ: ಎಚ್‌ಡಿಕೆ

First Published 30, Mar 2018, 7:13 AM IST
HD Kumaraswamy Slams CM Siddaramaiah
Highlights

ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಹಣದ ಹೊಳೆ ತಯಾರಾಗಿದೆ. ಜೆಡಿಎಸ್‌ ಶಾಸಕ ಜಿ.ಟಿ.ದೇವೇಗೌಡರ ವಿರುದ್ಧ ಹಣ ಹಂಚಲು ಸಿದ್ಧತೆ ನಡೆದಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿದರು.

ಮದ್ದೂರು : ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಹಣದ ಹೊಳೆ ತಯಾರಾಗಿದೆ. ಜೆಡಿಎಸ್‌ ಶಾಸಕ ಜಿ.ಟಿ.ದೇವೇಗೌಡರ ವಿರುದ್ಧ ಹಣ ಹಂಚಲು ಸಿದ್ಧತೆ ನಡೆದಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿದರು.

ಪಟ್ಟಣದಲ್ಲಿ ಗುರುವಾರ ಕುಮಾರಪರ್ವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಜಿ.ಟಿ.ದೇವೇಗೌಡರ ಜನಬಲದ ಮುಂದೆ ಸಿದ್ದರಾಮಯ್ಯನವರ ಹಣ ಬಲ ಕೊಚ್ಚಿಕೊಂಡು ಹೋಗಲಿದೆ ಎಂದು ಕಿಡಿಕಾರಿದರು.

ಸಿದ್ದರಾಮಯ್ಯ ಅವರು ನಮ್ಮ ವಿರುದ್ಧ ಕೀಳು ಮಟ್ಟದಲ್ಲಿ ಮಾತನಾಡುತ್ತಿದ್ದಾರೆ. ಜನ ಸಿಡಿದೆದ್ದಿದ್ದಾರೆ ಎನ್ನುವುದು ಅವರಿಗೆ ಗೊತ್ತಿಲ್ಲ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗೋಲ್ಲ ಅನ್ನುವುದನ್ನು ಪದೇ ಪದೆ ಸಿದ್ದರಾಮಯ್ಯ ಹೇಳುತ್ತಿದ್ದಾರೆ. ಆದರೆ, ನನ್ನನ್ನು ಸಿಎಂ ಮಾಡುವವರು ರಾಜ್ಯದ ಜನರೇ ಹೊರತು ಸಿದ್ದರಾಮಯ್ಯ ಅಲ್ಲ. ಎಲ್ಲರನ್ನೂ ಹಣ ಕೊಟ್ಟು ಜೇಬಿನಲ್ಲಿ ಇಟ್ಟುಕೊಳ್ಳಲಾಗುವುದಿಲ್ಲ ಎಂದರು.

ಕಾಂಗ್ರೆಸ್‌ ಇನ್ನೆಂದಿಗೂ ರಾಜ್ಯದಲ್ಲಿ ಅಧಿಕಾರಕ್ಕೆ ಬರುವುದಿಲ್ಲ. ಗುಪ್ತಚರ ಇಲಾಖೆಯಿಂದ ನೂರು ಬಾರಿ ಸರ್ವೆ ಮಾಡಿದರೂ ಕಾಂಗ್ರೆಸ್‌ ಅನ್ನು ಅಧಿಕಾರಕ್ಕೆ ತರುವುದು ಸಾಧ್ಯವಿಲ್ಲ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದರೂ ದಲಿತರಿಗೆ ಉಪ ಮುಖ್ಯಮಂತ್ರಿ ಸ್ಥಾನ ಕೊಡಲಿಲ್ಲ.

ಪರಮೇಶ್ವರ್‌ ಕಾಡಿಬೇಡಿ ಎಂಎಲ್ಸಿ ಆಗಿ ನನ್ನನ್ನು ಉಪಮುಖ್ಯಮಂತ್ರಿ ಮಾಡಿ ಎಂದು ಸೋನಿಯಾಗಾಂಧಿ ಬಳಿ ಹೋಗಿ ಗೋಗರೆದರು. ಆದರೆ, ಸಿದ್ದರಾಮಯ್ಯ ಮಾತ್ರ ನಾನು ಯಾರನ್ನೂ ಉಪಮುಖ್ಯಮಂತ್ರಿ ಮಾಡುವುದಿಲ್ಲ ಅಂದರು. ಅಧಿಕಾರಕ್ಕಾಗಿ ಫೆವಿಕಲ… ಹಾಕೊಂಡು ಕುಳಿತಿದ್ದೀರಲ್ಲ, ನಿಮಗೆ ನಾಚಿಕೆಯಾಗುವುದಿಲ್ಲವೇ ಎಂದು ಎಚ್‌ಡಿಕೆ ವ್ಯಂಗ್ಯವಾಡಿದರು.

loader